'ಛಲವೊಂದಿದ್ದರೆ ಸಾಕು, ಸಬಲವನ್ನು ನುಂಗಬಹುದು' ಎಂಬಾ ಮಾತಿನಂತೆ ತಾನು ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಬಿಡದೆ, ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಕೊಂಡೊಯ್ಯುವ ವ್ಯಕ್ತಿ ಇವರು. ಬಿಡುವಿಲ್ಲದ ಕಾರ್ಯಗಳ ನಡುವೆ ತನ್ನ ಪ್ರತಿಭೆಯನ್ನು ಕಳೆದುಕೊಳ್ಳಬಾರದು ಎಂಬ ಹಂಬಲವನ್ನಿಟ್ಟುಕೊಂಡವರೇ ಕಾಸರಗೋಡು ರಾಮದಾಸ್ ನಗರ, ಚಟ್ಲ ನಿವಾಸಿ ವಸಂತ ಬಲ್ಯಾಯ.
ಬಾಲ್ಯದಿಂದಲೇ ಸಣ್ಣ ಮಟ್ಟದಲ್ಲಿ ಚಿತ್ರ ಬಿಡಿಸಲು ಅರಿತಿದ್ದ ಇವರು, ತಮ್ಮ ಬಿಎ ಕನ್ನಡ ಪದವಿ ಶಿಕ್ಷಣವನ್ನು ಮುಗಿಸಿ, ತಲಶ್ಶೇರಿಯ ಖಾಸಗಿ ಕಾಲೇಜಿನಲ್ಲಿ ಕೇರಳ ಗವರ್ನಮೆಂಟ್ ಸರ್ಟಿಫಿಕೆಟ್ ಎಕ್ಸಾಮ್ ಅನ್ನುವ ಡಿಪ್ಲೊಮಾ ಕೋರ್ಸ್ ಗೆ ಸೇರಿಕೊಂಡರು. ಬ್ಯಾನರ್ ಡಿಸೈನ್ , ಫ್ಲೆಕ್ಸ್ ಡಿಸೈನ್ ಹೀಗೆ ಹತ್ತಾರು ವಿಷಯಗಳನ್ನು ಮಾಡುವ ವೃತ್ತಿಯನ್ನು ಪಡೆಯಬೇಕು ಆಶಯ ಇವರದ್ದಾಗಿತ್ತು. ಆದರೆ ಡಿಜಿಟಲಿಕರಣ ಎನ್ನುವ ವಿಷಯ ಇವರ ಈ ಆಕಾಂಕ್ಷೆಗೆ ದೊಡ್ಡ ಹೊಡೆತವನ್ನು ನೀಡಿತು.
ನಂತರದಲ್ಲಿ ಆರ್ಥಿಕ ಕಾರಣಗಳಿಗಾಗಿ ಪ್ರವೃತ್ತಿಯನ್ನು ಬದಿಗಿಡುವ ಸಂದರ್ಭ ಎದುರಾಗಿದ್ದು, ವೈದ್ಯಕೀಯ ಸಂಸ್ಥೆಗಳಲ್ಲಿ ಸ್ವಲ್ಪ ಸಮಯ ಸಣ್ಣ ಹುದ್ದೆಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡರು. ಅಲ್ಲಿಯೂ ಚಿತ್ರ ರಚನೆ ಅನ್ನುವುದು ಇವರ ಕೈಬಿಡಲಿಲ್ಲ. ತಮ್ಮ ಬಿಡುವಿನ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಇರುತಿದ್ದ ಫೋಟೋಗಳನ್ನು ನೋಡಿ ಮೆಡಿಕಲ್ ರಶೀದಿಗಳಲ್ಲಿ ಚಿತ್ರ ಬಿಡಿಸುತ್ತಿದ್ದರು. ಆ ಚಿತ್ರಗಳನ್ನು ಇಂದಿಗೂ ಭದ್ರವಾಗಿ ಸಂಗ್ರಹಿಸುತ್ತಿರುವುದೇ ಒಂದು ವಿಶೇಷ.
ಇದರೊಂದಿಗೆ ಭಾರತೀಯ ಸಂಪ್ರದಾಯದ ಕೈಮಗ್ಗ ಬಳಸಿ ಖಾದಿ ಬಟ್ಟೆ, ದಿರಿಸುಗಳನ್ನು ತಯಾರಿಸುವ ಕಲೆಯನ್ನು ಇವರು ಕರಗತ ಮಾಡಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ.
ಹೊಸ ಹೊಸ ವಿಷಯಗಳನ್ನು ಕಲಿಯುವ ಹಂಬಲ ಇವರಿಗಿತ್ತು. ಆದರೆ ವೃತ್ತಿ ಜೀವನ ಅನಿವಾರ್ಯವಾಗಿತ್ತು. ನಂತರದಲ್ಲಿ ಅಂಚೆ ಇಲಾಖೆಗೆ ಸೇರಿ, ಸುಮಾರು ವರುಷಗಳವರೆಗೆ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಹತ್ತಿರದ ಮಕ್ಕಳಿಗೆ ಹಾಗೂ ಆಸಕ್ತಿ ಹೊಂದಿದ ಮಕ್ಕಳಿಗೆ ತಮಗೆ ಸಾಧ್ಯವಾಗುವಷ್ಟು ಚಿತ್ರಕಲೆಯನ್ನು ಕಲಿಸುತ್ತಿದ್ದಾರೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮನೆಯಲ್ಲೇ ಚಿತ್ರಕಲೆ ತರಗತಿಯನ್ನು ನೀಡುತ್ತಾರೆ. ತದನಂತರ ಪೆರ್ನಡ್ಕ, ಜ್ವಾಲಾ ಟ್ಯೂಷನ್ ಕೇಂದ್ರದಲ್ಲಿಯೂ ತರಬೇತಿ ನೀಡುತ್ತಿದ್ದಾರೆ.
