ಅನಂತವನ್ನು ಮೀರಿದ ಅದ್ಭುತ ಶಕ್ತಿ ಮಹಿಳೆ

ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿದ್ದ ಮಹಿಳೆ ಇಂದು ಸ್ವತಂತ್ರ ಹಕ್ಕಿಯಾಗಿ ಹಾರುತಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯು ಸರಿಸಮಾನರಾಗಿ ನಿಂತಿದ್ದಾಳೆ. ಮಹಿಳೆ ಎಂದರೆ ಕೇವಲ ಮನೆಯೊಳಗಿನ ಕೆಲಸದ ಕೈಯಲ್ಲ. ಸಂಸಾರವನ್ನು ನೀರೇ ಸಮಾಜವನ್ನು ಮುನ್ನಡೆಯುವ ಅದ್ಭುತ ಶಕ್ತಿ. ಇಂತಹ ಶಕ್ತಿಶಾಲಿ ಮಹಿಳೆಗೆ ಗೌರವವನ್ನು ಸೂಚಿಸುವ ದಿನವೇ ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.

  ಹೆಣ್ಣು ಜಗದ ಕಣ್ಣು. ಹೆಣ್ಣು ಸಂಸಾರದ ತೇರು. ಹೆಣ್ಣು ವಂಶ ಬೆಳಗುವ ದೀಪ. ಹೆಣ್ಣು ಸಮಾಜದ ಅದ್ಭುತ ದಿವ್ಯ ಶಕ್ತಿ. ಹೌದು ಹೆಣ್ಣು ಮಾತೆಯಾಗಿ, ಮಡದಿಯಾಗಿ ಮಗಳಾಗಿ, ಅತ್ತೆಯಾಗಿ, ಸಹೋದರಿಯಾಗಿ ನಾನು ಆ ಪಾತ್ರಗಳನ್ನು ಸಂಬಂಧಗಳಲ್ಲಿ ನಿಭಾಯಿಸುತ್ತಾಳೆ. ಅಷ್ಟೇ ಅಲ್ಲದೆ ಜವಾಬ್ದಾರಿಯುತ ಶಿಕ್ಷಕಿಯಾಗಿ, ವೈದ್ಯೆಯಾಗಿ, ಪೋಲೀಸ್, ಪೈಲೆಟ್ ಹೀಗೆ ನಾನಾ ಕ್ಷೇತ್ರಗಳಲ್ಲಿ ಕೆಲಸವನ್ನು ನಿರ್ವಹಿಸಿ ತನ್ನ ಕರ್ತವ್ಯವನ್ನು ನಿಭಾಯಿಸುತ್ತಾಳೆ. ಅಡುಗೆ ಮನೆಯಿಂದ ಅನಂತ ದಿಗಂತದವರೆಗೂ ಹೆಣ್ಣಿನ ಶ್ರೇಷ್ಠತೆ ಹಬ್ಬಿದೆ. ಮಮತೆಯ ಮೂರ್ತಿಯಾಗಿ, ಪ್ರೀತಿಯ ಸಾರಥಿಯಾಗಿ ಬಾಳ ಬಂಡಿಯಲ್ಲಿ ಜೊತೆಯಾಗುವ ಹೆಣ್ಣು ಮುನಿದರೆ ಮಾತ್ರ ಚಾಮುಂಡಿಯಾಗಿ ರೌದ್ರಾವತಾರವನ್ನೂ ತಾಳುತ್ತಾಳೆ.

