ಮನುಷ್ಯನ ಸದೃಢ ಆರೋಗ್ಯಕ್ಕಾಗಿ ಸಮೃದ್ಧ ಆಹಾರ ಸೇವನೆಯೂ ಅತ್ಯಗತ್ಯ. ಹೇರಳವಾದ ಪೌಷ್ಟಿಕಾಂಶ, ಖನಿಜಾಂಶ, ನಾರಿನಂಶವಿರುವ ಆಹಾರಗಳನ್ನು ಪ್ರತಿನಿತ್ಯ ಸೇವಿಸಿದರೆ ಮಾತ್ರ ನಮ್ಮ ಆರೋಗ್ಯವು ಸಮೃದ್ಧವಾಗಿರುತ್ತದೆ. ಅದರಲ್ಲೂ ದ್ವಿದಳ ಧಾನ್ಯಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿರುವುದಂತೂ ನಿಜ.
ದ್ವಿದಳ ಧಾನ್ಯಗಳನ್ನು ಭಾರತೀಯ ಆಹಾರ ಪದ್ಧತಿಯ ಅವಿಭಾಜ್ಯ ಅಂಗ ಎಂದೇ ಕರೆಯಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಮಣ್ಣನೆ ಪಡೆದಿರುವ ದ್ವಿದಳ ಧಾನ್ಯಗಳು ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಆರ್ಥಿಕತೆ, ಕೃಷಿ, ಪರಿಸರಕ್ಕೂ ತುಂಬಾ ಒಳ್ಳೆಯದೇ ಆಗಿರುತ್ತದೆ. ದ್ವಿದಳ ಧಾನ್ಯಗಳ ಅವಶ್ಯಕತೆ ಹಾಗೂ ಅನುಕೂಲತೆಗಳನ್ನು ಮನಗಂಡು ಉತ್ಪಾದನೆ ಉತ್ತೇಜಿಸುವ ನಿಟ್ಟಿನಿಂದ ಪ್ರತೀ ವರ್ಷ ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಆಚರಿಸಲಾಗುತ್ತದೆ. 2018 ರ ಡಿಸೆಂಬರ್ 10 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕೃತವಾದ ಬಳಿಕ ದ್ವಿದಳ ಧಾನ್ಯಗಳ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. “ದ್ವಿಧಳ ಧಾನ್ಯಗಳು ಕೃಷಿ ಆಹಾರ ವ್ಯವಸ್ಥೆಯಲ್ಲಿ ವೈವಿಧ್ಯತೆ ತರುವುದು” ಎಂಬ ಧ್ಯೇಯೋದ್ದೇಶದೊಂದಿಗೆ ಈ ವರ್ಷ ದ್ವಿದಳ ಧಾನ್ಯಗಳ ದಿನವನ್ನು ಆಚರಿಸಲಾಗುತ್ತಿದೆ.
ರೈತರು ತಮ್ಮ ಕೃಷಿ ಭೂಮಿಯಲ್ಲಿ ದ್ವಿದಳ ಧಾನ್ಯಗಳನ್ನು ಹೇರಳವಾಗಿ ಬೆಳೆಯುತ್ತಾರೆ. ದ್ವಿದಳ ಧಾನ್ಯಗಳಾದ ಬಟಾಣಿ, ಕಡಲೆ, ತೊಗರಿ, ಬೀನ್ಸ್ ಕಾಳು ಇಂತಹ ಎರಡು ದಳಗಳನ್ನು ಹೊಂದಿದ ಧಾನ್ಯಗಳನ್ನು ದ್ವದಳ ಧಾನ್ಯಗಳು ಎನ್ನುತ್ತೇವೆ. ಇವುಗಳಲ್ಲಿ ಹೇರಳವಾದ ಪ್ರೋಟೀನ್, ವಿಟಮಿನ್, ಫೈಬರ್ ಅಂಶಗಳಿದ್ದು ಮಾನವನ ಆರೋಗ್ಯವನ್ನು ಸಮತೋಲನವಾಗಿರಿಸುವಲ್ಲಿ ಸಹಾಯ ಮಾಡುತ್ತದೆ.
ಜಾಗತಿಕ ಮಟ್ಟದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನಾ ಕ್ಷೇತ್ರಕ್ಕೆ ಭಾರತದ ಕೊಡುಗೆ ಶೇಕಡ 25ಕ್ಕೂ ಹೆಚ್ಚಿದೆ. ಹೆಸರು ಕಾಳು,ಕಡಲೆ, ತೊಗರಿ ಹಾಗೂ ಬೆಳೆಗಳ ಉತ್ಪಾದನೆಯಲ್ಲಿ ಭಾರತವು ಅಗ್ರಸ್ಥಾನದಲ್ಲಿದ್ದು ಈ ಮೂಲಕ ಅತೀ ಹೆಚ್ಚು ದ್ವಿದಳ ಧಾನ್ಯ ಬೆಳೆಯುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಅಷ್ಟೇ ಅಲ್ಲದೆ ದ್ವಿದಳ ಧಾನ್ಯಗಳ ಸೇವನೆ ಹಾಗೂ ಆಮದಿನಲ್ಲೂ ಭಾರತ ಮುಂಚೂಣಿಯಲ್ಲಿದೆ. 2026ರ ವೇಳೆಗೆ 26 ಮಿಲಿಯನ್ಗಳಷ್ಟು ಉತ್ಪಾದನೆ ಮಾಡುವ ಗುರಿಯನ್ನು ಭಾರತವು ಹೊಂದಿದೆ.
0 Comments