ಕುವೆಂಪು ಭಾಷಾಭಾರತಿ ಫೆಲೋಶಿಪ್ ಅರ್ಜಿ ಆಹ್ವಾನ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ನೀಡಲಾಗುವ ಹಿರಿಯ ಮತ್ತು ಕಿರಿಯ ವಿಭಾಗದ ಫೆಲೋಶಿಪ್ ಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದು ಸಾಹಿತ್ಯ ಸಂಶೋಧನೆಗೆ ಗೌರವಧನ ನೀಡುವ ಅಪರೂಪದ ಯೋಜನೆಯಾಗಿದೆ. ಹಿರಿಯರ ವಿಭಾಗದ ಫೆಲೋಶಿಪ್ಗೆ 3 ಲಕ್ಷ ರೂಪಾಯಿ ಗೌರವಧನವಿದ್ದು, ಕಿರಿಯರ ವಿಭಾಗದ ಫೆಲೋಶಿಪ್ ಗಾಗಿ ಎರಡು ಲಕ್ಷ ರೂಪಾಯಿ ಗೌರವಧನ ನೀಡಲಾಗುತ್ತದೆ.
ಕುವೆಂಪು ಅವರ ಸಾಹಿತ್ಯ, ಕುವೆಂಪು ಅವರ ವಿಚಾರಗಳು ಅಥವಾ ಚಿಂತನೆಗಳಿಗೆ ಸಂಬಂಧಿಸಿದ ಸಂಶೋಧನಾ ಯೋಜನೆಗಳು, ಕುವೆಂಪು ಸಾಹಿತ್ಯದಅನುವಾದ ಯೋಜನೆಗಳು ಮುಂತಾದ ವಿಷಯಗಳ ಬಗ್ಗೆ ಕನಿಷ್ಠ ಐದು ಪುಟಗಳ ಸೂಕ್ತ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಅಗತ್ಯ ದಾಖಲೆಗಳು ಮತ್ತು ಅರ್ಜಿಯೊಂದಿಗೆ ನಿಗದಿತ ಕೊನೆಯ ದಿನಾಂಕದ ಒಳಗೆ ಪ್ರಾಧಿಕಾರಕ್ಕೆ ತಲುಪಿಸಬೇಕು. ಪ್ರಸ್ತಾವನೆ ಹಾಗೂ ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ: ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಜ್ಞಾನಭಾರತಿ-560056. 080-23183312.

ಹಿರಿಯ ಫೆಲೋಶಿಪ್ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 35 ವರ್ಷ ಪೂರ್ಣವಾಗಿರಬೇಕು. ವಯಸ್ಸಿನ ಪರಿಶೀಲನೆಗಾಗಿ ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸಬೇಕು. 

ಫೆಲೋಶಿಪ್ ಯೋಜನೆಯಲ್ಲಿ ಕೈಗೊಳ್ಳುವ ಕೆಲಸಕ್ಕಾಗಿ ಬೇರೆ ಇಲಾಖೆ ಅಥವಾ ವಿಶ್ವವಿದ್ಯಾಲಯಗಳಿಂದ ಅನುದಾನ ಪಡೆದಿರಬಾರದು. ಪ್ರಾಧಿಕಾರವು ನಿಗದಿಪಡಿಸುವ ದಿನಾಂಕದ ಒಳಗೆ ಯೋಜನೆಯನ್ನು ಪೂರೈಸಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಪ್ರಾಧಿಕಾರವು ಸೂಚಿಸಿದ ಎರಡು ಕಡೆಗಳಲ್ಲಿ ಉಪನ್ಯಾಸ ನೀಡಬೇಕು. ಹಕ್ಕು ಸ್ವಾಮ್ಯಕ್ಕೆ ಒಳಪಟ್ಟ ಸಂದರ್ಭದಲ್ಲಿ ಅನುವಾದ ಮಾಡಲು ಹಾಗೂ ಅದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಕಟಿಸಲು ಮೂಲ ಲೇಖಕರ ಅನುಮತಿಯ ಅಗತ್ಯವಿರುತ್ತದೆ. ಇಂತಹ ಅನುಮತಿಯನ್ನು ಪಡೆಯಲು ಪ್ರಾಧಿಕಾರವು ಪ್ರಯತ್ನಿಸಬಹುದಾದರೂ ಅನುಮತಿ ದೊರೆಯದೇ ಇದ್ದರೆ ಪ್ರಾಧಿಕಾರ ಹೊಣೆಯಾಗುವುದಿಲ್ಲ ಮತ್ತು ಅನುಮತಿ ದೊರೆಯದ ಸಂದರ್ಭಗಳಲ್ಲಿ ಫೆಲೋಶಿಪ್ ರದ್ದುಗೊಳ್ಳುತ್ತದೆ. ಮೂರು ತಿಂಗಳಿಗೊಮ್ಮೆ ಯೋಜನೆಯ ಪ್ರಗತಿ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಯೋಜನೆಯನ್ನು ವಹಿಸಿದ ಮೂರು ತಿಂಗಳ ಒಳಗೆ ತೃಪ್ತಿಕರ ಪ್ರಗತಿಯನ್ನು ತೋರಿಸದಿದ್ದರೆ ಫೆಲೋಶಿಪ್ ಅನ್ನು ರದ್ದುಪಡಿಸಲಾಗುತ್ತದೆ.

ಈ ಫೆಲೋಶಿಪ್ ಗೆ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ. ಅಪೂರ್ಣ ಅರ್ಜಿ ಹಾಗೂ ಕೊನೆಯ ದಿನಾಂಕದ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ. ಅರ್ಜಿ ನಮೂನೆಯನ್ನು ಪ್ರಾಧಿಕಾರದ ಜಾಲತಾಣ www.kuvempubhashabharathi.karnataka.gov.in ಇಂದ ಪಡೆದುಕೊಳ್ಳಬಹುದಾಗಿದೆ. ಸರಕಾರಿ ಅಥವಾ ಸರಕಾರಿ ಅನುದಾನ ಪಡೆಯುವ ಸಂಸ್ಥೆಗಳಲ್ಲಿ ಖಾಯಂ ಉದ್ಯೋಗಿಗಳಾಗಿರುವವರು ಅಥವಾ ಸಂಶೋಧನೆ ಇತ್ಯಾದಿ ಕಾರ್ಯಗಳಿಗಾಗಿ ಶಿಷ್ಯವೇತನ ಪಡೆಯುತ್ತಿದ್ದವರು ಸಂಬಂಧ ಪಟ್ಟ ಮೇಲಾಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಅರ್ಜಿಯ ಜೊತೆ ಸಲ್ಲಿಸಬೇಕು.


Post a Comment

0 Comments