ಕೆಲ ದಿನಗಳಿಂದ ಸುದ್ದಿ ಚಾಲತಾಣಗಳಲ್ಲಿ ಯುಪಿಐ ಮೂಲಕ ಹಣ ಪಾವತಿಸುವುದಕ್ಕೂ ಜಿಎಸ್ಟಿ ಅಥವಾ ತೆರಿಗೆ ವಿಧಿಸುವ ಬಗ್ಗೆ ಕೆಲವೊಂದು ವದಂತಿಗಳು ಹರಡುತ್ತಿದ್ದವು. ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರೂ ಹಣ ವರ್ಗಾವಣೆಗಾಗಿ ಅಥವಾ ಹಣ ಪಾವತಿಗಾಗಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮೊದಲಾದ ಆಪ್ ಗಳನ್ನು ಬಳಸುತ್ತಿದ್ದು ಇದರಲ್ಲಿನ ಪ್ರತಿ ವಹಿವಾಟಿಗೂ ತೆರಿಗೆ ಪಾವತಿಸಬೇಕೇ ಎಂಬ ಆತಂಕ ಜನಸಾಮಾನ್ಯರನ್ನು ಕಾಡುತ್ತಿತ್ತು. "ಯುಪಿಐ ಮೂಲಕ ನಡೆಯುವ 2000ರೂ ಗಿಂತ ಅಧಿಕ ಮೊತ್ತದ ವ್ಯವಹಾರಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದು"ಎಂಬ ವರದಿಗಳನ್ನು ಕೇಂದ್ರ ಹಣಕಾಸು ಸಚಿವಾಲಯವು ತಳ್ಳಿ ಹಾಕಿದ್ದು, ಇದು ಸುಳ್ಳು ಸುದ್ದಿಯಾಗಿದ್ದು, ಈ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.
ವ್ಯಾಪಾರಿ ರಿಯಾಯಿತಿ ದರ (ಎಂಡಿಆರ್) ಮೇಲೆ ಮಾತ್ರ ಜಿಎಸ್ಟಿ ವಿಧಿಸಲಾಗುತ್ತಿದೆ.2020ರ ಜನವರಿ ತಿಂಗಳಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ ವ್ಯಕ್ತಿ ಹಾಗೂ ವ್ಯಾಪಾರಿಗಳ ನಡುವೆ ನಡೆಯುವ ವಿನಿಮಯದ ಮೇಲಿನ ತೆರಿಗೆಯನ್ನು ತೆಗೆದುಹಾಕಿದ್ದು ಎಂದು ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಆನ್ಲೈನ್ ಪಾವತಿ ವ್ಯವಸ್ಥೆಯ ಬಳಕೆಯಲ್ಲಿ ಹೆಚ್ಚಳವಾಗಿದೆ. 2019-20 ಅವಧಿಯಲ್ಲಿ ಯುಪಿಐ ಮೂಲಕ 21.3 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ನಡೆದಿದ್ದು, 2025 ಮಾರ್ಚ್ ವೇಳೆ ಇದು 260.56 ಲಕ್ಷ ಕೋಟಿ ತಲುಪಿದೆ.
0 Comments