ಹೆಚ್ಚುತ್ತಿರುವ ಭೂಕುಸಿತ; ಅಪಾಯದಲ್ಲಿ ಪಶ್ಚಿಮ ಘಟ್ಟ

ಇತ್ತೀಚಿನ ದಿನಗಳಲ್ಲಿ ಭೂಕುಸಿತ ಎಂಬುದು ಸಾಮಾನ್ಯವಾಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಅದರಲ್ಲೂ ಪಶ್ಚಿಮ ಘಟ್ಟ ಭೂಕುಸಿತಕ್ಕೆ ಒಳಗಾಗುತ್ತಿದ್ದು ಭವಿಷ್ಯದಲ್ಲಿ ಮಹಾ ಅಪಾಯದ ಎಚ್ಚರಿಕೆಯನ್ನು ನೀಡಿದೆ. ಅನಿಯಂತ್ರಿತ ಪ್ರವಾಸೋದ್ಯಮ, ಹೆಚ್ಚುತ್ತಿರುವ ಅಭಿವೃದ್ಧಿ ಚಟುವಟಿಕೆಗಳಿಂದ ಕರ್ನಾಟಕದ ಪಶ್ಚಿಮ ಘಟ್ಟ ಮತ್ತಷ್ಟು ಅಪಾಯದ ಸನ್ನಿವೇಶವನ್ನು ಎದುರಿಸುತ್ತಿದೆ. ಕಂದಾಯ ಮತ್ತು ವಿಪತ್ತು ನಿರ್ವಹಣಾ ವಿಭಾಗವು ರಾಜ್ಯ ಸರಕಾರಕ್ಕೆ ಈ ಕುರಿತು ವರದಿ ಸಲ್ಲಿಸಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಿಮ ಘಟ್ಟದಲ್ಲಿ ಮತ್ತಷ್ಟು ಅಪಾಯ ಸಂಭವಿಸಲಿದೆ ಎಂಬ ಎಚ್ಚರಿಕೆಯ ಮುನ್ಸೂಚನೆಯನ್ನು ನೀಡಿದೆ.
ಕಳೆದ 19 ವರ್ಷಗಳಲ್ಲಿ ಪಶ್ಚಿಮ ಘಟ್ಟವು 1403 ಭೂಕುಸಿತಗಳನ್ನು ಕಂಡಿದ್ದು 98 ಜನ ಮೃತಪಟ್ಟಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕೊರೆದಿರುವುದು, ರಸ್ತೆ ವಿಸ್ತರಣೆಗಾಗಿ ಭೂ ಭಾಗಗಳನ್ನು ಅಗೆದು ಮಾಡಿರುವ ವ್ಯತ್ಯಾಸ, ಮಣ್ಣಿನ ಸವಕಳಿ, ಸಣ್ಣ ತೊರೆಗಳಿಂದ ಸೃಷ್ಟಿಯಾಗಿರುವ ಇಳಿಜಾರು, ಮಾನವ ನಿರ್ಮಿತ ಒತ್ತಡಗಳಿಂದಾಗಿ ಭೂಕುಸಿತದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಅಲ್ಲದೆ ಪಶ್ಚಿಮ ಘಟ್ಟದ ಎಂಟು ಜಿಲ್ಲೆಗಳ ವ್ಯಾಪ್ತಿಯ 31,231 ಚದರ ಕಿಲೋಮೀಟರ್ ಪ್ರದೇಶದಲ್ಲಿ ಭೂಕುಸಿತದ ಅಪಾಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೊಡಗು ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶದ ಶೇಕಡ 96 ಕ್ಕಿಂತ ಹೆಚ್ಚು ಪ್ರದೇಶ ಭೂಕುಸಿತಕ್ಕೆ ಒಳಗಾಗುವ ಅಪಾಯವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶೇಕಡಾ 94.9, ಉತ್ತರ ಕನ್ನಡ ಜಿಲ್ಲೆಯ 81.3ರಷ್ಟು ಭೂಪ್ರದೇಶಗಳಲ್ಲಿ ಕುಸಿತದ ಸಂಭಾವನೀಯತೆ ಹೆಚ್ಚಿದೆ.

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯು 609 ಬಾರಿ, ಚಿಕ್ಕಮಗಳೂರು ಜಿಲ್ಲೆ 260, ಕೊಡಗಿನಲ್ಲಿ 188 ಮತ್ತು ದಕ್ಷಿಣ ಕನ್ನಡದಲ್ಲಿ 166 ಬಾರಿ ಭೂಕುಸಿತಗಳು ಸಂಭವಿಸಿದೆ.

ಪಶ್ಚಿಮ ಘಟ್ಟಗಳಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಾಗಿರುವುದರಿಂದ ಇತ್ತೀಚಿಗೆ ಭೂಕುಸಿತ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯ ಸರಕಾರ ನಿಯಮಿತವಾಗಿ ತಪಾಸಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ಭೂಕುಸಿತ ಸಂಭವಿಸುವುದನ್ನು ತಪ್ಪಿಸಬೇಕು ಎಂದು ಪರಿಸರ ತಜ್ಞರಿಂದ ಅಭಿಪ್ರಾಯ ವ್ಯಕ್ತವಾಗಿದೆ. ಪ್ರವಾಸೋದ್ಯಮದ ಜೊತೆಗೆ ಸರಕಾರದ ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳು ಕೂಡ ಪಶ್ಚಿಮ ಘಟ್ಟಕ್ಕೆ ಅಪಾಯವನ್ನು ತಂದೊಡ್ಡಿದೆ. ಜಲಾಶಯಗಳು, ಅಣೆಕಟ್ಟುಗಳು, ಹೆದ್ದಾರಿಗಳು ಸೇರಿದಂತೆ ಅವೈಜ್ಞಾನಿಕ ಯೋಜನೆಗಳನ್ನು ಕೈ ಬಿಡದಿದ್ದರೆ ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದಂತಹ ಘಟನೆಗಳು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

Post a Comment

0 Comments