ಪಾಕಿಸ್ತಾನವು ಉತ್ತರ ಮತ್ತು ಪಶ್ಚಿಮ ಭಾರತದ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಭಾರತದ 15 ಕ್ಕೂ ಹೆಚ್ಚು ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಸೇನೆ ಪ್ರಯತ್ನಿಸಿದೆ. ಆದರೆ ಭಾರತೀಯ ಸೇನೆಯು ಪಾಕಿಸ್ತಾನದ ಕ್ಷಿಪಣಿಗಳ ಮೇಲೆ ತಕ್ಕ ಪ್ರತಿದಾಳಿ ನಡೆಸುವ ಮೂಲಕ ಪ್ರತ್ಯುತ್ತರ ನೀಡಿ ಪಾಕಿಸ್ತಾನದ ಯತ್ನವನ್ನು ವಿಫಲಗೊಳಿಸಿದೆ.
ಹಲವಾರು ಮಿಲಿಟರಿ ಗುರಿಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಲು ಪಾಕ್ ಸೇನೆ ಪ್ರಯತ್ನಿಸಿತು. ಇವುಗಳನ್ನು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಿಂದ ತಟಸ್ಥಗೊಳಿಸಲಾಯಿತು. ಈ ದಾಳಿಯ ಅವಶೇಷಗಳನ್ನು ಹಲವಾರು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಅಷ್ಟೇ ಅಲ್ಲದೆ ಇಂದು ಬೆಳಿಗ್ಗೆ, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ಕೂಡ ತಟಸ್ಥಗೊಳಿಸಲಾಗಿದೆ. ಬೆಳಿಗ್ಗೆ ಲಾಹೋರ್ನಲ್ಲಿ ಭೀಕರ ಸ್ಪೋಟದ ಬಗ್ಗೆ ವರದಿಯಾಗಿತ್ತು. ಆ ದಾಳಿ ಮೂಲಕ ಭಾರತೀಯ ಸೇನೆಯು ಪಾಕ್ ಮಿಲಿಟರಿ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ.
ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿ ಅಮಾಯಕ ಜನರನ್ನು ಬಲಿ ಪಡೆಯುವ ಪಾಕಿಸ್ತಾನಕ್ಕೆ ಭಾರತೀಯ ಸೇನೆಯು ತಕ್ಕ ಉತ್ತರ ನೀಡುತ್ತಿದೆ.
0 Comments