ಏರುತ್ತಿರುವ ಬಿಸಿಲ ತಾಪ


ಫೆಬ್ರವರಿ ತಿಂಗಳ ಅಂತ್ಯದವರೆಗೆ ಚಳಿಗಾಲವಿದ್ದರೂ ಚುಮು ಚುಮು ಚಳಿಯ ಅನುಭವ ಮಾಸಿ ಬಿಸಿಲ ಬೇಗೆ ಗಗನಕ್ಕೇರುತ್ತಿದೆ. ಬಿಸಿಲಿನ ತಾಪವನ್ನು ಸಹಿಸಲಸಾಧ್ಯ ಎಂಬ ಮಟ್ಟಿಗೆ ಸೂರ್ಯನ ಪ್ರಖರತೆಯಿದೆ. ಮಧ್ಯಾಹ್ನದ ಹೊತ್ತಿಗೆ ಹೊರ ಹೋದರಂತೂ ಮೈ‌ ಸುಟ್ಟು ಹೋದಂತಾಗುತ್ತದೆ.




ಮಳೆಗಾಲದಲ್ಲಿ ಎಷ್ಟೇ ಮಳೆ ಸುರಿದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಬಿಸಿಲಿನ ತಾಪ ಹೆಚ್ಚುತ್ತಲೇ ಇರುತ್ತದೆ. ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ಇಡೀ ಭೂಮಂಡಲವೇ ಹೊತ್ತಿ ಉರಿದರೂ ಅಚ್ಚರಿಯಿಲ್ಲ. ಬೇಸಿಗೆ ಕಾಲದ ಆರಂಭದಲ್ಲೇ ನದಿ-ಕೆರೆಗಳು ಬತ್ತಿ ಹೋಗಿ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. 


ಮುಂಜಾನೆ ಸ್ವಲ್ಪ ಮಟ್ಟಿಗೆ ಚಳಿಯ ಅನುಭವವಾದರೂ 10 ಗಂಟೆಯ ನಂತರ ಕಣ್ಣು ಉರಿಯೇರುವಷ್ಟು ಬಿಸಿಲು ಇದೆ. ಬೆಂಗಳೂರು ನಗರ ಸೇರಿ ಹಲವೆಡೆ 32 ರಿಂದ 37 ಡಿಗ್ರಿವರೆಗೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಹವಾಮಾನ ಇಲಾಖೆಯು ತಾಪಮಾನ ಏರಿಕೆಯ ಬಗ್ಗೆ ಈಗಾಗಲೇ ಮುನ್ಸೂಚನೆ ನೀಡಿದ್ದು ಮಾರ್ಚ್ ಏಪ್ರಿಲ್ ತಿಂಗಳುಗಳಲ್ಲಿ ಮತ್ತಷ್ಟು ತಾಪಮಾನ ಏರಿಕೆಯಾಗಲಿದ್ದು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.


ಬಿಸಿಲಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಛತ್ರಿ, ಟೋಪಿ ಅಥವಾ ಹತ್ತಿ ಬಟ್ಟೆಗಳನ್ನು ಬಳಸಲೇಬೇಕು. ಆದಷ್ಟು ನೀರನ್ನು ಕುಡಿಯುವುದರ ಮೂಲಕ ದೇಹವನ್ನು ನಿರ್ಜಲೀಕರಣ ಸ್ಥಿತಿಗೆ ಹೋಗದಂತೆ ಎಚ್ಚರವಹಿಸಬೇಕು. ಬೇಸಿಗೆಯ ಈ  ಹೊತ್ತಿನಲ್ಲಿ ನಾವು ಮಾಂಸಹಾರ ಸೇವನೆಯಿಂದ ದೂರವಿದ್ದು ಆಹಾರದಲ್ಲಿ ಹೆಚ್ಚು ಹೆಚ್ಚು ಸೊಪ್ಪು, ತರಕಾರಿಗಳು, ಹಣ್ಣು ಹಂಪಲುಗಳನ್ನು ಸೇವಿಸಬೇಕು. ಮಕ್ಕಳು ಹಾಗೂ ವಯೋವೃದ್ಧರು ಮಧ್ಯಾಹ್ನದ ಹೊತ್ತಿಗೆ ಬಿಸಿಲಿನಲ್ಲಿ ಓಡಾಡದಂತೆ ನೋಡಿಕೊಳ್ಳಬೇಕು. 


