ಪಂಚಾಯತಿ ವಿಕೇಂದ್ರಿಕರಣದ ಕುರಿತು ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ನಡೆಸಿರುವ ಅಧ್ಯಯನ ಕುರಿತಾದ ವರದಿಯನ್ನು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಬಿಡುಗಡೆಗೊಳಿಸಿದೆ. ಈ ಸೂಚ್ಯಂಕದ ಪಟ್ಟಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಅಗ್ರಸ್ಥಾನ ಲಭಿಸಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (ಐಐಎಪಿ) ಈ ಕುರಿತು ಅಧ್ಯಯನ ನಡೆಸಿದ್ದು ಕೇಂದ್ರ ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಕಾರ್ಯವಿಧಾನ, ಕಾರ್ಯದ ಚೌಕಟ್ಟು, ಹಣಕಾಸು ನಿರ್ವಹಣೆ, ಕಾರ್ಯನಿರ್ವಾಹಕರು, ಸಾಮರ್ಥ್ಯ ವರ್ಧನೆ, ಹೊಣೆಗಾರಿಕೆ ಈ ಆರು ಆಯಾಮದಲ್ಲಿ ಅಧ್ಯಯನ ನಡೆಸಲಾಗಿದ್ದು, 34 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ 68 ಜಿಲ್ಲೆಗಳ 172 ಪಂಚಾಯತ್ಗಳಲ್ಲಿ ಅಧ್ಯಯನವನ್ನು ನಡೆಸಲಾಗಿತ್ತು. ಎಲ್ಲಾ ರಾಜ್ಯಗಳಿಂದ ಒಟ್ಟು 1,594 ಜನರ ಪ್ರತಿಕ್ರಿಯೆ ಪಡೆದು ವರದಿಯನ್ನು ಸಿದ್ಧಪಡಿಸಲಾಗಿದೆ.
ಐಐಸಿಎ ಸಿದ್ಧಪಡಿಸಿದ ವರದಿ ಪ್ರಕಾರ 2013-14 ರಿಂದ 2021-22ರ ಅವಧಿಯಲ್ಲಿ ಪಂಚಾಯತ್ ವಿಕೇಂದ್ರೀಕರಣವು ಶೇಕಡ 39.9 ರಿಂದ ಶೇಕಡ 43.9ಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನವು 2018ರಲ್ಲಿ ಆರಂಭಗೊಂಡಿದ್ದು, ಇದರಿಂದಾಗಿ ಈ ಸೂಚ್ಯಂಕದ ಸಾಮರ್ಥ್ಯ ವರ್ಧನೆ ಶೇಕಡ 44 ರಿಂದ ಶೇಕಡ 54.6 ಎಂದರೆ ಶೇ.10 ಹೆಚ್ಚಳ ಕಂಡಿದೆ. ಈ ಅವಧಿಯಲ್ಲಿ ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರ ಪಂಚಾಯತ್ ರಾಜ್ ಸಂಸ್ಥೆಗಳಿಂದ ಮೂಲಸೌಕರ್ಯ ಒದಗಿಸುವಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿರುವುದರ ಜೊತೆಗೆ ಗ್ರಾಮೀಣ ಮತ್ತು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಅಧಿಕಾರಿಗಳನ್ನು ನೇಮಿಸಿಕೊಂಡಿದೆ. ಇದರ ಪರಿಣಾಮವಾಗಿ ಕಾರ್ಯವಿಧಾನಕ್ಕೆ ಸಂಬಂಧಿಸಿದ ಸೂಚ್ಯಂಕದ ಅಂಶವು ಶೇಕಡ 39.6 ರಿಂದ ಶೇಕಡ 50.90ಕ್ಕೆ ಏರಿಕೆ ಕಂಡಿದೆ.
ಪಂಚಾಯತ್ ವಿಕೇಂದ್ರೀಕರಣ ಸೂಚ್ಯಂಕವು ಭಾರತದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ಎತ್ತಿ ಹಿಡಿದ ಕೈಗನ್ನಡಿಯಾಗಿದೆ. ಇದು ಉತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯಗಳನ್ನು ಪ್ರೇರೇಪಿಸುವುದಲ್ಲದೆ, ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ವಾತಾವರಣವನ್ನು ಸೃಷ್ಟಿಸಲು ರಾಜ್ಯ ಸರಕಾರಗಳನ್ನು ಪ್ರೋತ್ಸಾಹಿಸುತ್ತದೆ. ಸೂಚಂಕದಲ್ಲಿ 15ನೇ ಸ್ಥಾನದಿಂದ ಈಗ 5ನೇ ಸ್ಥಾನಕ್ಕೆ ಬಂದಿರುವ ಉತ್ತರ ಪ್ರದೇಶ ಗಮನಾರ್ಹ ಪ್ರಗತಿಯನ್ನು ಕಂಡಿದೆ.
ಪಂಚಾಯತ್ ವಿಕೇಂದ್ರೀಕರಣ ಸ್ವಚಂಕದಲ್ಲಿ ಮೊದಲ 10 ಸ್ಥಾನಗಳನ್ನು ಪಡೆದ ರಾಜ್ಯಗಳೆಂದರೆ ಕ್ರಮವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್, ತ್ರಿಪುರ, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಢ. ಈ ಸೂಚ್ಯಂಕದ ಪಟ್ಟಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಅಗ್ರಸ್ಥಾನ ಲಭಿಸಿರುವುದು ಹೆಮ್ಮೆಯ ಹಾಗೂ ಗೌರವಯುತ ವಿಷಯವಾಗಿದೆ.
0 Comments