ಶತ್ರು ರಾಡಾರ್ ಗೂ ಸಿಗದ ದೇಶದ ಮೊದಲ ಪೈಲೆಟ್ ರಹಿತ ಯುದ್ಧ ವಿಮಾನ “ಕ್ಯಾಟ್ಸ್”


ಭಾರತವು ಸ್ವದೇಶಿ ಉತ್ಪಾದನೆಯತ್ತ ತನ್ನ ಗಮನವನ್ನು ಹರಿಸಿದ್ದು ಸ್ವದೇಶಿ ತಂತ್ರಜ್ಞಾನವನ್ನೇ ಬಳಸಿ ಹಲವಾರು ಅತ್ಯಾಧುನಿಕ ವಸ್ತುಗಳ ನಿರ್ಮಾಣವಾಗುತ್ತಿದೆ. ಇದೀಗ ನಮ್ಮ ದೇಶದಲ್ಲಿ “ಕ್ಯಾಟ್ಸ್ ವಾರಿಯರ್” ಎಂಬ ಸ್ವದೇಶಿ ನಿರ್ಮಿತ, ಪೈಲೆಟ್ ರಹಿತ ಯುದ್ಧ ವಿಮಾನವನ್ನು ಅಭಿವೃದ್ಧಿ ಮಾಡಲಾಗಿದೆ. ಈ ವರ್ಷದ ಕೊನೆಯಲ್ಲಿ ದೇಶದ ಪ್ರಥಮ ಪೈಲೆಟ್ ರಹಿತ ಯುದ್ಧ ವಿಮಾನವು ಹಾರಾಟ ನಡೆಸುವ ನಿರೀಕ್ಷೆ ಇದೆ. ಯುದ್ಧ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿದ್ದು ಅತ್ಯಾಧುನಿಕ ಸ್ಟೆಲ್ತ್ ಪೈಲೆಟ್ ರಹಿತ ಯುದ್ಧ ವಿಮಾನ ಇದಾಗಿದೆ. ಇದು ‘ಏರೋ ಇಂಡಿಯಾ 2025’ರ ಪ್ರದರ್ಶನದಲ್ಲಿ ವಿಶೇಷ ಆಕರ್ಷಣ ಕೇಂದ್ರವಾಗಿದ್ದು ಇದೇ ಮೊದಲ ಬಾರಿಗೆ ಕ್ಯಾಟ್ಸ್ ವಾರಿಯರ್ ನ ಪೂರ್ಣ ಪ್ರಮಾಣದ ಪ್ರದರ್ಶನ ಸಾರ್ವಜನಿಕರಿಗೆ ಲಭಿಸಿದ್ದು, ಇಂಡಿಯಾ ಪೆವಿಲಿಯನ್ ನಲ್ಲಿ ಇದನ್ನು ಪ್ರದರ್ಶಿಸಲಾಗಿದೆ.

ವಾಸ್ತವವಾಗಿ ಹೇಳುವುದಾದರೆ ಕ್ಯಾಡ್ಸ್ ವಾರಿಯರ್ ಎಂಬುದು ಅತ್ಯಾಧುನಿಕ ಸ್ವದೇಶಿ ಸ್ಟೆಲ್ತ್ ಡ್ರೋನ್ ಆಗಿದೆ. ಈ ಡ್ರೋನ್ ಗಳನ್ನು ಭಾರತೀಯ ವಾಯುಪಡೆಯ ಫೈಟರ್ ಜೆಟ್ಗಳೊಂದಿಗೆ ಪೂರಕವಾಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಡ್ರೋನ್ ನಲ್ಲಿ ಸ್ಟೆಲ್ತ್ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಈ ಕಾರಣದಿಂದಾಗಿ ಶತ್ರು ದೇಶಗಳ ರಾಡಾರ್ಗಳು ಇದನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಯಾಟ್ಸ್ ವಾರಿಯರ್ ನ ವಿಶೇಷವೆಂದರೆ ಇದು ಅಪಾಯಕಾರಿ ಕಾರ್ಯಾಚರಣೆಗಳನ್ನು ನಡೆಸುತ್ತದೆ. ಮತ್ತು ವಾಯುಪಡೆಯ ಪೈಲೆಟ್ಗಳಿಗೆ ಎದುರಾಗುವ ಅಪಾಯಗಳನ್ನು ಕಡಿಮೆ ಮಾಡುತ್ತವೆ. ಆಧುನಿಕ ವೈಮಾನಿಕ ಯುದ್ಧ ಮತ್ತು ಮಿಷನ್ ಯೋಜನೆಗೆ ಬಹುಮುಖ ಪರಿಹಾರವನ್ನು ಇದು ಒದಗಿಸುತ್ತದೆ.

