2025-26ನೇ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲೆಗಳಲ್ಲಿನ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆಯ ಆಯುಕ್ತರಾದ ತ್ರಿಲೋಕ ಚಂದ್ರ ಸುತ್ತೋಲೆಯನ್ನು ಹೊರಡಿಸಿದ್ದು, ಸಹ ಶಿಕ್ಷಣವನ್ನು ಹೊಂದಿರುವ ಎಲ್ಲಾ ಶಾಲೆಗಳಲ್ಲಿಯೂ ಒಟ್ಟು ಪ್ರವೇಶಾತಿಯಲ್ಲಿ ಶೇಕಡಾ 50 ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಮೀಸಲಿಡಬೇಕು ಎಂದು ಹೇಳಿದರು.
ಒಂದು ವೇಳೆ ಯಾವುದಾದರೂ ಶಾಲೆಯಲ್ಲಿ ಮೀಸಲಾತಿಯನ್ವಯ ಶೇಕಡಾ 50ರಷ್ಟು ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಹೆಣ್ಣು ಮಕ್ಕಳು ಸಿಗದೇ ಹೋದಲ್ಲಿ ಮಾತ್ರ ಮೀಸಲಾತಿ ನಿಯಮದಂತೆ ಗಂಡು ಮಕ್ಕಳಿಗೆ ಪ್ರವೇಶ ನೀಡಲು ಸೂಚನೆ ನೀಡಿದ್ದಾರೆ.
ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಯನ್ನಾಗಲಿ ಅಥವಾ ಅವರ ಪರೀಕ್ಷಿಸುವುದು ಅಥವಾ ಸಂದರ್ಶನ ನಡೆಸುವುದು ಕಾನೂನು ಬಾಹಿರವಾಗಿರುತ್ತದೆ. ಪ್ರತಿ ಶಾಲೆಯಲ್ಲಿಯೂ ಶಾಲಾ ಪ್ರವೇಶ ಶುಲ್ಕದ ಮೊತ್ತವನ್ನು ಸಾರ್ವಜನಿಕ ಮಾಹಿತಿಗಾಗಿ ಶಾಲಾ ನೋಟಿಸ್ ಬೋರ್ಡ್ ಅಥವಾ ಜಾಲತಾಣ ಅಥವಾ ಎಸ್ಎಟಿಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಶಾಲೆಯ ಮಾಹಿತಿ ಪುಸ್ತಕದಲ್ಲೂ ಪ್ರವೇಶಾತಿ ಶುಲ್ಕದ ಕುರಿತಾದ ಎಲ್ಲಾ ಮಾಹಿತಿಗಳನ್ನು ಮುದ್ರಿಸಬೇಕೆಂದು ಸೂಚಿಸಲಾಗಿದೆ. ಅಷ್ಟೇ ಅಲ್ಲದೆ ಈ ಪ್ರವೇಶ ಶುಲ್ಕ ಹೊರತುಪಡಿಸಿ ಯಾವುದೇ ರೀತಿಯ ಕ್ಯಾಪಿಟೇಶನ್ ಶುಲ್ಕ ವಸೂಲಿ ಮಾಡುವಂತಿಲ್ಲ. ಈ ರೀತಿ ನಿಯಮಗಳನ್ನು ಉಲ್ಲಂಘಿಸಿದರೆ, ದಂಡ ವಿಧಿಸುವ ಅಥವಾ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ.
ಶಾಲಾ ಪ್ರವೇಶ ಪ್ರಕ್ರಿಯೆಯು ಎಲ್ಲರಿಗೂ ಮುಕ್ತ ಹಾಗೂ ಪಾರದರ್ಶಕವಾಗಿರಬೇಕು. ಹಾಗೆಯೇ ಪ್ರತಿ ಶಾಲೆಯಲ್ಲಿಯೂ ತರಗತಿವಾರು ಪ್ರವೇಶಾತಿ ಕುರಿತು ವೇಳಾಪಟ್ಟಿ, ಪ್ರತಿ ಶಾಲೆಯೂ ತಮ್ಮ ಶಾಲೆಯಲ್ಲಿ ಲಭ್ಯವಿರುವ ಸೀಟುಗಳು ಮತ್ತು ಪ್ರವೇಶ ಪ್ರಕ್ರಿಯೆಯ ಕುರಿತು ವೇಳಾಪಟ್ಟಿಯನ್ನು ತರಗತಿ ವಾರು ನಿಗದಿಪಡಿಸಿ ಶುಲ್ಕ ಮಾಹಿತಿ ಸಹಿತ ಶಾಲಾ ಪ್ರಕಟಣಾ ಫಲಕದಲ್ಲಿ ಶಾಲಾ ಮುಖ್ಯಸ್ಥರು ಪ್ರಕಟಿಸಬೇಕು. ಹಾಗೆಯೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿರುವ ಮೀಸಲಾತಿಯನ್ನು ಕಡ್ಡಾಯವಾಗಿ ಶಾಲೆಗಳು ಪಾಲಿಸಬೇಕು ಎಂದು ತಿಳಿಸಲಾಗಿದೆ.
ವಿಶೇಷ ಚೇತನ ಮಕ್ಕಳಿಗೆ ನಿಯಮಾನುಸಾರ ದಾಖಲಾತಿಗೆ ಅವಕಾಶವನ್ನು ಕಲ್ಪಿಸಬೇಕು. ಎಸ್ಸಿ ಎಸ್ಟಿ ಮಂಡಳಿಗಳಿಂದ ನಡೆಯುತ್ತಿರುವ ಅನುದಾನಿತ ಶಾಲೆಗಳಲ್ಲಿ ಶೇಕಡ 50ರಷ್ಟು ಸೀಟುಗಳನ್ನು ಆ ಸಮುದಾಯದ ಮಕ್ಕಳಿಗೆ ನೀಡಬೇಕು. ಯಾವುದೇ ಶಾಲೆಯ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುವುದಾಗಿ ಸುತ್ತೋಲೆಯಲ್ಲಿ ಆಯುಕ್ತರು ಎಚ್ಚರಿಕೆಯನ್ನು ನೀಡಿದ್ದಾರೆ.
0 Comments