ಪ್ರವಾಸಿ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: 27 ಪ್ರವಾಸಿಗರು ಬಲಿ..!!

ಕಾಶ್ಮೀರವೆಂಬುದು ಸುಂದರ ಪ್ರವಾಸಿ ತಾಣ. ಭೂಲೋಕದ ಸ್ವರ್ಗವೆಂದೆ ಖ್ಯಾತಿಯಾಗಿರುವ ಕಾಶ್ಮೀರದಲ್ಲಿ ಜನಜೀವನ ತುಂಬಾ ಭಯಭೀತ ವಾಗಿರುತ್ತದೆ. ಇಲ್ಲಿ ಉಗ್ರರ ಅಟ್ಟಹಾಸ ಆಗಾಗ ನಡೆಯುತ್ತಲೇ ಇದ್ದುದರಿಂದ ಜನರಿಗೆ ನೆಮ್ಮದಿ ಎಂಬುದು ಇರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರವು ಶಾಂತವಾಗಿ ಸಹಜ ಸ್ಥಿತಿಗೆ ಮರಳಿತ್ತು. ಭಾರತೀಯರು ಪ್ರವಾಸಕ್ಕಾಗಿ ತುಂಬಾ ಆಸೆ ಕನಸುಗಳನ್ನು ಹೊತ್ತು ಕಾಶ್ಮೀರದ ಸುಂದರ ಕಣಿವೆ, ಹಿಮ ಪರ್ವತಗಳಿಗೆ, ಹಸಿರು ತುಂಬಿಹ ಸೊಬಗಿನ ಮಡಿಲಿಗೆ ಹೋಗುವುದು ಸರ್ವೇಸಾಮಾನ್ಯವಾಗಿದೆ. ಆದರೆ ನಿನ್ನೆಯ ದಿನ ಇಂತಹ ಪ್ರವಾಸಿಗರ ಪಾಲಿಗೆ ಕಾಶ್ಮೀರವ ಕರಾಳ ದಿನವಾಗಿ ಹೋಗಿತ್ತು. ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರ ಸಹಿತ 26 ಜನ ಸಾವನ್ನಪ್ಪಿರುವುದು ಭಾರತದ ಪಾಲಿಗೆ ಎಂದು ಅರಗಿಸಿಕೊಳ್ಳಲಾಗದ ನೋವಿನ ಸಂಗತಿಯಾಗಿದೆ.
ಜಮ್ಮು-ಕಾಶ್ಮೀರದ ಶ್ರೀನಗರದಿಂದ ಸುಮಾರು 90 ಕಿಲೋಮೀಟರ್ ದೂರದ ಹಾಗೂ ಪಹಲ್ಗಾವ್ನಿಂದ 7 ಕಿಲೋಮೀಟರ್ ದೂರದಲ್ಲಿರುವ, "ಮಿನಿ ಸ್ವಿಟ್ಜರ್ಲ್ಯಾಂಡ್" ಎಂದೇ ಕರೆಯಲ್ಪಡುವ ಬೈಸರನ್ ಹುಲ್ಲುಗಾವಲಿನಲ್ಲಿ ಉಗ್ರರು ಮಂಗಳವಾರ ಮಧ್ಯಾಹ್ನ 2.30ರ ಹೊತ್ತಿಗೆ ದಾಳಿ ನಡೆಸಿದ್ದಾರೆ. ಈ ಹುಲ್ಲುಗಾವಲಿನಲ್ಲಿ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುತ್ತಾ ಇರುವಂತಹ ಸಂದರ್ಭದಲ್ಲಿ ಸುಮಾರು ಮೂರರಿಂದ ನಾಲ್ಕು ಉಗ್ರರು ಕ್ಷಣಾರ್ಧದಲ್ಲಿ ದಾಳಿ ನಡೆಸಿದ್ದಾರೆ. ಅದರಲ್ಲೂ ಪ್ರವಾಸಕ್ಕಾಗಿ ತೆರಳಿದಂತಹ ಜನರಲ್ಲಿ ಧರ್ಮದ ಹೆಸರು ಕೇಳಿ ದಾಳಿ ನಡೆಸಿರುವುದು ತಿಳಿದು ಬಂದಿದೆ. ಮುಸ್ಲಿಂ ಧರ್ಮದವರನ್ ಅಲ್ಲದ ಪ್ರವಾಸಿಗರನ್ನು ಗುಂಡಿಟ್ಟು ಉಗ್ರರು ಹತ್ಯೆಗೈದಿದ್ದಾರೆ. ಇಬ್ಬರು ಕನ್ನಡಿಗರು, ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು ಸೇರಿ ಒಟ್ಟು 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. 

ಗಾಯಗೊಂಡ ಪ್ರವಾಸಿಗರನ್ನು ಸ್ಥಳಿಯ ಜನರು ತಮ್ಮ ಕುದುರೆಗಳ ಮೂಲಕ ಆಸ್ಪತ್ರೆಗೆ ಕರೆತಂದರು. ತದನಂತರ ಸೇನಾ ಹೆಲಿಕಾಪ್ಟರ್ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆ ತರುವ ಕಾರ್ಯಾಚರಣೆಯನ್ನು ಮಾಡಿತ್ತು. ಕೇಂದ್ರ ಸರಕಾರವು ಕಾಶ್ಮೀರದ ಪ್ರದೇಶಗಳಲ್ಲಿ ಸೇನಾ ನಿಯೋಜನೆ ಮಾಡುವ ಮೂಲಕ ಬಿಗಿ ಭದ್ರತೆಯನ್ನು ಒದಗಿಸಿದೆ. 

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ಆರ್ಟಿಕಲ್ ರದ್ದಾದ ಬಳಿಕ ಹುಟ್ಟಿದಂತಹ "ದಿ ರೆಸಿಸ್ಟನ್ಸ್ ಫ್ರಂಟ್ (ಟಿ ಆರ್ ಎಫ್) ಸಂಘಟನೆ ನಡೆಸಿದ ದಾಳಿಯಿದಾಗಿದೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಈ ಉಗ್ರರ ದಾಳಿಯಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ.

Post a Comment

0 Comments