ಬದುಕನ್ನು ಗೆದ್ದ 'ವಿಜೇತ' ಶಾಲೆಯ ವಿಶೇಷ ಮಕ್ಕಳು

ಸುಮಾರು 9 ವರ್ಷಗಳಿಂದ 130 ವಿಶೇಷ ಚೇತನ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಕಾರ್ಕಳದ ವಿಜೇತ ವಿಶೇಷ ಶಾಲೆಯ ಕುರಿತು ಹೇಳಲೇ ಬೇಕು. ಇಂತಹ ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ಇದರ ಹಿಂದಿನ ರೂವಾರಿಗಳು, ಛಲದಿಂದ ಇಂತಹ ಸಂಸ್ಥೆಯನ್ನು ಕಟ್ಟಿದ ಡಾ.ಕಾಂತಿ ಹರೀಶ್ ಹಾಗೂ ಅವರ ಪತಿ ಹರೀಶ್ ಜೊತೆಗೆ ಅಲ್ಲಿನ ಶಿಕ್ಷಕರು ಇವರೆಲ್ಲರ ಪರಿಶ್ರಮದಿಂದ ನಡೆಯುತ್ತಿರುವ ವಿಶೇಷ ಮಕ್ಕಳ ಶಾಲೆ.
ಕಾರ್ಕಳದ ಕುಕ್ಕುಂದೂರು ಅಯ್ಯಪ್ಪ ನಗರದಲ್ಲಿ ಸಮಾಜದಲ್ಲಿನ ಮಾನಸಿಕವಾಗಿ ಭಿನ್ನ ಸಾಮರ್ಥ್ಯ ಹೊಂದಿರುವ ವಿಶೇಷ ಚೇತನ (ದಿವ್ಯಾಂಗ) ಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಗುರಿಯೊಂದಿಗೆ ಆರಂಭವಾದ,  ಮಕ್ಕಳಿಗೆ ವಸತಿ ನಿಲಯದ ವ್ಯವಸ್ಥೆಯೊಂದಿಗೆ ಉಚಿತ ಶಿಕ್ಷಣ ನೀಡುವ 'ವಿಜೇತ' ವಸತಿಯುತ ವಿಶೇಷ ಶಾಲೆ ಶೈಕ್ಷಣಿಕ ವಿಷಯ ಮಾತ್ರವಲ್ಲದೇ ಬದುಕಿಗೆ ಬೇಕಾಗುವ ಸ್ವಾವಲಂಬಿಯಾಗಿ ಮುನ್ನಡೆಯುವ ಶಿಕ್ಷಣವನ್ನು ಕಲಿಸುವ ಕಾಯಕವನ್ನು ಮಾಡುತ್ತಿದೆ.
ಮುಗ್ಧ ಮನಸ್ಸಿನ ಪ್ರತಿಯೊಬ್ಬ ದೇವರ ಮಕ್ಕಳ ಸಮಸ್ಯೆಯು ವಿಭಿನ್ನವಾಗಿರುತ್ತದೆ. ಅವರ ಬುದ್ಧಿ ಶಕ್ತಿಗೆ ಅನುಗುಣವಾಗಿ ಪಾಠವನ್ನು ಕಲಿಸುವ ಜೊತೆಗೆ ವಿಶೇಷವಾಗಿ ಮಕ್ಕಳಿಗೆ ನಿತ್ಯ ಯೋಗ, ಫಿಸಿಯೋಥೆರಫಿ, ಸ್ಪೀಚ್ ಥೆರಫಿ, ಅಕ್ಯುಪೇಶನಲ್ ಥೆರಪಿ, ಕಂಪ್ಯೂಟರ್ ತರಗತಿ, ಕರಕುಶಲ ಕಲೆ, ಚಿತ್ರಕಲೆ, ಯಕ್ಷಗಾನ ಸ್ಮರಣಿಕೆ ತಯಾರಿ, ದೀಪಾವಳಿ ಸಂದರ್ಭ ಹಣತೆ ತಯಾರಿ, ಪೇಪರ್ ಕ್ರಾಫ್ಟ್, ವಿವಿಧ ರೀತಿಯ ಹೂಗುಚ್ಛ ಹೀಗೆ ನಾನಾ ಬಗೆಯ ವಸ್ತುಗಳನ್ನು ತಯಾರಿಸುವಲ್ಲಿ ಇಲ್ಲಿನ ವಿಶೇಷ ವಿದ್ಯಾರ್ಥಿಗಳು ನಿಪುಣರಾಗಿದ್ದು, ವೃತ್ತಿ ತರಬೇತಿ, ದೈಹಿಕ ಶಿಕ್ಷಣ ತರಬೇತಿ ಹಾಗೂ ಸಾಂಸ್ಕೃತಿಕ ತರಬೇತಿ ಹೀಗೆ ಬಹುಮುಖವಾಗಿ ದೇವರ ಮಕ್ಕಳನ್ನು ಬೆಳೆಸುವ ವಿಶಿಷ್ಟವಾದ ಕಾರ್ಯವನ್ನು ಡಾ.ಕಾಂತಿ ಹರೀಶ್ ಹಾಗೂ ಅಲ್ಲಿನ 32 ಶಿಕ್ಷಕರು ಮಾಡುತ್ತಿದ್ದಾರೆ.
 
ಡಾ. ಕಾಂತಿ ಹರೀಶ್ ಅವರು ತಮ್ಮ ಪರಿಶ್ರಮದಿಂದ ಕಟ್ಟಿ ಬೆಳೆಸಿ ಇಂದು ಈ ಸಂಸ್ಥೆಯು 9 ವರ್ಷಗಳನ್ನು ಪೂರೈಸಿದೆ.
ಸರ್ಕಾರದಿಂದ 50% ಅನುದಾನ ಬರುತ್ತಿದ್ದು, ಉಳಿದ ಮೊತ್ತವನ್ನು ಕ್ರೋಡಿಕರಿಸುವುದೇ ದೊಡ್ಡ ಸವಾಲಾಗಿದೆ. ಸಹೃದಯಿ ದಾನಿಗಳ ನೆರವಿನಿಂದ ಇಲ್ಲಿವರೆಗೂ ಬರಲು ಸಾಧ್ಯವಾಗಿದೆ. ಹೀಗಾಗಿ ಹಲವು ಸವಾಲುಗಳ ಮಧ್ಯೆ ದೇವರ ಮಕ್ಕಳನ್ನು ಸಮಾಜದ ಭಾಗವಾಗಿಸಲು ಶ್ರಮಿಸುತ್ತಿರುವ, ದೇವರ ಮಕ್ಕಳ ಸೇವೆಯನ್ನು ಮಾಡುತ್ತಿರುವ ಡಾ.ಕಾಂತಿ ಹರೀಶ್ ಹಾಗೂ ಅಲ್ಲಿನ ಶಿಕ್ಷಕರ ಪ್ರಯತ್ನ ಶ್ಲಾಘನೀಯ..

Post a Comment

0 Comments