ಪ್ರಧಾನಿಗೆ ಮಹಿಳಾ ಪಡೆಯಿಂದ ಭದ್ರತೆ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಗೆ ವಿಶೇಷ ಗೌರವ

ಇಂದು ದೇಶಾದ್ಯಂತ ಮಹಿಳಾ ದಿನಾಚರಣೆಯನ್ನು ಗೌರವಪೂರ್ಣವಾಗಿ ಆಚರಿಸಲಾಗುತ್ತಿದೆ. ದೇಶದ ಭವಿಷ್ಯದ ಬೆನ್ನೆಲುಬಾಗಿರುವ ಮಹಿಳೆಯರಿಗೆ ಈ ದಿನದ ಅರ್ಪಣೆಯಾಗಿದೆ. ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸಂಪೂರ್ಣ 'ಮಹಿಳಾ ಭದ್ರತಾ ಪಡೆ' ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.
ನವ ಸಾರಿ ಜಿಲ್ಲೆಯಲ್ಲಿ ಇಂದು ಪ್ರಧಾನಿ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ ಅವರಿಗೆ ಸಂಪೂರ್ಣ ಮಹಿಳಾ ಭದ್ರತಾ ಪಡೆ ಕಾವಲಿಗೆ ಇರಲಿದೆ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಂದ ಪ್ರಧಾನಿಗೆ ಭದ್ರತೆ ಒದಗಿಸುವ ಮೂಲಕ ಒಂದು ದಿಟ್ಟ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದು ಮಹಿಳೆಯರಿಗೆ ಸಲ್ಲಿಸಲಾಗುತ್ತಿರುವ ಗೌರವ ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ.

ಪ್ರಧಾನಿಯವರಿಗೆ ಇಂದು ನೀಡಲಾಗುತ್ತಿರುವ ವಿಶೇಷ ಭದ್ರತಾ ಪಡೆಯಲ್ಲಿ ಗುಜರಾತ್ ಪೊಲೀಸ್ ಇಲಾಖೆಯ ಎಲ್ಲಾ ರಾಂಕ್ ನ ಮಹಿಳಾ ಸಿಬ್ಬಂದಿಗಳು ಇರಲಿದ್ದಾರೆ. ಒಟ್ಟು 2,300 ಮಹಿಳಾ ಸಿಬ್ಬಂದಿಗಳು ನರೇಂದ್ರ ಮೋದಿಯವರಿಗೆ ಕಾವಲಾಗಿ ನಿಂತು ಭದ್ರತೆ ಒದಗಿಸಲಿದ್ದಾರೆ. ಈ ಪೈಕಿ 2100 ಮಹಿಳಾ ಪೇದೆಗಳು, 187 ಸಬ್-ಇನ್ಸ್ಪೆಕ್ಟರ್ ಗಳು, 61 ಇನ್ಸ್ಪೆಕ್ಟರ್ ಗಳು, 16 ಮಂದಿ ಡಿಎಸ್ಪಿ ಗಳು, ಐದು ಮಂದಿ ಎಸ್ಪಿ, ಇಬ್ಬರು ಐಜಿಪಿ ಹಾಗೂ ಎಡಿಜಿಪಿ ಭದ್ರತಾ ತಂಡದಲ್ಲಿ ಇರಲಿದ್ದಾರೆ ಎಂದು ಸಿಂಘ್ವಿ ಹೇಳಿದ್ದಾರೆ. ಭಜತೆಯ ಮೇಲ್ವಿಚಾರಣೆಯನ್ನು ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಗೃಹ ಕಾರ್ಯದರ್ಶಿ ನಿಪುಣ ತೊರವಾಣೆಯವರು ನಿಭಾಯಿಸಲಿದ್ದಾರೆ.

ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವಾದ ಇಂದು ಪ್ರಧಾನಿಯವರ ಸೋಶಿಯಲ್ ಮೀಡಿಯಾ ಖಾತೆಗಳ ನಿರ್ವಹಣೆಯನ್ನು ಕೂಡ ಮಹಿಳೆ ನಿರ್ವಹಿಸಲಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಸೂರತ್ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. 


Post a Comment

0 Comments