21ನೆಯ ಶತಮಾನದಲ್ಲಿ ಮಹಿಳೆ ಮಾತ್ರ ಬದಲಾಗದೆ ತನ್ನ ಪಾತ್ರವನ್ನೂ ಬದಲಾಯಿಸಿಕೊಂಡಿದ್ದಾಳೆ. ವೃತ್ತಿ ಹಾಗೂ ಸಂಸಾರದ ಎರಡು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವ ಹೆಣ್ಣು ಮಕ್ಕಳು ನಿಜವಾಗಿಯೂ ದೇಶದ ಆಸ್ತಿ. ಹೆಣ್ಣು ಎಷ್ಟೇ ವಿದ್ಯಾವಂತಳಾದರೂ, ಸಮಾಜದ ಮುಖ್ಯ ವಾಹಿನಿಯಲ್ಲಿ ತನ್ನ ಚಾಪನ್ನು ಮೂಡಿಸಿ ಜಗತ್ಪ್ರಸಿದ್ಧಿ ಪಡೆದರೂ ಆಕೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಮಾತ್ರ ಕೊನೆಯಿಲ್ಲದಾಗಿದೆ. ಪ್ರತಿನಿತ್ಯ ಅತ್ಯಾಚಾರ, ಕೊಲೆ, ಶೋಷಣೆಗಳು ಹೆಣ್ಣಿನ ಮೇಲೆ ನಡೆಯುತ್ತಲೇ ಇದೆ. ಹೆಣ್ಣೆಂದರೆ ತಾತ್ಸಾರವೋ ಅಥವಾ ಕಾನೂನಿನ ಭಯವೇ ಇಲ್ಲದ ಜನರಿರುವುದಕ್ಕೋ ಏನೋ ಗೊತ್ತಿಲ್ಲ. ಆದರೆ ಇಂತಹ ಶೋಷಣೆ ಇಲ್ಲದೆ ಹೋದರೆ ಸಮಾಜದ ಅಭಿವೃದ್ಧಿ ಅಸಾಧ್ಯ.

ಆಡು ಮುಟ್ಟದ ಸೊಪ್ಪಿಲ್ಲ, ಹೆಣ್ಣು ಮಕ್ಕಳು ಇರದ ಕ್ಷೇತ್ರವಿಲ್ಲ. ಇಂದು ಕಲೆ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಆರ್ಥಿಕ, ಶಿಕ್ಷಣ, ಕೃಷಿ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರ ಸೇರಿದಂತೆ ಎಲ್ಲಾ ರಂಗಗಳಲ್ಲೂ ನಾರಿ ಶಕ್ತಿ ತನ್ನ ಚಾಪನ್ನು ಮೂಡಿಸುತ್ತಿದ್ದಾಳೆ. ಭಾರತದಲ್ಲಿ ಇಂದು ರಾಷ್ಟ್ರಪತಿಯ ಸ್ಥಾನವನ್ನಲಂಕರಿಸಿ ದೇಶವನ್ನು ಮುನ್ನಡೆಸುತ್ತಿರುವುದು ದ್ರೌಪದಿ ಮುರುಮು ಎಂಬ ದಿಟ್ಟ ಮಹಿಳೆ. ವಿತ್ತ ಸಚಿವೆಯಾಗಿ ದೇಶದ ಮತ್ತೊಂದು ಶ್ರೇಷ್ಠ ಸ್ಥಾನವನ್ನು ಅಲಂಕರಿಸಿದ ನಿರ್ಮಲಾ ಸೀತಾರಾಮನ್ ಕೂಡ ಶ್ರೇಷ್ಠ ಮಹಿಳೆಯೇ ಸರಿ. ಹೆಣ್ಣು ಮನೆಯಲ್ಲಿ ಮಾತ್ರ ಗೃಹ ಸಚಿವೆಯಾಗಿರದೆ ದೇಶದ ಆರ್ಥಿಕ ಸಚಿವೆಯಾಗಿ ಎಂತಹ ಸಂದಿಗ್ಧ ಪರಿಸ್ಥಿತಿಯನ್ನೂ ಕೂಡ ನಿಭಾಯಿಸುವ ಶಕ್ತಿಯನ್ನು ಹೊಂದಿದ್ದಾಳೆ ಎಂಬುದಕ್ಕೆ ನಿರ್ಮಲಾ ಸೀತಾರಾಮನ್ ಅವರೇ ಸಾಕ್ಷಿ.

