ಭರದಿಂದ ಸಾಗುತ್ತಿರುವ ಆಧುನಿಕರಣದ ವೇಗಕ್ಕೆ ಕೆಟ್ಟಸ ಎಂಬ ತುಳುವರ ಹಬ್ಬವು ತೆರೆಮರೆಗೆ ಸರಿದರೂ ಇಂದಿಗೂ ಹಳ್ಳಿಗಳ ಕೃಷಿಕ ಕುಟುಂಬಗಳು ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿವೆ. ಹಿರಿಯರಿರುವ ಹಳ್ಳಿಗಾಡಿನ ಮನೆಗಳಲ್ಲಿ ತುಳು ಮಣ್ಣಿನ ಘಮವಿರುವ ಕೆಡ್ಡಸದ ಆಚರಣೆ ಬಹು ವಿಶೇಷವಾದುದು.
ಭೂಮಿಯನ್ನು ಹೆಣ್ಣು, ತಾಯಿಯಾಗಿ ಪೂಜಿಸಲಾಗುತ್ತದೆ. ಭೂಮಿ ತಾಯಿಗೆ ಜಗತ್ತಿನ ಪ್ರತಿ ಮೂಲೆಯಲ್ಲೂ ವಿಶೇಷ ಸ್ಥಾನಮಾನವಿದೆ. ಯಾಕೆಂದರೆ ಭೂಮಿ ನಮಗೆ ಅನ್ನ ಕೊಡುವ ತಾಯಿ. ಹಾಗೆಯೇ ಭೂಮಿಯನ್ನು ತಾಯಿ ಎಂಬ ವಿಶೇಷ ಪೂಜೆ ಭಾವನೆಗಳಿಂದ ನೋಡುವುದರಿಂದ ನಮ್ಮ ತುಳುನಾಡಿನಲ್ಲಿ ಕೆಟ್ಟ ಆಚರಣೆಗೂ ವಿಶೇಷ ಮಹತ್ವವಿದೆ. ಇಂದಿಗೂ ಕೆಡ್ಡಸ ಆಚರಣೆಯನ್ನು ಅದೇ ಪೂಜ್ಯ ಭಾವನೆಯಿಂದ ಭೂಮಿತಾಯಿಯ ನೋವು ನಲಿವುಗಳನ್ನು ಕಳೆಯುವ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಭೂಮಿ ತಾಯಿಯು ಋತುಮತಿಯಾಗುವ ನಂಬಿಕೆಯನ್ನು ಕೆಡ್ಡಸ ಎಂಬ ಹೆಸರಿನಿಂದ ಕರೆದು ಹಬ್ಬವಾಗಿ ಆಚರಿಸಲಾಗುತ್ತದೆ.. ಅಂದರೆ ಹೆಣ್ಣು ಋತುಮತಿಯಾದರೆ ಆಕೆ ತಾಯಿಯಾಗಲು ಹೇಗೆ ಅರ್ಹಳೋ ಹಾಗೆಯೇ ಭೂಮಿತಾಯಿಯು ಋತುಮತಿಯಾಗುತ್ತಾಳೆಂದರೆ ಆಕೆ ಸೃಷ್ಟಿಗೆ ಸಿದ್ದಳಾಗಿದ್ದಾಳೆ ಎಂದರ್ಥ. ಈ ರೀತಿ ಹಿಂದಿನ ಜನತೆ ಭೂಮಿಯನ್ನು ಕಲ್ಪಿಸಿಕೊಂಡು ಕೆಡ್ಡಸ ಹಬ್ಬವನ್ನು ವಿಶಿಷ್ಟ ಪರ್ವ ದಿನವಾಗಿ ಆಚರಿಸುತ್ತಿದ್ದರು. ಭೂಮಿತಾಯಿ ಸೃಷ್ಟಿಗೆ ಸಿದ್ದಳು ಎಂದರೆ ಆಕೆ ಸಮೃದ್ಧಳಾಗಿ ಕೃಷಿ ಭೂಮಿಯಲ್ಲಿ ಫಸಲು ಕೊಡುತ್ತಾಳೆ ಎಂದರ್ಥ.
