ಚಂದ್ರನಂಗಳಕ್ಕೆ ಖಾಸಗಿ ನೌಕೆಯೊಂದು ಮೊದಲ ಬಾರಿ ಲಗ್ಗೆ ಇಟ್ಟು ಇತಿಹಾಸ ಸೃಷ್ಟಿಸಿದೆ. ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿವಿಧ ಸಂಶೋಧನಾ ಉಪಕರಣಗಳನ್ನು ಹೊತ್ತಿದ್ದ ಖಾಸಗಿ ಸಂಸ್ಥೆಯೊಂದರ ಲ್ಯಾಂಡರ್ ನೌಕೆ ಭಾನುವಾರ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ಇದುವರೆಗೆ ರಷ್ಯಾ, ಅಮೆರಿಕ, ಚೀನಾ, ಜಪಾನ್ ಮತ್ತು ಭಾರತದ ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳು ತಮ್ಮ ನೌಕೆಯನ್ನು ಚಂದ್ರನ ಮೇಲೆ ಇಳಿಸಲು ಯಶಸ್ವಿಯಾಗಿದ್ದವು. ಆದರೆ ಇದೀಗ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದರ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ.
ಅಮೆರಿಕಾದ "ಫೈಯರ್ ಫ್ಲೈ ಏರೋಸ್ಪೇಸ್" ಎಂಬ ಖಾಸಗಿ ಕಂಪನಿ ಕಳೆದ ಜನವರಿ 15ಕ್ಕೆ ಚಂದ್ರನ ಅಂಗಳಕ್ಕೆ ಹಾರಿಸಿದ "ಬ್ಲೂಘೋಸ್ಟ್" ಲ್ಯಾಂಡರ್ ಭಾನುವಾರ ಸುಸೂತ್ರವಾಗಿ ಚಂದ್ರನ ಮಣ್ಣನ್ನು ಸ್ಪರ್ಶಿಸಿದೆ. ವಿಜ್ಞಾನಿಗಳ ಸತತ ಮೂರು ವರ್ಷಗಳ ಕಠಿಣ ಪರಿಶ್ರಮಕ್ಕೆ ಸಂದ ಬಹುದೊಡ್ಡ ಜಯ ಇದಾಗಿದೆ.
ಈ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಸೆರೆ ಹಿಡಿದ ಮೊದಲ ಚಿತ್ರವನ್ನು ಕಳುಹಿಸಿದ್ದು, ಇದನ್ನು ಫೈಯರ್ ಫ್ಲೈ ಏರೋಸ್ಪೇಸ್ ಸಂಸ್ಥೆ ತಾನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಲ್ಯಾಂಡರ್ ಸುಮಾರು 14 ದಿನಗಳ ಕಾಲ ಚಂದ್ರನ ಅಂಗಳವನ್ನು ಸುತ್ತಾಡಿ ಹಲವು ಅಧ್ಯಯನಗಳನ್ನು ಕೈಗೊಳ್ಳಲಿದೆ ಎಂದು ಅಂತರಾಷ್ಟ್ರೀಯ ವರದಿಗಳು ಹೇಳಿವೆ.
0 Comments