ಫೆಬ್ರವರಿ 13; ವಿಶ್ವ ರೇಡಿಯೋ ದಿನ


5ಜಿ ಇಂಟರ್ನೆಟ್ ಯುಗದಲ್ಲಿ ಬದುಕುತ್ತಿರುವ ಮನುಷ್ಯನಿಗೆ ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಗ್ರಾಮ್, ಟ್ವಿಟ್ಟರ್ ಮೂಲಕ ಕ್ಷಣಮಾತ್ರದಲ್ಲಿ ಅಂಗೈಯಲ್ಲೇ ಎಲ್ಲಾ ಸುದ್ಧಿ-ಮನರಂಜನೆಗಳನ್ನು ನೋಡಬಹುದು. ಆದರೂ ಈ ಟಿವಿ, ಮೊಬೈಲ್, ಲ್ಯಾಪ್ಟಾಪ್ ಎಲ್ಲದರ ಎಚ್.ಡಿ ಕ್ವಾಲಿಟಿ ನಡುವೆಯೂ ರೆಡಿಯೊ ಧ್ವನಿ ಯತೇಚ್ಛವಾಗಿ ಮಾರ್ದನಿಸುತ್ತಾ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಬದಲಾದ ಯುಗದಲ್ಲಿ ಬದಲಾಗದೆ ಉಳಿದು ತನ್ನ ಸಾರ್ವಭೌಮತೆಯನ್ನು ಜಗತ್ತಿಗೆ ಪರಿಚಯಿಸುತ್ತಿರುವ ಪುಟ್ಟ ರೇಡಿಯೋ ಎಂಬ ದಂತಕತೆಗೆ ಈ ದಿನದ ಅರ್ಪಣೆ..!!



*ವಿಶ್ವ ರೇಡಿಯೋ ದಿನದ ಆಚರಣೆಯ ಹಿನ್ನೆಲೆ*

ಯುನೆಸ್ಕೋದ ಮೂವತ್ತಾರನೇ ಸಾಮಾನ್ಯ ಅಧಿವೇಶನದಲ್ಲಿ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲು ನಿರ್ಣಯಿಸಲಾಯಿತು. 2012ರಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಇದನ್ನು ಸರ್ವಾನುಮತದಿಂದ ಅನುಮೋದಿಸಿ, ಪ್ರತಿ ವರ್ಷ ವಿಶ್ವ ರೇಡಿಯೋ ದಿನವನ್ನು ಫೆಬ್ರವರಿ 13 ರಂದು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಪ್ರತ್ಯೇಕ ರೇಡಿಯೋ ಕೇಂದ್ರ ಸ್ಥಾಪನೆಯಾದುದು 1946ರ‌ ಫೆಬ್ರವರಿ 13ರಂದು ಆಗಿದ್ದು, ಈ ಸವಿ ನೆನಪಿಗಾಗಿ ಫೆಬ್ರವರಿ 13ರನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತಿದೆ.


 ರೇಡಿಯೋ ಒಂದು ಅದ್ಭುತ ಸಂವಹನ ಮಾಧ್ಯಮ. ಒಂದು ಕಾಲದಲ್ಲಿ ಮನೆಯ ಹೆಣ್ಣು ಮಕ್ಕಳು ರೇಡಿಯೋದಲ್ಲಿ ಪ್ರಸಾರವಾಗುವ ಸುಪ್ರಭಾತವನ್ನು ತಮ್ಮ ಅಲಾರಂ ಎಂದು ಭಾವಿಸಿ ಬೆಳಿಗ್ಗೆ ಎದ್ದು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಸುಪ್ರಭಾತವನ್ನು ಒಂದು ದಿನ ಆಲಿಸದೆ ಹೋದರೆ ಆಲಸಿಯಂತೆ ಏನೋ ಕಳೆದುಕೊಂಡಂತಹ ಭಾವನೆ. ಆದರೆ ಪ್ರಸ್ತುತ ಇಂಟರ್ನೆಟ್ ಯುಗದಲ್ಲಿ ರೇಡಿಯೋ ಇರುವ ಮನೆ ಕೇವಲ ಬೆರಳೆಣಿಕೆಯಷ್ಟು ಮಾತ್ರ.


