59ನೇ ಜ್ಞಾನಪೀಠ ಪ್ರಶಸ್ತಿ ಮುಡಿಗೇರಿಸಿಕೊಂಡ ವಿನೋದ್ ಕುಮಾರ್ ಶುಕ್ಲಾ

ಸಾಹಿತ್ಯ ಸಾಧನೆಗಾಗಿ ಕೊಡ ಮಾಡುವ ಭಾರತೀಯ ಅತ್ಯುನ್ನತ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿಯಾಗಿದೆ. 59ನೇ ಜ್ಞಾನಪೀಠ ಪ್ರಶಸ್ತಿಗೆ ಛತ್ತೀಸ್ಗಡದ ಸಣ್ಣ ಕಥೆಗಾರ ವಿನೋದ್ ಕುಮಾರ್ ಶುಕ್ಲ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದ ಈ ಪ್ರಶಸ್ತಿಗೆ ಭಾಜನರಾದ ಮೊದಲ ಛತ್ತೀಸ್ಗಡದ ಸಾಹಿತಿಯಾಗಿದ್ದಾರೆ. 
ಹಿಂದಿ ಭಾಷೆಯ ಸಮಕಾಲೀನ ಬರಹಗಾರರಲ್ಲಿ 88 ವರ್ಷದ ವಿನೋದ್ ಶುಕ್ಲಾ ಕೂಡ ಪ್ರಮುಖರು. ಕವಿತೆ, ಪ್ರಬಂಧ, ಸಣ್ಣ ಕಥೆಗಳು ಸೇರಿದಂತೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಅವರು ಸಾಹಿತ್ಯ ರಚನೆ ಮಾಡಿದ್ದಾರೆ. ಹಿಂದಿ ಭಾಷೆಗೆ ದೊರೆಯುತ್ತಿರುವ 12ನೇ ಜ್ಞಾನಪೀಠ ಪ್ರಶಸ್ತಿ ಇದಾಗಿದೆ.  ಈ ಜ್ಞಾನಪೀಠ ಪ್ರಶಸ್ತಿಯು 11 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಸರಸ್ವತಿಯ ಕಂಚಿನ ಪ್ರತಿಮೆಯನ್ನು ಒಳಗೊಂಡಿದೆ. 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಥೆಗಾರ್ತಿ ಪ್ರತಿಭಾರಾಯ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ವಿನೋದ್ ಕುಮಾರ್ ಶುಕ್ಲ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. "ಹಿಂದಿ ಸರಸ್ವತ ಲೋಕಕ್ಕೆ ವಿನೋದ್ ಅವರ ಕೊಡುಗೆಗಳನ್ನು ಗಮನಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ ಕ್ರಿಯಾತ್ಮಕತೆ ಮತ್ತು ವಿಶಿಷ್ಟವಾದ ಬರಹಗಳ ಶೈಲಿಗಾಗಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ" ಎಂದು ಆಯ್ಕೆ ಸಮಿತಿಯು ತಿಳಿಸಿದೆ.

ವಿನೋದ್ ಕುಮಾರ್ ಶುಕ್ಲಾ ಅವರ "ದಿವಾರ್ ಮೇ ಏಕ್ ಖಿಡಕಿ ರಹತೀ ಥೀ"ಕೃತಿಗೆ ವಿನೋದ್ ಅವರಿಗೆ 1999 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. "ನೌಕರ್ ಕಿ ಕಮೀಜ್" (1979) ಅವರ ಪ್ರಮುಖ ಕೃತಿಯಾಗಿದೆ. ಈ ಕೃತಿಯನ್ನು ಇಟ್ಟುಕೊಂಡು ಇದೇ ಹೆಸರಿನ ಸಿನಿಮಾವನ್ನು ಮೌನಿ ಕೌಲ್ ಅವರು ನಿರ್ದೇಶಿಸಿದ್ದಾರೆ. "ಸಬ್ ಕುಚ್ ಹೋನ ಬಚಾ ರಹೇಗಾ" (1992) ಅವರ ಪ್ರಮುಖ ಕವನ ಸಂಕಲನವಾಗಿದೆ.

Post a Comment

0 Comments