“ಪರೀಕ್ಷಾ ಪೆ ಚರ್ಚಾ” ಕಾರ್ಯಕ್ರಮ; ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ


ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೊಂದಿಗೆ “ಪರೀಕ್ಷಾ ಪೆ ಚರ್ಚಾ” ಕಾರ್ಯಕ್ರಮದಲ್ಲಿ ಸೋಮವಾರ ಸಂವಾದ ನಡೆಸಿದರು. ಧ್ಯಾನ, ಜ್ಞಾನ, ನಾಯಕತ್ವ, ಪರೀಕ್ಷೆ ಮೊದಲಾದ ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದವನ್ನು ನಡೆಸಿ, ವಿದ್ಯಾರ್ಥಿಗಳು ತಮ್ಮನ್ನು ತಾವು ಸವಾಲುಗಳಿಗೆ ಒಡ್ಡಿಕೊಳ್ಳುವಂತೆ ಸಲಹೆ ನೀಡಿದರು.

ಮೋದಿಜಿಯವರು ಪ್ರತಿ ವರ್ಷ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೊಂದಿಗೆ ವರ್ಷಕ್ಕೊಮ್ಮೆ ‘ಪರೀಕ್ಷಾ ಪೇ ಚರ್ಚಾ’ ಎಂಬ ಯೋಜನೆಯಡಿ ಸಂವಾದ ಕಾರ್ಯಕ್ರಮ ನಡೆಸುತ್ತಾರೆ. ಫೆ.10ರಂದು ನಡೆದ ಈ ಕಾರ್ಯಕ್ರಮದ ಎಂಟನೇ ಆವೃತ್ತಿಯಲ್ಲಿ ಕುತೂಹಲಭರಿತ ಮತ್ತು ಒಳನೋಟವಿದ್ದ ಸಂಭಾಷಣೆಗಳು ಎಲ್ಲರ ಗಮನ ಸೆಳೆದವು. ದೆಹಲಿಯ ಸುಂದರ್ ನರ್ಸರಿಯಲ್ಲಿ ನಡೆದ ಸಂವಾದದಲ್ಲಿ ಸುಮಾರು 35 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಷ್ಟ್ರವ್ಯಾಪಿ ಪ್ರಸಾರವಾದ ಕಾರ್ಯಕ್ರಮವನ್ನು ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ವೀಕ್ಷಿಸಿದ್ದಾರೆ. 


ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಬಾರದು ಎಂದು ಪ್ರಧಾನಿ ಹೇಳಿದ್ದಾರೆ. ಒತ್ತಡ ನಿರ್ವಹಣೆ, ನಾಯಕತ್ವ ಗುಣಗಳ ಬಗ್ಗೆ ಮೋದಿಜಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಪರೀಕ್ಷೆ ಹಾಗೂ ಜ್ಞಾನ ಜೀವನದ ಎರಡು ವಿಭಿನ್ನ ಅಂಶಗಳೇ ಹೊರತು ಪರೀಕ್ಷೆಯೇ ಜೀವನದ ಅಂತಿಮ ಗುರಿ ಎಂದು ಭಾವಿಸದಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಸಮಯ ಪಾಲನೆ, ಯೋಜನೆ ರೂಪಿಸಿಕೊಂಡು ಪ್ರತಿಯೊಂದು ಪರಿಸ್ಥಿತಿಗಳನ್ನು ಸಕಾರಾತ್ಮಕವಾಗಿ ನಿಭಾಯಿಸುವ ಕೌಶಲ್ಯದ ಕುರಿತು ಒತ್ತಿ ಹೇಳಿದರು.

ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು ಎಂದು ಪ್ರಧಾನಿ ಪೋಷಕರುನ್ನುದ್ದೇಶಿಸಿ ಹೇಳಿದರು. ಪರೀಕ್ಷೆಯ ಫಲಿತಾಂಶ ಆಧಾರದ ಮೇಲೆ ವಿದ್ಯಾರ್ಥಿಗಳ ಭವಿಷ್ಯವನ್ನು ತೀರ್ಮಾನಿಸುವ ಪೋಷಕರ ಸಾಮಾಜಿಕ ಪ್ರವೃತ್ತಿಯನ್ನು ಕಟುವಾಗಿ ಟೀಕಿಸಿ ಧನಾತ್ಮಕ ಚಿಂತನೆಯೊಂದಿಗೆ ಸಾಗುವಂತೆ ವಿದ್ಯಾರ್ಥಿಗಳನ್ನು ಪ್ರಧಾನಮಂತ್ರಿ ಹುರಿದುಂಬಿಸಿದರು.

ಈ ಬಾರಿಯ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರೊಂದಿಗೆ ನಟಿ ದೀಪಿಕಾ ಪಡುಕೋಣೆ, ಬಾಕ್ಸರ್ ಮೇರಿ ಕೋಮ್ ಹಾಗೂ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ವಿದ್ಯಾರ್ಥಿಗಳ ಸದೃಢ ಬೆಳವಣಿಗೆಗೆ ಸಹಾಯ ಮಾಡುವ ವಿಷಯಗಳ ಕುರಿತು ಮಾತುಗಳನ್ನಾಡಿದರು.


Post a Comment

0 Comments