ರೇಡಿಯೋವನ್ನು ಕಂಡುಹಿಡಿದವರು ಇಟಲಿಯ ಗುಗ್ಗಿಯೇಲ್ಕೋ ಮಾರ್ಕೋನಿ ಎಂಬ ವಿಜ್ಞಾನಿ. ಕೇವಲ ನಿಸ್ತಂತು ಮೂಲಕ ಸಂದೇಶ ಕಳಿಸಲು ಆವಿಷ್ಕರಿಸಿದ ಸಾಧನವೇ ರೇಡಿಯೋ. ಸಾವಿರದ 1835 ರಲ್ಲಿ ಕೂಕ್ ಎಂಬ ವಿಜ್ಞಾನಿಯು ಕಂಡುಹಿಡಿದ ಟೆಲಿಗ್ರಾಫ್, ರೇಡಿಯೋ ಆವಿಷ್ಕಾರಕ್ಕೆ ನಾಂದಿ ಹಾಡಿತು. 1895ರಲ್ಲಿ ರೇಡಿಯೋ ಸಂದೇಶವನ್ನು ಮೊದಲ ಬಾರಿ ಕಳುಹಿಸುವ ಮೂಲಕ ರೇಡಿಯೋ ಎಂಬ ಅದ್ಭುತ ಮಾತಿನ ಮಾಂತ್ರಿಕನ ಜನನವಾಯಿತು.


ಭಾರತದಲ್ಲಿ ಆಲ್ ಇಂಡಿಯಾ ರೇಡಿಯೋವನ್ನು ಅಧಿಕೃತವಾಗಿ ಆಕಾಶವಾಣಿ ಎಂದು ಕರೆಯಲಾಗುತ್ತದೆ. ಇದು ಭಾರತದ ರೇಡಿಯೋ ಪ್ರಸಾರ ಮಾಧ್ಯಮವಾಗಿದ್ದು, ಪ್ರಸಾರ ಭಾರತೀಯ ವಿಭಾಗವಾಗಿದೆ. ಇದನ್ನು 1936ರಲ್ಲಿ ಸ್ಥಾಪಿಸಲಾಗಿದ್ದು, ಪ್ರಪಂಚದ ದೊಡ್ಡ ರೇಡಿಯೋ ಸಂಪರ್ಕಗಳಲ್ಲಿ ಆಲ್ ಇಂಡಿಯಾ ರೇಡಿಯೋ ಕೂಡ ಒಂದಾಗಿದೆ.ಹೊಸ ದಿಲ್ಲಿಯ ಆಕಾಶವಾಣಿ ಭವನದಲ್ಲಿ ಇದರ ಪ್ರಧಾನ ಕಾರ್ಯಾಲಯವಿದೆ.


ಭಾರತದಲ್ಲಿ ಮೊಟ್ಟ ಮೊದಲ ರೇಡಿಯೋ ಕಾರ್ಯಕ್ರಮವು ಕರ್ನಾಟಕದ ಮೈಸೂರಿನಲ್ಲಿ ಪ್ರಸಾರವಾಯಿತು. ಪ್ರಾಧ್ಯಾಪಕರಾಗಿದ್ದ ಡಾಕ್ಟರ್ ಎಂ.ವಿ ಗೋಪಾಲಸ್ವಾಮಿಯವರು ಮುತುವರ್ಜಿ ವಹಿಸಿ 1935 ರಲ್ಲಿ ಮೊದಲ ಆಕಾಶವಾಣಿ ಕೇಂದ್ರ ಕಾರ್ಯಾರಂಭ ಮಾಡಿದ್ದು ಕುವೆಂಪು ಅವರ ಕವನ ವಾಚನದೊಂದಿಗೆ ಬಾನುಲಿ ಪ್ರಸಾರ ಕಾರ್ಯ ಮೊದಲುಗೊಂಡಿತ್ತು.


