ಆನೆಗಳ ಮೇಲೆ ನಿಗಾ ಇಡಲು ದೇಸಿ ರೇಡಿಯೋ ಕಾಲರ್ ಬಳಕೆ

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಆನೆ ಹಾವಳಿ ಮಿತಿ ಮೀರಿದೆ. ರಾಜ್ಯದಲ್ಲಿ ಒಟ್ಟು 6,395 ಆನೆಗಳಿವೆ ಎಂದು ಸಮೀಕ್ಷೆ ಹೇಳುತ್ತದೆ. ಪ್ರತೀ ವರ್ಷ ಏರುತ್ತಿರುವ ಈ ಆನೆಗಳ ಸಂಖ್ಯೆಗೆ ಅರಣ್ಯ ಪ್ರದೇಶ ಮಾತ್ರ ವಿಸ್ತರಣೆಯಾಗುತ್ತಿಲ್ಲ. ಕಾಡು ಹೋಗಿ ನಾಡಾಗುತ್ತಿರುವ ಕಾರಣ ಆನೆಗಳಿಗೆ ಬೇಕಾದ ಆಹಾರವೂ ಸಿಗದೆ ಜನಪ್ರದೇಶಕ್ಕೆ ದಾಳಿಯಿಡುತ್ತಿವೆ. ಅಲ್ಲಲ್ಲಿ ಕೃಷಿಕರಿಗೆ ತೊಂದರೆ ಕೊಡುವುದು ಮಾತ್ರವಲ್ಲದೆ ಜನರ ಮೇಲೆ ದಾಳಿ ನಡೆಸಿ ಪ್ರಾಣಕ್ಕೂ ಕುತ್ತು ತರುತ್ತಿವೆ. 


ಆನೆಗಳ ದಾಳಿ ತಡೆಯಲು ಹಾಗೂ ಅವುಗಳ ಚಲನವಲನಗಳನ್ನು ಗಮನಿಸುವ ಉದ್ದೇಶದಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇನ್ಫಿಕ್ಷನ್ ಲ್ಯಾಬ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಶೀಯ ಕರ್ನಾಟಕ ಪರಿಶೋಧಿತ ಪತ್ತೆ (ಕೆಪಿ ಟ್ರ್ಯಾಕರ್) ಹೆಸರಿನ ರೇಡಿಯೋ ಕಾಲರ್ ಒಂದನ್ನು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಲೋಕಾರ್ಪಣೆ ಮಾಡಿದ್ದಾರೆ. ಪ್ರತೀ ರೇಡಿಯೋ ಕಾಲರ್ಗೆ 1.80 ಲಕ್ಷ ರೂಪಾಯಿ ವೆಚ್ಚ ತಗುಲಿದ್ದು ಇದರ ತೂಕ 7 ಕೆ.ಜಿ ಇದೆ.

ಅರಣ್ಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳಿಗೆ ರೇಡಿಯೋ ಕಾಲರ್ ಅನ್ನು ಹಸ್ತಾಂತರ ಮಾಡಿದರು. ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆನೆಗಳು ನಾಡಿಗೆ ಬರುವುದನ್ನು ತಡೆಯಲು ಹಾಗೂ ಅವುಗಳ ಚಲನವಲನಗಳನ್ನು ಗಮನಿಸುವ ಉದ್ದೇಶದಿಂದ ಆನೆಗಳ ಗುಂಪಿನ ನಾಯಕಿಗೆ ಈ ರೇಡಿಯೋ ಕಾಲರ್ ಅನ್ನು ಅಳವಡಿಸಲಾಗುವುದು. ಇದರಿಂದ ಆನೆಗಳ ಸಂಚಾರದ ಕುರಿತು ಮಾಹಿತಿ ಲಭ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು. ಈ ಮೂಲಕ ಆನೆಗಳ ದಾಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಕ್ರಮವನ್ನು ಕೈಗೊಂಡಿರುವುದು ಸಂತಸದ ಸಂಗತಿಯಾಗಿದೆ.

                                                                                                                                         



Post a Comment

0 Comments