ಈ ಕುರಿತು ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ಅವರು ಸೂಚನೆ ನೀಡಿದ್ದಾರೆ.
ಹೆತ್ತವರನ್ನು ಈ ರೀತಿ ಅನಾಥವಾಗಿ ಬಿಟ್ಟು ಹೋಗುವ ಮಕ್ಕಳ ವಿರುದ್ಧ 'ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007' ರಾ ಅಡಿಯಲ್ಲಿ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು ಸಂಬಂಧಪಟ್ಟಂತಹ ಕಂದಾಯ ವಿಭಾಗದ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿ ಮಕ್ಕಳಿಗೆ ವರ್ಗಾವಣೆ ಯಾಗಿರುವ ಆಸ್ತಿಗೆ ಸಂಬಂಧಿಸಿದ ವಿಲ್, ದಾನ ಪತ್ರಗಳನ್ನು ರದ್ದು ಪಡಿಸಲು ಕ್ರಮ ವಹಿಸಬೇಕೆಂದು ಸೂಚಿಸಲಾಗಿದೆ.
ಹೆತ್ತವರಿಂದ ಆಸ್ತಿಯನ್ನು ಬರೆಸಿಕೊಂಡ ಬಳಿಕ ಅವರಿಗೆ ಏನಾದರೂ ವಯೋ ಸಹಜ ಅನಾರೋಗ್ಯ ಅಥವಾ ಆರ್ಥಿಕ ಸಂಕಷ್ಟದಿಂದ ನೋಡಿಕೊಳ್ಳಲಾಗದೆ, ಇನ್ನು ಕೆಲವರು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಊಟ, ವಸತಿ, ಆಶ್ರಯ ಸಿಗುತ್ತದೆ ಎಂಬ ಕಾರಣಕ್ಕೆ ಹೆತ್ತವರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಏನೇ ಕಾರಣಕ್ಕೆ ಆಗಿದ್ದರೂ ಹೆತ್ತವರನ್ನು ಈ ರೀತಿ ಬಿಟ್ಟು ಹೋಗುವುದು ಮಹಾ ಅಪರಾಧ. ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯೊಂದರಲ್ಲೇ 150ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ಬಿಟ್ಟು ಹೋಗಿರುವ ಪ್ರಕರಣ ವರದಿಯಾಗಿದೆ. ರಾಜ್ಯಾದ್ಯಂತ ಇತರ ವೈದ್ಯಕೀಯ ಸಂಸ್ಥೆಗಳಲ್ಲಿ ಇಂಥಹ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ. ಆದ್ದರಿಂದ ವಯಸ್ಸಾದ ಕಾಲದಲ್ಲಿ ತಂದೆ-ತಾಯಿ ಅಥವಾ ಹಿರಿಯರನ್ನು ಅನಾಥರನ್ನಾಗಿ ಮಾಡುತ್ತಿರುವ ಮಕ್ಕಳಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಲಾಗಿದ್ದು ಅಂತಹ ಮಕ್ಕಳು ಪೋಷಕರಿಂದ ವರ್ಗಾವಣೆ ಮಾಡಿಕೊಂಡಿರುವ ಆಸ್ತಿ, ವಿಲ್ ರದ್ದು ಪಡಿಸುವಂತೆ ಆಯಾ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಲು ವೈದ್ಯಕೀಯ ಇಲಾಖೆ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
0 Comments