*ಕೆಡ್ಡಸ ಹಬ್ಬದ ಆಚರಣೆ ಹೇಗಿರುತ್ತದೆ?*
ಕೆಡ್ಡಸ ಹಬ್ಬದ ಆಚರಣೆ ತುಳುನಾಡಿನ ಗಲ್ಲಿ ಗಲ್ಲಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿರಬಹುದು. ಆದರೆ ಹಬ್ಬದ ಮೂಲ ಆಶಯ ಒಂದೇ ಆಗಿರುತ್ತದೆ. ಕೆಡ್ಡಸವು ಮೂರು ದಿನಗಳ ಆಚರಣೆಯಾಗಿರುತ್ತದೆ. ಮೊದಲ ದಿನದ ಕೆಡ್ಡಸ, ಎರಡನೇ ದಿನ ಮಧ್ಯ ಕೆಡ್ಡಸ ಅಥವಾ ನಡು ಕೆಡ್ಡಸ, ಮೂರನೇ ದಿನ ಕಡೆ ಕೆಡ್ಡಸ ಎಂಬ ಆಚರಣೆಯಿದೆ.
ತುಳುವರ ತುಳು ಕ್ಯಾಲೆಂಡರ್ ಪ್ರಕಾರ ಪೊನ್ನಿ ಅಥವಾ ಪುಯಿಂತೇಳ್ ತಿಂಗಳು ಅಥವಾ ಮಕರ ಮಾಸದ 27ನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸ ಹಬ್ಬದ ಆಚರಣೆ ಮಾಡಲಾಗುತ್ತದೆ. ಈ ಫೆಬ್ರವರಿ ತಿಂಗಳ 10ನೇ ತಾರೀಕು ಮಧ್ಯಾಹ್ನದಿಂದ ಮೂರು ದಿನಗಳ ಕಾಲ ಕೆಡ್ಡಸ ಹಬ್ಬದ ಆಚರಣೆಯಿದೆ.
ಕೆಡ್ಡಸ ಹಬ್ಬದ ಆಚರಣೆ ಮಾಡದವರೂ ಸಹ ನಡು ಕೆಡ್ಡಸದ ದಿನ “ನನ್ನಿಯರಿ” ಮಾಡಿ ತಿಂದು ಸಂಭ್ರಮಿಸುತ್ತಾರೆ. ತುಳುವರ ಮನೆಗಳಲ್ಲಿ ಬಳಸುವ ಕುಚ್ಚಲಕ್ಕಿಯನ್ನು ಹುರಿದು ಪುಡಿ ಮಾಡಿ ಅದಕ್ಕೆ ಮಂಡಕ್ಕಿ, ಅವಲಕ್ಕಿ, ಬೆಲ್ಲ, ಬಾಳೆಹಣ್ಣು ಸೇರಿಸಿ ತಿನ್ನುತ್ತಾರೆ. “ನನ್ನಿಯರಿ” ಎಂದು ತುಳುವಿನಲ್ಲಿ ಕರೆಯುತ್ತಾರೆ. ಶಾಲೆಗೆ ಹೋಗುವ ಮಕ್ಕಳೆಲ್ಲಾ ಬುತ್ತಿಯಲ್ಲಿ ಈ ನನ್ನಿಯರಿಯನ್ನು ತಂದು ಶಾಲೆಗಳಲ್ಲಿ ಜಾತಿ ಧರ್ಮಗಳ ಬೇಧವಿಲ್ಲದೆ ಹಂಚಿ ತಿನ್ನುವ ಸಂಭ್ರಮವಂತೂ ಬಣ್ಣಿಸಲಾಗದ ಅನುಭವ..!!
ಕೆಲವು ಮನೆಗಳಲ್ಲಿ ಅಕ್ಕಿ ಹಾಗೂ ಹುರುಳಿಯನ್ನು ಬೇಯಿಸಿ ತಿನ್ನುವ ಕ್ರಮವಿದೆ. ಕೆಲವರ ಮನೆಯಲ್ಲಿ ಮಾಂಸಾಹಾರವೂ ಇರುತ್ತದೆ. ಈ ದಿನ ನನ್ನಿಯರಿ, ಹುಳಿ ದೋಸೆ ಮಾಡಿ ಭೂಮಿ ತಾಯಿಗೆ ಇಡುತ್ತಾರೆ. ಮಧ್ಯಾಹ್ನ ನುಗ್ಗೆ, ಬದನೆ, ಕಡಲೆ ಸಾಂಬಾರ್ ಪ್ರತೀ ಮನೆಯಲ್ಲೂ ಇದ್ದೇ ಇರುತ್ತದೆ. ಇದನ್ನು ಕೂಡಾ ಮಧ್ಯಾಹ್ನ ಭೂಮಿ ತಾಯಿಗೆ ಬಾಲೆಯೆಲೆಯಲ್ಲಿ ಬಡಿಸುತ್ತಾರೆ.
ಕಡೆ ಕೆಡ್ಡಸದ ಆಚರಣೆ ಬಹಳ ವಿಶೇಷವಾಗಿರುತ್ತದೆ.