ಹೆಣ್ಣು ಎಷ್ಟೇ ಗಟ್ಟಿಗಿತ್ತಿಯಾದರೂ, ಮಾತಿನಲ್ಲಿ ಎಷ್ಟೇ ಗಡಿಸುತನವಿದ್ದರೂ ಯಾಕೆಯೊಳಗೊಂದು ಮುಗ್ಧ ಮಗುವಿನ ಮನಸ್ಸಿರುತ್ತದೆ. ಆ ತಾಯಿ ಮನಸ್ಸು ಪ್ರತಿಕ್ಷಣ ತನ್ನ ಸಂಸಾರ, ಸಮಾಜ ,ದೇಶಕ್ಕೋಸ್ಕರ ಮಿಡಿಯುತ್ತಿರುತ್ತದೆ. ಹೆಣ್ಣು ತಪ್ಪು ಮಾಡುವುದಿಲ್ಲ ಎಂದಲ್ಲ. ಹಾಗಂತ ಎಲ್ಲಾ ಹೆಣ್ಣು ಮಕ್ಕಳು ಕೆಟ್ಟವರೂ ಅಲ್ಲ. ತಪ್ಪಿಗೆ ಶಿಕ್ಷೆ ನೀಡಿ ಒಳಿತಿನ ಕಾರ್ಯಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಗಂಡು ಮಕ್ಕಳು ಹೊರಗಡೆ ಹೋಗಿ ಕೆಲಸ ಮಾಡಿ ತಮ್ಮ ಸಂಸಾರಕ್ಕೆ ಬೆನ್ನೆಲುಬಾಗುತ್ತಾರೆ. ಹಾಗಂತ ಹೆಣ್ಣು ಮನೆಯೊಳಗೆ ಸುಮ್ಮನೆ ಕುಳಿತಿರುವುದಿಲ್ಲ. ಮನೆಯಲ್ಲೇ ಆದರೂ ಆಕೆಗೆ ಹೇಳಿಕೊಳ್ಳಲಾಗದಷ್ಟು ಕೆಲಸಗಳಿರುತ್ತವೆ. ಆ ಕೆಲಸಗಳಿಗೆ ಸಂಬಳ ಕೊಟ್ಟು ಬೆಲೆಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಒಬ್ಬ ಗಂಡು ಒಂದು ಹೊತ್ತು ಅಡುಗೆ ಮನೆಗೆ ಹೋಗಿ ಬೆಂಕಿಯ ಬಿಸಿಯ ಮುಂದೆ ಬೆವರಿಳಿಸಿ ಬೆಂದಾಗ ಮಾತ್ರ ಹೆಣ್ಣಿನ ನಿಜವಾದ ಕಷ್ಟವೇನು ಎಂಬುದರ ಅರಿವಾಗುತ್ತದೆ. ಮನೆಯೊಡತಿ ಏನೇ ಮಾಡಿದರೂ ತೆಗಳುವ ಗಂಡಸರೇ ಹೆಚ್ಚು, ಹೊಗಳಿ ಪುರಸ್ಕರಿಸುವ ಮನಸ್ಸುಗಳು ಮಾತ್ರ ವಿರಳ.


ಎಲ್ಲಿ ಹೆಣ್ಣನ್ನು ಪೂಜಿಸಿ ಗೌರವಿಸಲಾಗುತ್ತದೆಯೋ ಅಲ್ಲಿ ದೇವರು ನೆಲೆಯಾಗಿರುತ್ತಾರಂತೆ..! ಹೌದು ಹೆಣ್ಣನ್ನು ಪೂಜಿಸದಿದ್ದರೂ ಪರವಾಗಿಲ್ಲ ಆದರೆ ಗೌರವಿಸಬೇಕು. ಆಕೆ ಸಮಾಜದ ಮುಖ್ಯ ವಾಹಿನಿಗೆ ಬಂದು ನೆಲೆಸಬೇಕು. ಹೆಣ್ಣನ್ನು ಎಂದಿಗೂ ಕೆಟ್ಟ ದೃಷ್ಟಿಯಲ್ಲಿ ನೋಡಬಾರದು. ಅತ್ಯಾಚಾರದಂತಹ ಘೋರ ಶಿಕ್ಷೆ ಕೊಟ್ಟು ಆಕೆಯ ಬಾಳಿಗೆ ಕೊಲ್ಲಿ ಇಡುವ ಕೆಲಸವನ್ನು ಯಾರೂ ಮಾಡಲೇಬಾರದು. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟು, ವೃತ್ತಿಯನ್ನು ಗಿಟ್ಟಿಸಿ ಆಕೆಯ ಕಾಲ ಮೇಲೆ ಆಕೆ ನಿಂತುಕೊಳ್ಳುವುದು ನಿಜವಾದ ಸ್ವಾತಂತ್ರ್ಯ ಹಾಗೂ ಸಮಾಜದ ಅಭಿವೃದ್ಧಿ. ಆದ್ದರಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಮಾತ್ರ ಹೆಣ್ಣನ್ನು ನೆನೆಯದೆ ಪ್ರತೀದಿನ ಆಕೆಯನ್ನು ಗೌರವಿಸುವ, ಪ್ರೀತಿಸುವ ದಿನವಾಗಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಕಾಣಲು ಸಾಧ್ಯ.

Post a Comment

0 Comments