ರೇಡಿಯೋ ಕಾರ್ಯಕ್ರಮಗಳು ಸಮಾಜದ ಪ್ರತಿಯೊಬ್ಬರ ಮನೆಯನ್ನು ಬೆಳಗುವ ಆಶಾದೀಪದಂತೆ. ಮುಂಜಾನೆಯ ಸುಪ್ರಭಾತದಿಂದ ಹಿಡಿದು ವಾರ್ತೆ, ಚಲನಚಿತ್ರಗೀತೆ, ನಾಟಕ, ಕೃಷಿ ಮಾಹಿತಿ, ಸಿನಿಮಾ ಎಲ್ಲಾ ತರಹದ ಮನರಂಜನೆಗಳು ಈ ಪುಟ್ಟ ರೇಡಿಯೋ ಮೂಲಕವೇ ಸಿಗುತ್ತದೆ. ಹಿಂದಿನ ಕಾಲದಲ್ಲಿ ತುರ್ತು ಪರಿಸ್ಥಿತಿ, ಮಳೆ,ಪ್ರವಾಹದಂತಹ ಪ್ರಾಕೃತಿಕ ವಿಕೋಪ, ಯುದ್ಧ ಮೊದಲಾದ ಬಗ್ಗೆ ಜನರಿಗೆ ಮಾಹಿತಿ ನೀಡಿ ರಕ್ಷಿಸುತ್ತಿದ್ದುದು ರೇಡಿಯೋ ಎಂಬ ಪುಟ್ಟ ಉಪಕರಣ. ಜಗತ್ತು ಎಷ್ಟೇ ಮುಂದುವರಿದರೂ ರೇಡಿಯೋ ಮಾತ್ರ ತನ್ನ ಕೆಲಸವನ್ನು ಬದಲಿಸದೆ ಮಾಡುತ್ತಿದೆ. ರೇಡಿಯೋ ಎಂಬ ಉಪಕರಣ ಮಾಯವಾಗಿ ಎಲ್ಲರ ಮೊಬೈಲ್ ಫೋನ್ ನಲ್ಲಿ ರೇಡಿಯೋ ಎಂಬ ಆಪ್ ಈಗ ಕಾರ್ಯನಿರ್ವಹಿಸುತ್ತಿದೆ. ಆದರೂ ಆ ಆಪ್ ಮೂಲಕ ರೇಡಿಯೋ ಕೇಳುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. 


ಮಡಿಕೇರಿ, ಬೆಂಗಳೂರು, ಮಂಗಳೂರು ಮೊದಲಾದ ಆಕಾಶವಾಣಿ ಕೇಂದ್ರಗಳು ತಮ್ಮ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದು ಅದೆಷ್ಟೋ ಸಾಹಿತ್ಯ, ಸಾಂಸ್ಕೃತಿಕ, ಕೃಷಿ, ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುತ್ತಿವೆ. ವಿಶೇಷವಾಗಿ ಸಾಹಿತ್ಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸಗಳನ್ನು ಮಾಡುತ್ತಿವೆ. ಹಿಂದಿನ ಕಾಲದಲ್ಲಿ ಕೇವಲ ತಮ್ಮ ಧ್ವನಿಯ ಮೂಲಕ ಮನೆಯ ಆಪ್ತರೇ ಆಗಿ ಹೋಗಿದ್ದ ಆಕಾಶವಾಣಿ ಕೆಲಸಗಾರರು ಇಂದು ಮರೆತೇ ಹೋಗಿದ್ದಾರೆ. 


ಮನೆಗೊಂದು ಮಗು ಎಂಬಂತೆ ಮನೆಗೊಂದು ರೇಡಿಯೋ ಇರಲೇಬೇಕು. ದಿನಕ್ಕೊಮ್ಮೆಯಾದರೂ ರೇಡಿಯೋ ಕೇಳುವ ಹವ್ಯಾಸವನ್ನು ಮತ್ತೆ ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಟಿವಿ, ಮೊಬೈಲ್ ಬದಲಿಗೆ ರೇಡಿಯೋ ಕೇಳುವ ಹವ್ಯಾಸವನ್ನು ಬೆಳೆಸಿದರೆ ಜಗತ್ತಿನಲ್ಲಿ ತಾಂಡವವಾಡುತ್ತಿರುವ ಅವೆಷ್ಟೋ ಶಾರೀರಿಕ, ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲದೆ ನಮ್ಮ ನೆಲದ ಸಂಸ್ಕೃತಿ, ಸಾಂಸ್ಕೃತಿಕ ವೈಭವ, ಕೃಷಿ ಬದುಕು ,ದೈನಂದಿನ ಜೀವನ ಕ್ರಮಗಳು ಎಲ್ಲವೂ ಉಳಿದು ಮುಂದಿನ ಪೀಳಿಗೆಗೆ ಅದರ ಪರಿಚಯವಾಗುತ್ತದೆ. ರೇಡಿಯೋ ನಮ್ಮ ಆಪ್ತ ಸ್ನೇಹಿತನಂತೆ. ಸದಾ ನಮ್ಮ ಮನಸ್ಸಿಗೆ ಸಾಂತ್ವಾನದ ಮುದವನ್ನು ನೀಡುವ ಹಿತೈಷಿ. ಆದ್ದರಿಂದ ರೇಡಿಯೋಗಳ ಬಳಕೆ ಹೆಚ್ಚಾಗಬೇಕು. ಹಾಗೂ ರೇಡಿಯೋ ಕೇಳುವ ಹಳೆಯ ಸಂಸ್ಕೃತಿ ಮತ್ತೆ ನಮ್ಮ ಸಮಾಜದಲ್ಲಿ ಮೇಳೈಸಬೇಕಾಗಿದೆ.



Post a Comment

0 Comments