ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದು ಬರೋಬ್ಬರಿ 75 ಕೋಟಿ ರೂಪಾಯಿ ಮೌಲ್ಯದ 37.87 ಕೆಜಿ ತೂಕವಿರುವ ಎಂಡಿಎಂಎ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ವಿಮಾನದ ಮೂಲಕ ಮಾದಕ ವಸ್ತುಗಳನ್ನು ಸಾಗಿಸಿ ಮಾರಾಟ ಮಾಡುತ್ತಿದ್ದ ಈ ಮಹಿಳೆಯರು ಕೆಲ ವರ್ಷಗಳಿಂದ ನಕಲಿ ವೀಸಾ ಪಾಸ್ಪೋರ್ಟ್ ದೊಂದಿಗೆ ಭಾರತದಲ್ಲಿ ನೆಲೆಸಿದ್ದಾರೆ. ಏರ್ಪೋರ್ಟ್ ಭದ್ರತಾ ವೈಫಲ್ಯದ ಕಾರಣ ಇವರು ಪ್ರತಿ ಬಾರಿಯೂ ವಿಮಾನದ ಮೂಲಕವೇ ಡ್ರಗ್ಸ್ ಸಾಗಿಸುತ್ತಿದ್ದರು. ವಿಮಾನದ ಮೂಲಕ ಭಾರಿ ಪ್ರಮಾಣದ ಮಾದಕ ವಸ್ತು ಸಾಗಾಟ ಮಾಡಲಾಗುತ್ತದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಮಂಗಳೂರು ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಅತಿ ದೊಡ್ಡ ಪ್ರಮಾಣದ ಅಮಲು ಪದಾರ್ಥವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಸಿಟಿ ಪೊಲೀಸರ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.
75 ಕೋಟಿ ರೂಪಾಯಿಯ ಅಮಲು ಪದಾರ್ಥ ಈ ಮಹಿಳೆಯರಿಬ್ಬರ ಕೈಯಲ್ಲಿ ಇತ್ತು ಎಂದಾದರೆ ದೇಶಾದ್ಯಂತ ಈ ವಿದೇಶಿಗರ ಡ್ರಗ್ಸ್ಮಾಫಿಯ ಜಾಲ ಎಷ್ಟು ಗಾಢವಾಗಿ ಹರಡಿರಬಹುದು ಎಂಬುದನ್ನು ಊಹಿಸಲು ಅಸಾಧ್ಯ. ನಮ್ಮ ದೇಶದಲ್ಲಿ ಇಂದು ಅದೆಷ್ಟೋ ಯುವಜನರು ಈ ಡ್ರಗ್ಸ್ ಮಾಯಾಜಾಲಕ್ಕೆ ಸಿಲುಕಿ ತಮ್ಮ ಜೀವನವನ್ನೇ ಹಾಳುಗೆಡವುತ್ತಿದ್ದಾರೆ. ಆದ್ದರಿಂದ ದೇಶದ ಕಣಕಣದಲ್ಲೂ ಹರಡಿರುವ ಈ ಡ್ರಗ್ಸ್ ಜಾಲವನ್ನು ಬುಡ ಸಮೇತ ಕಿತ್ತು ಹಾಕುವ ಕೆಲಸವನ್ನು ಸರಕಾರ ಮಾಡಬೇಕಿದೆ. ಸರಕಾರ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಈ ಕಾರ್ಯದಲ್ಲಿ ಕೈಜೋಡಿಸಿದರೆ ಮಾತ್ರ ಅಮಲು ಮಾಫಿಯಾವನ್ನು ನಮ್ಮ ದೇಶದಿಂದ ಕಿತ್ತೊಗೆಯಲು ಸಾಧ್ಯ.
0 Comments