ಕ್ಯಾಟ್ಸ್ ವಾರಿಯರ್ ಯುದ್ಧ ವಿಮಾನದ ವಿನ್ಯಾಸ, ಇಂಜಿನ್ ಸಹಿತ ನಿರ್ಮಾಣವು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತವಾಗಿದೆ. ಇದನ್ನು ಕಡಿಮೆ ವೆಚ್ಚದ ಏರ್ ಫ್ರೇಮ್ ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು ಇದರಲ್ಲಿ ಟರ್ಬೋಜೆಟ್ ಇಂಜಿನ್ ಬಳಸಲಾಗಿದೆ. ಹೈದರಾಬಾದ್ ಎಚ್ಎಎಲ್ ನ ಎ.ಆರ್.ಡಿ.ಸಿ ವಿಭಾಗವು ಇದನ್ನು ಅಭಿವೃದ್ಧಿಪಡಿಸಿದೆ. ಈ ವಾರಿಯರ್ ನಲ್ಲಿ ಆಂತರಿಕವಾಗಿ ಎರಡು ಕ್ಷಿಪಣಿಗಳನ್ನು ಬಳಸಬಹುದಾಗಿದೆ. ಇದು ಶತ್ರು ರಾಷ್ಟ್ರಗಳ ರಾಡರ್, ರನ್ ವೇ ಗಳನ್ನು ನಾಶಪಡಿಸಿ ಮರಳುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಯಲ್ಲಿ ಎಲೆಕ್ಟ್ರಾನಿಕ್ ದಾಳಿಯನ್ನೂ ಸಹ ಮಾಡಲಿದೆ.

ಕ್ಯಾಟ್ಸ್ ವಾರಿಯರ್ ಆತ್ಮಾಹುತಿ ಬಾಂಬರ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಇದು ತನ್ನ ಮದರ್ಶಿಪ್ ಸೂಚನೆಯಂತೆ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಯುದ್ಧ ವಿಮಾನವನ್ನು ಬೇಹುಗಾರಿಕೆ, ಬೆಂಕಿ ಆರಿಸುವಿಕೆ, ಆಂತರಿಕ ಮತ್ತು ಬಾಹ್ಯ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಶತ್ರು ಗುರಿಗಳನ್ನು ಭೇದಿಸಲು ಬಳಸಬಹುದಾಗಿದೆ. ಅನಿವಾರ್ಯ ಪರಿಸ್ಥಿತಿ ಎದುರಾದರೆ ಆತ್ಮಹುತಿ ದಾಳಿ ನಡೆಸುವ ಸಾಮರ್ಥ್ಯವನ್ನೂ ಸಹ ಈ ಯುದ್ಧ ವಿಮಾನ ಹೊಂದಿದೆ.

ಕ್ಯಾಟ್ಸ್ ವಾರಿಯರ್ ವಿಶೇಷತೆಗಳೇನು?
1.ಪೈಲೆಟ್ ಇಲ್ಲದೆ ಸ್ವಯಂ ಟೇಕಾಫ್ ಮತ್ತು ಲ್ಯಾಂಡಿಂಗ್ ನೊಂದಿಗೆ ಕ್ಯಾಟ್ಸ್ ಕಾರ್ಯ ನಿರ್ವಹಿಸುತ್ತದೆ.
2. ಡೈನಾಮಿಕ್ ಮಿಷನ್ ಶೆಡ್ಯೂಲಿಂಗ್ ವ್ಯವಸ್ಥೆ ಸಂಯೋಜಿಸಿರುವುದರಿಂದ ನೈಜ ಸಮಯದ ಯುದ್ಧ ಸನ್ನಿವೇಶಗಳಿಗಾಗಿ ವಿಮಾನ ನಿಯೋಜನೆಯನ್ನು ಸುಗಮವಾಗಿಸುತ್ತದೆ.
3. ಯುದ್ಧದ ಸಮಯದಲ್ಲಿ ಕ್ಯಾಟ್ಸ್ ಕಾರ್ಯವನ್ನು ಭೂಮಿ ಮೇಲಿರುವ ನಿಯಂತ್ರಣ ಕೊಠಡಿಯಲ್ಲೇ ಕುಳಿತು ನಿರ್ವಹಣೆ ಮಾಡಲು ಸಾಧ್ಯವಿದೆ. 
4. ಸ್ವದೇಶಿ ನಿರ್ಮಿತ ಸ್ಮಾರ್ಟ್ ಆಂಟಿ ಏರ್-ಫೀಲ್ಡ್ ಶಸ್ತ್ರಾಸ್ತ್ರಗಳೊಂದಿಗೆ ಇದು ಶತ್ರುಗುರಿಗಳ ಮೇಲೆ ನಿಖರವಾಗಿ ದಾಳಿ ನಡೆಸಲು ಸಾಧ್ಯವಿದೆ.

ಕ್ಯಾಟ್ಸ್ ವಾರಿಯರ್ ಪರೀಕ್ಷಾ ಹಂತದಲ್ಲಿದ್ದು ಇತ್ತೀಚೆಗೆ ಎಂಜಿನ್ ಗ್ರೌಂಡ್ ರನ್ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಎಲ್ಲಾ ಪ್ರಯೋಗಗಳೂ ಯಶಸ್ವಿಯಾದ ನಂತರ ಇದರ ಮೊದಲ ಹಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಎಲ್ಲವೂ ಸುಸೂತ್ರವಾಗಿ ನಡೆದರೆ 2026ರಲ್ಲಿ ಭಾರತೀಯ ವಾಯುಸೇನೆಯ ಮಡಿಲು ಸೇರಲಿದೆ.




Post a Comment

0 Comments