ಹಲವೆಡೆಗಳಲ್ಲಿ ಪ್ರೋತ್ಸಾಹಕ್ಕಿಂತ ನಿರುತ್ಸಾಹಗೊಳಿಸುವರೇ ಹೆಚ್ಚಿರುವುದು. ಇಂತಹ ಕಲೆಗಳಿಗೆ ಪ್ರೋತ್ಸಾಹ ಹಾಗೂ ಆಸಕ್ತಿ ಅತ್ಯಗತ್ಯ. ಆಸಕ್ತಿ ಹಾಗೂ ಪ್ರೋತ್ಸಾಹವೊಂದಿದ್ದರೆ ಸಾಕು, ಏನನ್ನು ಬೇಕಾದರೂ ಸಾಧಿಸಬಲ್ಲೆ ಎನ್ನುವ ಛಲ ಲಭಿಸುತ್ತದೆ. ತಮ್ಮ ಬಿಡುವಿಲ್ಲದ ಸಮಯದಲ್ಲೂ ವೃತ್ತಿಯ ನಡುವೆ ಬಿಡುವು ಮಾಡಿಕೊಂಡು ಮಕ್ಕಳಿಗೆ ಚಿತ್ರ ಪಾಠ ಹೇಳಿಕೊಡಲು ಕಾರಣವಾಗುವುದು ಆ ಕಲೆಯ ಮೇಲಿರುವ ಆಸಕ್ತಿಯಿಂದ ಎಂದು ವಸಂತ ಹೇಳುತ್ತಾರೆ.
ಆಧುನಿಕತೆ ಹೊಂದಾಣಿಸಿಕೊಂಡು ಕಲರ್ ಪೈಂಟಿಂಗ್, ಪೋರ್ಟ್ರೈಟ್ ಮೇಕಿಂಗ್, ಆಯಿಲ್ ಪೈಂಟಿಂಗ್, ವಾಲ್ ಪೈಟಿಂಗ್, ಬ್ಯಾನರ್ ಡಿಸೈನ್, ಬಾಲ್ ಪೆನ್ ಆರ್ಟ್ ಹೀಗೆ ಹಲವಾರು ವಿಧದ ಚಿತ್ರಗಳನ್ನು ಇವರು ರಚಿಸುತ್ತಾರೆ. ಹಳೆ ಸಿನಿಮಾದ ನಾಯಕರಾದ ವಿಷ್ಣುವರ್ಧನ್, ರಜನೀಕಾಂತ್ , ಫುಟ್ಬಾಲ್ ಪ್ಲೇಯರ್ ಐ.ಎಂ ವಿಜಯನ್, ಎಪಿಜೆ ಅಬ್ದುಲ್ ಕಲಾಂ, ಸುಬ್ಬಲಕ್ಷ್ಮಿ, ಸುಭಾಷ್ ಚಂದ್ರಬೋಸ್, ರವೀಂದ್ರನಾಥ್ ಠಾಗೋರ್ ಮುಂತಾದವರ ಚಿತ್ರಗಳನ್ನು ಇವರು ಮಾಡಿದ್ದಾರೆ.
ಭಾರತೀಯ ಪೋಸ್ಟಲ್ ಎಂಪ್ಲೋಯೀಸ್ ಫೆಡರೇಶನ್ (ಬಿ.ಪಿ.ಇ.ಎಫ್)ನ ಸಕ್ರಿಯ ಸದಸ್ಯರಾಗಿದ್ದಾರೆ. ಸುಮಾರು 10ವರ್ಷಕ್ಕೂ ಅಧಿಕ ಕಾಲ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಿರಿಬಾಗಿಲು ಅಂಚೆ ಕಚೇರಿಯಲ್ಲಿ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ತರ್ ಆಗಿ ಕಾರ್ಯ ನಿರ್ವಹಿಸಿ, ನಿವೃತ್ತಿ ಜೀವನದ ಹಂತದಲ್ಲಿರುವ ಇವರಿಗೆ ಮುಂದೆ ಪ್ರವೃತ್ತಿಯನ್ನು ವೃತ್ತಿಯಾಗಿಸಬೇಕು ಅನ್ನುವ ಹಂಬಲವಿದೆ. ಸದಾ ಅವಕಾಶವನ್ನು ಬಯಸುವ ಇವರ ಜೀವನ ಸುಖಮಯವಾಗಿರಲಿ ಎಂಬುದು ನಮ್ಮ ಆಶಯ.
ತರಗತಿ ಪಡೆಯಲಿಚ್ಚಿಸುವವರು :97448 03086 ಸಂಖ್ಯೆಗೆ ಕರೆಮಾಡಬಹುದು.
ಬರಹ:
ಜಯಶ್ರೀ ಶ್ರೀನಾಥ್
ಪಾಯಿಚಾಲ್
0 Comments