ಜಗತ್ತಿನಲ್ಲೇ ಸಿಂಗಾಪುರ ಪಾಸ್ ಪೋರ್ಟ್ ನಂ.1 ಸ್ಥಾನ

ಜಾಗತಿಕ ಮಟ್ಟದಲ್ಲಿ ಸಿಂಗಾಪುರ ಪಾಸ್ಪೋರ್ಟ್ ನಂ.1 ಸ್ಥಾನ ಪಡೆದಿದೆ. ಸಿಂಗಾಪುರ ಪಾಸ್ಪೋರ್ಟ್ ಇದ್ದರೆ ಜಗತ್ತಿನಲ್ಲಿನ 287 ದೇಶಗಳ ಪೈಕಿ 193 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ ಮಾಡಬಹುದಾಗಿದೆ. ನಮ್ಮ ಭಾರತ ದೇಶದ ಪಾಸ್ಪೋರ್ಟ್ 80ನೇ ಸ್ಥಾನ ಪಡೆದಿದೆ. ನಮ್ಮ ದೇಶದ ಪಾಸ್ಪೋರ್ಟ್ ಇದ್ದರೆ 56 ದೇಶಗಳಿಗೆ ಹೋಗಲು ವೀಸಾ ಅಗತ್ಯ ಇರುವುದಿಲ್ಲ. 80ನೇ ಸ್ಥಾನವನ್ನು ಭಾರತದೊಂದಿಗೆ ಅಲ್ಜೀರಿಯಾ, ತಜಕಿಸ್ತಾನ, ಈಕ್ವೆಟೋರಿಯಲ್ ಗಿನಿಯಾ ಕೂಡ ಹಂಚಿಕೊಂಡಿವೆ. ಹೆನ್ಲೆ ಪಾಸ್ಪೋರ್ಟ್ ಬಿಡುಗಡೆ ಮಾಡಿರುವ ಪಾಸ್ಪೋರ್ಟ್ ಸೂಚ್ಯಂಕ 2025ರ ವರದಿಯಲ್ಲಿ ಈ ವಿಷಯ ಅನಾವರಣಗೊಂಡಿದೆ.



ಸರಕಾರಿ ಸಲಹಾ ಸೇವೆಗಳಲ್ಲಿ ಪರಿಣತಿ ಹೊಂದಿರುವ ಜಾಗತಿಕ ಸಲಹಾ ಸಂಸ್ಥೆಯಾದ ಹೆನ್ಲೆ ಪಾರ್ಟ್ ನರ್ಸ್ ಈ ಮೇಲಿನ ಸೂಚ್ಯಂಕವನ್ನು ಸಂಗ್ರಹಿಸಿದೆ. ಈ ಸೂಚ್ಯಂಕವು ವೀಸಾ-ಮುಕ್ತ ಅಥವಾ ವೀಸಾ-ಆನ್- ಅರೈವಲ್ ಪ್ರದೇಶವನ್ನು ಒದಗಿಸುವ ಸ್ಥಳಗಳ ಸಂಖ್ಯೆಯ ಆಧಾರದ ಮೇಲೆ 199 ದೇಶಗಳ ಪಾಸ್ಪೋರ್ಟ್ಗಳನ್ನು ಮೌಲ್ಯ ಮಾಪನ ಮಾಡಿದೆ. ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೊಸಿಯೇಶನ್(ಐಎಟಿಎ) ದತ್ತಾಂಶವನ್ನು ಆಧರಿಸಿ ಶ್ರೇಯಾಂಕವನ್ನು ನೀಡಲಾಗಿದೆ.


ಜಾಗತಿಕ ಮಟ್ಟದ ಶ್ರೇಯಾಂಕ ಪಟ್ಟಿಯಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾ ಪಾಸ್ಪೋರ್ಟ್ಗಳು 2ನೇ ಸ್ಥಾನ ಗಳಿಸಿವೆ. ಈ ಪಾಸ್ಪೋರ್ಟ್ ಇದ್ದರೆ ವಿಶ್ವದ 190 ರಾಷ್ಟ್ರಗಳಿಗೆ ವೀಸಾ ಮುಕ್ತವಾಗಿ ಪ್ರವೇಶ ಪಡೆಯಬಹುದು. ಈ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಇಟಲಿ ಮತ್ತು ಸ್ಪೇನ್ ಸೇರಿದಂತೆ ಏಳು ರಾಷ್ಟ್ರಗಳ ಪಾಸ್ಪೋರ್ಟ್ ಪಡೆದುಕೊಂಡಿದ್ದು ಇದು ವಿಶ್ವದ 189 ರಾಷ್ಟ್ರಗಳಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಿಕೊಡುತ್ತದೆ.


ಅಫ್ಘಾನಿಸ್ತಾನ ಈ ಸೂಚ್ಯಂಕ ಪಟ್ಟಿಯಲ್ಲಿ 99ನೇ ಸ್ಥಾನ ಪಡೆದಿದ್ದು ಇಲ್ಲಿನ ಪಾಸ್ಪೋರ್ಟ್ ಕೇವಲ 25 ದೇಶಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತದೆ. 98ನೇ ಶ್ರೇಯಾಂಕದಲ್ಲಿರುವ ಸಿರಿಯಾ 27 ರಾಷ್ಟ್ರಗಳಿಗೆ ಮುಕ್ತ ಪ್ರವೇಶ ಪಡೆಯಬಹುದಾಗಿದೆ. 97ನೇ ಸ್ಥಾನವನ್ನು ಇರಾಕ್ ಪಡೆದುಕೊಂಡಿದ್ದು 37 ದೇಶಗಳಿಗೆ ವೀಸಾ ಮುಕ್ತ ಪ್ರವೇಶಕ್ಕೆ ರಹದಾರಿ ಮಾಡಿಕೊಡುತ್ತದೆ.


ವೀಸಾ ಮುಕ್ತ ಎಂದರೆ ಸುಲಭ ಪ್ರವೇಶ ಎಂದರ್ಥ. ಆಗಮನ,ಸಂದರ್ಶನ, ಪ್ರಯಾಣ ಸಂದರ್ಭದಲ್ಲಿ ಬೇರೆ ಬೇರೆ ತಾಣಗಳ ಪ್ರವೇಶ ಸಂದರ್ಭದಲ್ಲಿ ವೀಸಾ ಕೇಳುವುದಿಲ್ಲ.

Post a Comment

0 Comments