ಇಸ್ರೋ ಹಾಗೂ ಐಎಎಸ್‌ಸಿ ಸಂಸ್ಥೆಗಳ ಸಂಶೋಧಕರು ಚಂದ್ರನ ಅಂಗಳದಲ್ಲಿರುವ ಮಣ್ಣು, ಕೆಲವು ಬ್ಯಾಕ್ಟೀರಿಯಾ ಹಾಗೂ ಸುಲಭವಾಗಿ ಲಭ್ಯವಾಗುವ ವಸ್ತುಗಳನ್ನು ಬಳಸಿ ಇಟ್ಟಿಗೆ ನಿರ್ಮಿಸುವ ಸುಸ್ಥಿರ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಭೂಮಿಯ ಮೇಲಿರುವ ಸಂಪನ್ಮೂಲಗಳು ದಿನೇ ದಿನೇ ಅತಿ ವೇಗವಾಗಿ ಕಡಿಮೆಯಾಗುತ್ತಿರುವ ಕಾರಣದಿಂದ ವಿಜ್ಞಾನಿಗಳು ಕಳೆದ ಒಂದು ಶತಮಾನದಿಂದ ಚಂದ್ರನಂಗಳ ಮತ್ತು ಇತರ ಗ್ರಹಗಳ ಮೇಲೆ ವಾಸಿಸಲು ಸಾಧ್ಯವಾದರೆ ಎಂಬ ಕಾರಣದಿಂದ ಅನೇಕ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆದರೆ ಭೂಮಿಯಿಂದ ಒಂದು ಪೌಂಡ್ ತೂಕದ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಾದರೆ ಸುಮಾರು 7.5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದರೆ ಸಂಶೋಧಕರಾದ ಐಐಎಸ್ಸಿ ಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಲೋಕ್ ಕುಮಾರ್ ಅವರ ಪ್ರಕಾರ ಇವರು ಸಂಶೋಧನೆಯಲ್ಲಿ ಕಡಿಮೆ ಖರ್ಚು ತಗಲುತ್ತದೆ. ಇವರ ಅಧ್ಯಯನದ ಕುರಿತಾದ ವರದಿಯು ಸೆರಾಮಿಕ್ಸ್ ಇಂಟರ್ನ್ಯಾಷನಲ್ ನಲ್ಲಿ ಪ್ರಕಟವಾಗಿದೆ.
ಐಐಎಸ್ಸಿಯ ಪ್ರಯೋಗಾಲಯದಲ್ಲಿ ಈ ಇಟ್ಟಿಗೆ ತಯಾರಿಕೆ ಮಾಡುವಾಗ ಮೊದಲು ಬ್ಯಾಕ್ಟೀರಿಯವನ್ನು ಚಂದ್ರನ ಮಣ್ಣಿಗೆ ಹೋಲಿಕೆಯಾಗುವ ಮಣ್ಣಿನ ಜೊತೆಗೆ ಮಿಶ್ರಣ ಮಾಡಲಾಗಿದೆ. ನಂತರ ಇದಕ್ಕೆ ಬೇಕಾಗುವ ಅಗತ್ಯ ಪ್ರಮಾಣದಲ್ಲಿ ಯೂರಿಯಾ ಮತ್ತು ಕ್ಯಾಲ್ಸಿಯಂ ಜೊತೆಗೇ ಗೋರಿಕಾಯಿಯ ಅಂಟನ್ನು ಸೇರಿಸಲಾಗುತ್ತದೆ. ಈ ಮಿಶ್ರಣವನ್ನು ಕೆಲವು ದಿನಗಳ ಕಾಲ ಹಾಗೆ ಇಟ್ಟಾಗ ಬಲವಾದ ಇಟ್ಟಿಗೆ ಮಾದರಿ ಸಿದ್ಧವಾಗುತ್ತದೆ. ಈ ಇಟ್ಟಿಗೆಯನ್ನು ಲೇತ್ ಯಂತ್ರ ಬಳಸುವ ಮೂಲಕ ನಮಗೆ ಬೇಕಾದ ರೂಪ ನೀಡಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
0 Comments