ದೇಶದಲ್ಲೇ ಎಸ್‌ಸಿ ಒಳ ಮೀಸಲಾತಿ ಜಾರಿಗೆ ತಂದ ಮೊದಲ ರಾಜ್ಯ ತೆಲಂಗಾಣ!!

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 135ನೇ ಜನ್ಮದಿನದಂದು ಪರಿಶಿಷ್ಟ ಜಾತಿ (ಎಸ್ ಸಿ) ಒಳ ಮೀಸಲಾತಿಯನ್ನು ತೆಲಂಗಾಣ ಸರ್ಕಾರವು ಜಾರಿಗೊಳಿಸಿದೆ. ಈ ಎಸ್.ಸಿ ಒಳ  ಮೀಸಲಾತಿಯನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ತೆಲಂಗಾಣ ಪಾತ್ರವಾಗಿದೆ. 
ಈ ಬಗ್ಗೆ ತೆಲಂಗಾಣ ಸರ್ಕಾರವು ಸೋಮವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಒಳ ಮೀಸಲಾತಿ ಕುರಿತು ವರದಿ ನೀಡಲು ತೆಲಂಗಾಣ ಸರ್ಕಾರವು ಈ ಹಿಂದೆ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಶಮೀಮ್ ಅಕ್ತರ್ ನೇತೃತ್ವದಲ್ಲಿ ಆಯೋಗ ಒಂದನ್ನು ರಚಿಸಿತ್ತು. ಆಯೋಗವು, ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳಲ್ಲಿ 59 ಉಪಜಾತಿಗಳನ್ನು ಗುರುತಿಸಿತ್ತು. ಅಸ್ತಿತ್ವದಲ್ಲಿರುವ ಶೇಕಡ 15ರಷ್ಟು ಮೀಸಲಾತಿಯೊಳಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಅವುಗಳನ್ನು 1, 2 ಮತ್ತು 3 ಎಂದು ವರ್ಗೀಕರಿಸಲು ಶಿಫಾರಸು ಮಾಡಿತ್ತು. 

ಒಳ ಮೀಸಲಾತಿ ಜಾರಿಗೆ ಬಂದ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಮೀಸಲಾತಿಯಲ್ಲಿ ಬದಲಾವಣೆಯಾಗಿದೆ. ಆಯೋಗದ ವರದಿಯ ಪ್ರಕಾರ, ಸಾಮಾಜಿಕ, ಮತ್ತು ಶೈಕ್ಷಣಿಕವಾಗಿ ಹಿಂದುಳಿದ 15 ಎಸ್ ಸಿ ಉಪಜಾತಿಗಳನ್ನು ಒಳಗೊಂಡಿರುವ ಗ್ರೂಪ್-1ಕ್ಕೆ ಶೇಕಡ 1 ಮೀಸಲಾತಿ ನಿಗದಿ ಮಾಡಲಾಗಿದೆ. ಮಧ್ಯಮ ಪ್ರಯೋಜನ ಪಡೆದ 18 ಉಪಜಾತಿಗಳನ್ನು ಗ್ರೂಪ್-2ಕ್ಕೆ ಸೇರಿಸಲಾಗಿದ್ದು, ಅವುಗಳಿಗೆ ಶೇಕಡ 9 ರಷ್ಟು ಕೋಟಾ ಒದಗಿಸಲಾಗಿದೆ. ಹೆಚ್ಚಿನ ಪ್ರಯೋಜನ ಪಡೆದ 26 ಉಪಜಾತಿಗಳನ್ನು ಗ್ರೂಪ್-3ಕ್ಕೆ ಸೇರಿಸಿ, ಅವುಗಳಿಗೆ ಶೇಕಡ 5 ಮೀಸಲಾತಿ ನೀಡಲಾಗಿದೆ.

Post a Comment

0 Comments