ರಾಜ್ಯದಲ್ಲಿ ಇರುವಂತಹ ಉದ್ಯಮಿಗಳು, ಹೂಡಿಕೆದಾರರಿಗೆ ಬೇಕಾಗುವ ಅನುಮೋದನೆ, ತೀರುವಳಿಗಳನ್ನು ಕ್ಷಣಮಾತ್ರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಕೊಡಿಸಲು ಸರಕಾರವು ಹೊಸ ಸೇವೆಯನ್ನು ಆರಂಭಿಸಿದೆ. ಇದು ಪುನರುದ್ಧರಿಸಿದ ಏಕಗವಾಕ್ಷಿ ವ್ಯವಸ್ಥೆಯ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಆಧಾರಿತ ಪೋರ್ಟಲ್ ಆಗಿದ್ದು, ಯಾವುದೇ ಅಡೆತಡೆಗಳಿಲ್ಲದ ಅನುಮೋದನೆಗಳಿಗೆ ಆಧಾರಸ್ತಂಭವಾಗಿರಲಿದೆ. ಈ ಹೊಸ ಸೇವೆಯು “ಉಮಾ”(ಉದ್ಯೋಗ ಮಿತ್ರ ಅಸಿಸ್ಟೆಂಟ್) ಪೋರ್ಟಲ್ ಮೂಲಕ ಕಾರ್ಯ ನಿರ್ವಹಿಸುತ್ತದೆ.
ರಾಜ್ಯದಲ್ಲಿ ಕೈಗಾರಿಕಾ ಯೋಜನೆಗಳಿಗೆ ತ್ವರಿತ ಗತಿಯಲ್ಲಿ ಅನುಮೋದನೆ ನೀಡಬಲ್ಲ ಮತ್ತು ಉದ್ಯಮಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಇಲಾಖೆಗಳ 150 ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವಂತಹ ಉದ್ಯಮಸ್ನೇಹಿ ಪರಿಷ್ಕೃತ ಏಕಗವಾಕ್ಷಿ ಪೋರ್ಟಲ್ ಇದಾಗಿದೆ. ಈ ಪೋರ್ಟಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾಗತಿಕ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದ್ದಾರೆ. ಮೈಕ್ರೋಸಾಫ್ಟ್ ಕಂಪನಿಯ ನೆರವಿನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಬಲದಿಂದ ಈ ಪೋರ್ಟಲನ್ನು ರೂಪಿಸಿದ್ದು ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಅನುಮೋದನೆ, ನವೀಕರಣ, ತಿದ್ದುಪಡಿ, ಕುಂದು-ಕೊರತೆಗಳಿಗೆ ಪರಿಹಾರಗಳನ್ನು ಸರಳಗೊಳಿಸಲಾಗಿದ್ದು, ಕ್ಷಿಪ್ರಗತಿಯಲ್ಲಿ ಹೂಡಿಕೆ ನನಸಾಗುವಂತೆ ಮಾಡಲಿದೆ. ಜೊತೆಗೆ ಹೂಡಿಕೆದಾರರಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಿಗಬೇಕಾದ ಸೇವೆಗಳನ್ನು ಕೂಡ ಇದರ ಮೂಲಕ ಅಧಿಕಾರಿ ವರ್ಗದ ಅಡೆತಡೆ ಇಲ್ಲದೆ ಪಡೆದುಕೊಳ್ಳಬಹುದಾಗಿದೆ.
0 Comments