ಬಿಐಎಎಲ್ ಸಂಸ್ಥೆಯ ಅಂತರ್ಜಾಲದಲ್ಲಿ ಇಲ್ಲಿಯವರೆಗೆ ಕನ್ನಡ ಭಾಷೆಯಲ್ಲಿ ಯಾವುದೇ ಸೇವಾ ಲಭ್ಯತೆಗಳಿರಲಿಲ್ಲ. ಕನ್ನಡ ಭಾಷೆಯ ಬಗೆಗೆ ನಿರ್ಲಕ್ಷ್ಯ ತೋರಿದ್ದ ಸಂಸ್ಥೆ ಇದೀಗ ತನ್ನ ವೆಬ್ಸೈಟ್ ಕನ್ನಡ ಭಾಷೆಯಲ್ಲೂ ಮಾಹಿತಿ ದೊರೆಯುವಂತೆ ಮಾಡಿ ಅಲ್ಲಿ ಕನ್ನಡ ಭಾಷೆಗೂ ಪ್ರಾಶಸ್ತ್ಯ ನೀಡಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸುವುದರಿಂದ ವಿಮಾನಯಾನ ಮಾಡುವ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶವನ್ನು ಬಿಐಎಎಲ್ ಹೊಂದಿದೆ. ಅದರಂತೆ ವಿಮಾನ ಹಾರಾಟದ ಮಾಹಿತಿ, ವಿಮಾನ ನಿರ್ಗಮನ, ಆಗಮನ ಮತ್ತು ವಿಳಂಬದ ಕುರಿತಾದ ಮಾಹಿತಿಗಳನ್ನು ಕನ್ನಡ ಭಾಷೆಯಲ್ಲಿಯೇ ನೀಡಲಾಗುತ್ತದೆ. ಇದರ ಜೊತೆಯಲ್ಲಿ ವಿಮಾನಗಳನ್ನು ಕಾಯ್ದಿರಿಸಲು ವಿಮಾನ ನಿಲ್ದಾಣಕ್ಕೆ ತೆರಳಲು ಅಥವಾ ಅಲ್ಲಿಂದ ಬರಲು ಸಾರಿಗೆ ಆಯ್ಕೆ, ಭದ್ರತಾ ಕಾರ್ಯವಿಧಾನ, ಬ್ಯಾಗೇಜ್ ನಿಯಮಗಳು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಕನ್ನಡದಲ್ಲಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಬಿಐಎಎಲ್ ನ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರಾರ್ ಸ್ಥಳೀಯ ಭಾಷೆಯಲ್ಲಿ ವಿಮಾನ ನಿಲ್ದಾಣದ ಮಾಹಿತಿ ನೀಡಲು ಅಂತರ್ಜಾಲದಲ್ಲಿ ಕನ್ನಡ ಭಾಷಾ ಆಯ್ಕೆಯನ್ನು ಪರಿಚಯಿಸಲಾಗಿದೆ ಆ ಮೂಲಕ ನಮ್ಮ ಭಾಷಾ ಪರಂಪರೆಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯ ಪರಿಚಯದಿಂದ ವಿಮಾನಯಾನ ಮಾಡುವ ಪ್ರಯಾಣಿಕರು ಮತ್ತಷ್ಟು ಉತ್ತಮವಾಗಿ ವಿಮಾನ ಸೇವೆಗಳನ್ನು ಪಡೆಯಲು ಸಾಧ್ಯವಾಗಲಿದೆ. ಈಗಾಗಲೇ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಅಳವಡಿಸಿ ಮಾಹಿತಿ ಪ್ರದರ್ಶಿಸಲಾಗುತ್ತಿದೆ. ಇದೀಗ ಅಂತರ್ಜಾಲದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿ ಕನ್ನಡ ಭಾಷೆಯಲ್ಲಿ ವಿಮಾನಯಾನ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹರಿ ಮಾರಾರ್ ಹೇಳಿದ್ದಾರೆ.

0 Comments