ಇತ್ತೀಚಿನ ದಿನಗಳಲ್ಲಿ ವ್ಯಾಪಾರ, ವಹಿವಾಟಿನ ಹೆಸರಿನಲ್ಲಿ ಗ್ರಾಹಕರಿಗೆ ದೊಡ್ಡ ರೀತಿಯ ಮೋಸ, ವಂಚನೆಗಳು ನಡೆಯುತ್ತಿವೆ. ತಾವು ಖರೀದಿಸುವ ಯಾವುದೇ ರೀತಿಯ ವಸ್ತುಗಳ ಗುಣಮಟ್ಟ ಕಳಪೆಯಾಗಿರುವುದು, ವಸ್ತುಗಳಿಗೆ ಪಾವತಿಸುವ ಬೆಲೆಗಳಲ್ಲಿ ಮೋಸ ಮಾಡುವುದು ಅಥವಾ ಇನ್ಯಾವುದೋ ರೀತಿಯಲ್ಲಿ ವ್ಯಾಪಾರ ವಹಿವಾಟುಗಳ ಸಂದರ್ಭದಲ್ಲಿ ಗ್ರಾಹಕರಿಗೆ ಶೋಷಣೆಯಾಗುವುದು ನಡೆಯುತ್ತಲೇ ಇರುತ್ತದೆ. ಗ್ರಾಹಕರನ್ನು ದೇವರು ಎಂದು ವ್ಯಾಪಾರಸ್ಥರು ಹೇಳುತ್ತಾರೆ. ಆದರೆ ಗ್ರಾಹಕರಿಗೆ ವ್ಯಾಪಾರಸ್ಥರು ಸೇವೆಯನ್ನು ನೀಡುವ ಸಂದರ್ಭದಲ್ಲಿ ಕೀಳು ಮಟ್ಟದಲ್ಲಿ ನಡೆಸಿಕೊಳ್ಳುವವರೂ ಇದ್ದಾರೆ. ಗ್ರಾಹಕರು ತಾವು ಖರೀದಿಸುವ ಅಥವಾ ಪಡೆಯುವ ಯಾವುದೇ ಸೇವೆಗೆ ಸರಿಯಾದ ಹಣವನ್ನು ಪಾವತಿಸುತ್ತಾರೆ ಎಂಬ ವಾಸ್ತವ ಸತ್ಯವನ್ನು ಕೆಲವೊಬ್ಬ ವ್ಯಾಪಾರಿಗಳು ಅಥವಾ ಉದ್ಯಮಿಗಳು ಮರೆತಿರುತ್ತಾರೆ. ಅಷ್ಟೇ ಅಲ್ಲದೆ ಗ್ರಾಹಕರಿಗೆ ತಪ್ಪು ಮಾಹಿತಿ, ಜಾಹೀರಾತುಗಳನ್ನು ನೀಡಿ ವಂಚಿಸುತ್ತಿರುವ ವಿದ್ಯಾಮಾನಗಳೂ ಕಂಡು ಬರುತ್ತಿವೆ. ಗ್ರಾಹಕರನ್ನು ಇಂತಹ ಶೋಷಣೆಗಳಿಂದ ತಡೆಯಲು ಗ್ರಾಹಕ ಹಕ್ಕುಗಳ ಕಾಯ್ದೆಯಿಂದ ಮಾತ್ರ ಸಾಧ್ಯ.
1983 ರಲ್ಲಿ ಅಮೆರಿಕದಲ್ಲಿ ಗ್ರಾಹಕರ ಆಂದೋಲನ ಆರಂಭಗೊಂಡಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 15ರಂದು ಅಂತರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಗ್ರಾಹಕರ ಹಕ್ಕುಗಳ ರಕ್ಷಣೆ ಮತ್ತು ಮಾರುಕಟ್ಟೆಯಲಾಗುತ್ತಿರುವ ಶೋಷಣೆ, ವಂಚನೆ ಮತ್ತು ಅನ್ಯಾಯದಿಂದ ಗ್ರಾಹಕರಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಕಾಯ್ದೆಯಡಿ ಅವಕಾಶವಿದೆ.