ಈ ದಿನ ಮುತ್ತೈದೆಯರು ಸ್ನಾನ ಮಾಡಿ ಅರಿಶಿನ ಕುಂಕುಮ, ಕಾಡಿಗೆ, ಎಣ್ಣೆ, ಸೀಗೆಕಾಯಿ, ಹೆಸರು ಕಾಳು ಹುಡಿ, ಬಾಗೆಗಳ ತೊಗಟೆ, ವೀಳ್ಯದೆಲೆಯನ್ನಿಟ್ಟು ದೀಪವನ್ನು ಇರಿಸುತ್ತಾರೆ. ಅಷ್ಟೇ ಅಲ್ಲದೆ ಭೂಮಿ ತಾಯಿಯ ಸಿಂಗಾರಕ್ಕಾಗಿ ಕನ್ನಡಿ, ಮಾಂಗಲ್ಯ ಸರ, ಬಾಚಣಿಕೆಯನ್ನಿಡುವ ಪದ್ಧತಿಯೂ ಇದೆ. ಮೂರನೇ ದಿನ ಭೂಮಿ ತಾಯಿ ತನ್ನ ಮೈಲಿಗೆಯನ್ನು ತಳೆದು ಮನೆಯೊಳಗೆ ಬರಲು ಆಕೆಯನ್ನು ಆಹ್ವಾನಿಸಲು ಮನೆ ಮುಂದೆ ರಂಗೋಲಿ ಹಾಕುವ ಕ್ರಮವೂ ಇದೆ. ಹಾಗೆಯೇ ಎಡೆಯನ್ನು ಬಾಳೆಯೆಲೆಯಲ್ಲಿಟ್ಟು ಭೂಮಿ ತಾಯಿಗೆ ಅರ್ಪಣೆ ಮಾಡುತ್ತಾರೆ. ಮಾರನೇ ದಿನ ಮುತ್ತೈದೆಯರು ಭೂಮಿಗೆ ಎಣ್ಣೆಯನ್ನು ಬಿಟ್ಟು ನಂತರ ಸ್ನಾನಕ್ಕೆ ಉಪಯೋಗಿಸಲಾಗುವ ಸೀಗೆ, ಹೆಸರು ಕಾಳು ಹುಡಿ, ಸರೋಳಿ ರಸ ಮುಂತಾದ ವಸ್ತುಗಳನ್ನು ಭೂಮಿಗೆ ಚೆಲ್ಲಿ ಆ ಜಾಗವನ್ನು ಸಗಣಿ ಸಾರಿಸಿ ಶುದ್ಧಿ ಮಾಡುತ್ತಾರೆ.
ಕೆಡ್ಡಸದ ಆಚರಣೆಯ ಮೂರು ದಿನಗಳ ಕಾಲ ತುಳುನಾಡಿನಲ್ಲಿ ಭೂಮಿ ತಾಯಿಗೆ ನೋವಾಗುವಂತಹ ಯಾವುದೇ ಕೆಲಸಗಳನ್ನು ಮಾಡುವಂತಿಲ್ಲ. ಅಂದರೆ ಭೂಮಿಯನ್ನು ಅಗೆಯುವುದು, ಬಡಿಯುವುದು, ಮರ ಕಡಿಯುವಂತಹ ಕೆಲಸಗಳು ನಿಷಿದ್ಧ. ಯಾಕೆಂದರೆ ಭೂಮಿ ತಾಯಿ ಋತುಮತಿಯಾದ ಮೂರು ದಿನಗಳ ಕಾಲ ಈ ರೀತಿ ಕಠಿಣ ಕೆಲಸಗಳನ್ನು ಮಾಡಿ ನೋವು ಮಾಡಿದರೆ ಮಾಡಿದರೆ ಆಕೆ ಬಂಜೆಯಾಗಿ ಕೃಷಿ ಭೂಮಿಗಳಲ್ಲಿ ಫಸಲು ಬರುವುದಿಲ್ಲ ಎಂಬ ನಂಬಿಕೆ.
ಕೆಡ್ಡಸ ಹಬ್ಬದ ಆಚರಣೆ ವಿಚಿತ್ರವೆನಿಸಿದರೂ ಸತ್ಯ. ಮರೆಯಾಗುತ್ತಿರುವ ಇಂತಹ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು. ಪೂರ್ವಜರ ಆಚರಣೆಗಳು ನಮ್ಮ ಬದುಕಿನುದ್ದಕ್ಕೂ ಇದ್ದರೆ ಮಾತ್ರ ಸಂತಸ ಎಲ್ಲೆಡೆ ಪಸರಿಸಿ ಸಂಸ್ಕೃತಿ ಸಂಸ್ಕಾರಗಳು ಉಳಿಯಲು ಸಾಧ್ಯ.
0 Comments