ಇತ್ತೀಚೆಗೆ ಊಖಿಮಠದಲ್ಲಿ ಕೇದಾರನಾಥ ರಾವಲ್ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ ನಡೆದ ಬದರಿನಾಥ ಕೇದಾರನಾಥ ಮಂದಿರ ಸಮಿತಿ ಸಭೆಯಲ್ಲಿ ಪದ್ಧತಿಯಂತೆ ವೈಶಾಖ ಮಾಸದ ಪಂಚಮಿ ದಿನದಂದು ಮಂದಿರದ ಬಾಗಿಲು ತೆರೆಯುವ ದಿನಾಂಕವನ್ನು ನಿಗದಿಗೊಳಿಸಲಾಗಿದೆ.
ಈ ಸಭೆಯಲ್ಲಿ ಕೇದಾರನಾಥ ಮಂದಿರದ ಪಂಚ ಪೂಜಾರಿಗಳು, ವೇದಪಾಠಿಗಳು ಉಪಸ್ಥಿತರಿದ್ದರು. ಹಾಗೆಯೇ ಈ ವರ್ಷ ಕೇದಾರನಾಥ ಜ್ಯೋತಿರ್ಲಿಂಗದ ಪೂಜೆ ಮಾಡುವ ಪ್ರಧಾನ ಅರ್ಚಕರನ್ನಾಗಿ ಕನ್ನಡಿಗರಾದ ಶ್ರೀ ವಾಗೀಶಲಿಂಗ ಅವರನ್ನು ನೇಮಕ ಮಾಡಿ ಜಗದ್ಗುರುಗಳು ಘೋಷಣೆ ಮಾಡಿದರು.
ಆರು ತಿಂಗಳ ಕಾಲ ತೆರೆದಿರುವ ಕೇದಾರನಾಥ ಮಂದಿರವು ಪ್ರತಿ ದೀಪಾವಳಿ ಪಾಡ್ಯದಂದು ಮುಚ್ಚಲ್ಪಡುತ್ತದೆ. ಹಾಗೆ ಮಂದಿರ ಮುಚ್ಚಿದ ನಂತರ ಕೇದಾರನಾಥನ ಉತ್ಸವ ಮೂರ್ತಿಯು ಊಖಿಮಠದ ಓಂಕಾರೇಶ್ವರ ಮಂದಿರದ ಗದ್ದಿ ಸ್ಥಾನದಲ್ಲಿ ಪೂಜೆಗೊಳ್ಳುತ್ತದೆ. ದೇವಾಲಯದ ಬಾಗಿಲು ತೆರೆಯುವ ಮೂರು ದಿನಗಳ ಮೊದಲೇ ಉಕ್ಕಿಮಠದಿಂದ ಸಕಲ ಮಿಲಿಟರಿ ವಾದ್ಯ ಮೇಳದೊಂದಿಗೆ ಜಗದ್ಗುರುಗಳ ಕಿರೀಟ ಧರಿಸಿದ ಕೇದಾರನಾಥನ ಉತ್ಸವ ಮೂರ್ತಿಯ ಡೋಲಿ ಮೆರವಣಿಗೆ ಆರಂಭವಾಗುತ್ತದೆ. ಬಾಗಿಲು ತೆರೆದ ನಂತರ ಕೇದಾರನಾಥನಿಗೆ ಕಿರೀಟ ತೊಡಿಸಿ ಪೂಜೆ ಸಲ್ಲಿಸುವುದು ಇಲ್ಲಿನ ಪದ್ಧತಿ.
0 Comments