ಪ್ರಸ್ತುತ ವ್ಯಾಪಾರ ಅಥವಾ ವ್ಯವಹಾರಿಕ ಜಗತ್ತಿಗೆ ಗ್ರಾಹಕನೇ ಅಧಿಪತಿ. ಯಾವುದೇ ಒಂದು ವ್ಯಾಪಾರ ಕ್ಷೇತ್ರದಲ್ಲಿ ಗ್ರಾಹಕನ ವರ್ತನೆ ಅಥವಾ ಮಾತಿನಲ್ಲಾಗುವ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಿ ಸರಕು ಅಥವಾ ಸೇವೆಗಳನ್ನು ಮಾರಾಟ ಮಾಡುವ ಚಾಣಾಕ್ಷತನವನ್ನು ಪ್ರತಿಯೊಂದು ಸಂಸ್ಥೆಗಳು ಅರಿತುಕೊಂಡಿರುತ್ತವೆ. ಆದರೆ ಕೆಲವೊಂದು ಕಡೆ ಗ್ರಾಹಕರ ಅಭಿರುಚಿಯನ್ನು ಅರಿತುಕೊಳ್ಳುವ ಸಂಸ್ಥೆಗಳು ಇಲ್ಲವಾಗಿದೆ. ಬದಲಾಗಿ ಒತ್ತಾಯಪೂರ್ವಕವಾಗಿ ವ್ಯಾಪಾರ ನಡೆಸುವುದು, ಇನ್ನೂ ಕೆಲವೆಡೆ ಗ್ರಾಹಕರ ಬೇಡಿಕೆಗಳಿಗೆ ಸರಿಯಾಗಿ ಸ್ಪಂದನೆಗಳನ್ನು ನೀಡದೇ ಇರುವಂತಹ ಪ್ರಸಂಗಗಳೂ ಎದುರಾಗುತ್ತಿವೆ. ಅಷ್ಟೇ ಅಲ್ಲದೆ ಗ್ರಾಹಕರು ಪಾಶ್ಚತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ತಮ್ಮ ಬೇಕು ಬೇಡಗಳು, ಆಸೆ-ಆಕಾಂಕ್ಷೆಗಳು, ಕೊಂಡುಕೊಳ್ಳುವಿಕೆ ಮತ್ತು ಬಣ್ಣ, ರಚನೆ, ವಿನ್ಯಾಸಗಳೆಲ್ಲವೂ ಬದಲಾವಣೆಯ ರೂಪವನ್ನು ಪಡೆದುಕೊಂಡಿದ್ದು ಸಂತೃಪ್ತಿ ಎನ್ನುವುದು ಗ್ರಾಹಕರಿಗೂ ಇಲ್ಲವಾಗಿದೆ. ಇದರಿಂದಾಗಿ ಒಟ್ಟಾರೆ ಮಾರುಕಟ್ಟೆಯ ಚಿತ್ರಣವೇ ಬದಲಾವಣೆಯ ಪಥದತ್ತ ಸಾಗುತ್ತಿದೆ.
ಭಾರತದಲ್ಲಿ ಏಕಸ್ವಾಮ್ಯ ನಿಯಂತ್ರಣ ಮತ್ತು ವ್ಯಾಪಾರ ಕಾರ್ಯಚರಣೆಯ ಹೆಸರಿನಲ್ಲಿ ಉತ್ಪಾದಕರು ಮತ್ತು ವ್ಯಾಪಾರಿಗಳಿಂದ ಗ್ರಾಹಕರು ಶೋಷಣೆಯಾಗದಂತೆ ನಿಯಂತ್ರಿಸಲು 1986ರಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ವ್ಯಾಪಾರಿಗಳಿಂದ ಶೋಷಣೆ ಮತ್ತು ವಂಚನೆಗಳನ್ನು ನಿಯಂತ್ರಿಸಲು ಹಾಗೂ ತಡೆಗಟ್ಟುವಿಕೆ ಮತ್ತು ಗ್ರಾಹಕರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಈ ಕಾಯ್ದೆಯು ಉಪಯೋಗವಾಗುತ್ತದೆ.
ದಿನಗಳಲ್ಲಿ ಮಾರುಕಟ್ಟೆಯಲ್ಲಿನ ಉತ್ಪಾದನಾ ಸಂಸ್ಥೆಗಳು ಅಥವಾ ವ್ಯಾಪಾರಸ್ಥರು ಕೇವಲ ತಮ್ಮ ಲಾಭ ಸಂಪಾದನೆಗಾಗಿ ಕೆಲಸ ಮಾಡದೆ ಗ್ರಾಹಕರ ಅಭಿರುಚಿಗಳಿಗೂ ಒತ್ತು ಕೊಟ್ಟು ಉತ್ತಮ ಗುಣಮಟ್ಟದ ಹೆಚ್ಚು ಬಾಳಿಕೆ ಬರುವಂತಹ ಸಮರ್ಪಕ ವಸ್ತುಗಳನ್ನು ನಿಗದಿತ ಬೆಲೆಗಳಿಗೆ ನೀಡಿ ಗ್ರಾಹಕರನ್ನು ಸಂತೃಪ್ತಿಗೊಳಿಸುವ ರೀತಿಯಲ್ಲಿ ವ್ಯವಹಾರ ನಡೆಸಬೇಕು. ಆಗ ಮಾತ್ರ ಸರಕು ಮತ್ತು ಸೇವೆಗಳ ಮೇಲೆ ನಂಬಿಕೆ, ವಿಶ್ವಾಸ ಮತ್ತು ಬ್ರಾಂಡ್ ಇಮೇಜ್ ಮೂಡಲು ಸಾಧ್ಯ.
1986ರ ಗ್ರಾಹಕ ಹಿತ ರಕ್ಷಣಾ ಕಾಯ್ದೆಯ ಪ್ರಕಾರ ಪ್ರತಿಯೊಬ್ಬ ಗ್ರಾಹಕನಿಗೂ ತನಗಾದ ಅನ್ಯಾಯಕ್ಕೆ ಸೂಕ್ತ ಪರಿಹಾರ ಮತ್ತು ನ್ಯಾಯವನ್ನು ಪಡೆದುಕೊಳ್ಳಲು ಅವಕಾಶವಿದೆ. ಗ್ರಾಹಕರು ತಾವು ಮೋಸ ಹೋದಾಗ ಅಥವಾ ಶೋಷಣೆಗೆ ಒಳಗಾದಾಗ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಗ್ರಾಹಕ ಹಿತ ರಕ್ಷಣಾ ಮಂಡಳಿಗಳಿಗೆ ಹೇಗೆ ದೂರು ಸಲ್ಲಿಸುವುದು, ಅವುಗಳ ಕಾರ್ಯವಿಧಾನ ಮತ್ತು ಅನುಸರಿಸಬೇಕಾದ ನೀತಿ ನಿಯಮಗಳ ಬಗ್ಗೆ ಒದಗಿಸಬೇಕಾದ ದಾಖಲೆಗಳ ಬಗ್ಗೆ ಸಮಗ್ರವಾಗಿ ವಿವರಿಸಲಾಗಿದೆ.
ಗ್ರಾಹಕನೇ ಪ್ರತಿಯೊಬ್ಬ ವ್ಯಾಪಾರಸ್ಥರ ಬದುಕಿನ ಆಶಾಕಿರಣ. ಗ್ರಾಹಕ ತನಗೆ ಬೇಕಾದ ವಸ್ತುಗಳನ್ನು ಅಥವಾ ಸೇವೆಗಳನ್ನು ಪಡೆದುಕೊಳ್ಳದೆ ಹೋದರೆ ವ್ಯಾಪಾರ ವಹಿವಾಟು ನಡೆಸುವವರ ಜೀವನಕ್ಕೆ ಆದಾಯದ ಆಧಾರವೇ ಇಲ್ಲದಂತಾಗುತ್ತದೆ. ಆದ್ದರಿಂದ ಎಲ್ಲಾ ಗ್ರಾಹಕರಿಗೂ ಉತ್ತಮ ಗುಣಮಟ್ಟದ ವಸ್ತುಗಳನ್ನು ಸರಿಯಾದ ಬೆಲೆಗೆ ಮಾರಾಟ ಮಾಡುವುದರ ಜೊತೆಗೆ ಸಮರ್ಪಕ ಸೇವೆಗಳನ್ನು ನೀಡುವ ಮನೋಭಾವವನ್ನು ಎಲ್ಲಾ ಸಂಸ್ಥೆಗಳು, ಉದ್ಯಮಗಳು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳು ಬೆಳೆಸಿಕೊಳ್ಳಬೇಕು. ಹಾಗಾದರೆ ಮಾತ್ರ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಲು ಸಾಧ್ಯ.
0 Comments