ಬೇಸಿಗೆ ಕಾಲದಲ್ಲಿ ಅವೆಷ್ಟೋ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಪ್ರಾಣ ಬಿಡುವುದನ್ನು ಕಾಣಬಹುದಾಗಿದೆ. ನಮ್ಮ ಸುತ್ತಮುತ್ತಲಿನ ವನ್ಯಜೀವಿಗಳನ್ನು ಸಂರಕ್ಷಿಸುವುದು ನಾಗರಿಕರಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಆದ್ದರಿಂದ ಮನೆಯ ಅಕ್ಕ ಪಕ್ಕದಲ್ಲಿ ಸಣ್ಣ ಮಡಕೆ ಅಥವಾ ಪಾತ್ರೆಗಳಲ್ಲಿ ನೀರು, ಆಹಾರಗಳನ್ನು ಪ್ರಾಣಿ-ಪಕ್ಷಿಗಳಿಗಾಗಿ ಇಡಬೇಕು. ಅವೆಷ್ಟೋ ಪಕ್ಷಿಗಳು, ಹಾವುಗಳು ಅಥವಾ ಪ್ರಾಣಿಗಳು ನಾವು ಇಡುವ ಈ ನೀರಿಗಾಗಿ ಹುಡುಕಾಟ ನಡೆಸುತ್ತಾ ಇರುತ್ತದೆ. ನಾವಿಡುವ ನೀರನ್ನು ಕುಡಿದು ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳುತ್ತವೆ. .


ಹನಿ ನೀರು ಮನುಷ್ಯನ ಅಥವಾ ಯಾವುದೇ ಜೀವಿಯ ಪ್ರಾಣವನ್ನು ರಕ್ಷಿಸುವ ಅಮೃತ ಬಿಂದುವಿಗೆ ಸಮಾನವಾಗಿರುತ್ತದೆ. ನೀರಿನ ಮಹತ್ವ ನೀರಿಲ್ಲದೆ ಪರದಾಡುವವವರಿಗೆ ಮಾತ್ರ ತಿಳಿದಿರಲು ಸಾಧ್ಯ. ಒಂದು ಹನಿ ನೀರನ್ನು ಪೋಲು ಮಾಡದೇ ನೀರಿನ ಸದ್ಬಳಕೆಯನ್ನು ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭೂಮಿಯಲ್ಲಿ ಕೊರೆದ ಬೋರ್ವೆಲ್ ಮೂಲಕ ನಾವು ದಿನಂಪ್ರತಿ ನೀರನ್ನು ತೆಗೆದು ಕೃಷಿ ಭೂಮಿಗಳಿಗೆ ಬಳಕೆ ಮಾಡುತ್ತೇವೆ. ನೀರಿಲ್ಲದೆ ಯಾವುದೇ ಬೆಲೆಯನ್ನು ಬೆಳೆಯಲು ಸಾಧ್ಯವಿಲ್ಲ. ಬೇಸಿಗೆಯಲ್ಲಿ ನೀರನ್ನು ವ್ಯರ್ಥ ಬಳಕೆಗೆ ಬಳಸದೆ ಅಗತ್ಯವಿದ್ದಷ್ಟು ಮಾತ್ರ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ಲದೆ ಮಳೆಗಾಲದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ, ನಮ್ಮ ಜಾಗದಲ್ಲಿ ಮಳೆ ನೀರನ್ನು ಭೂಮಿಗೆ ಇಂಗುವಂತೆ ಮಾಡಬೇಕು. ಮಳೆಗಾಲದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿದ್ದೇ ಆದಲ್ಲಿ ಬೇಸಿಗೆ ಮುಗಿಯುವವರೆಗೂ ನೀರಿಗಾಗಿ ಪರದಾಡುವ ಸ್ಥಿತಿ ಯಾರಿಗೂ ಬರಲು ಸಾಧ್ಯವಿಲ್ಲ.


ಇಂದಿನ ಜಾಗತಿಕ ತಾಪಮಾನ ಏರಿಕೆಗೆ ಮೂಲ ಕಾರಣ ಮನುಷ್ಯನೇ ಆಗಿದ್ದಾನೆ. ಯಾಂತ್ರಿಕರಣದತ್ತ ಮುಖ ಮಾಡಿ ವೈಜ್ಞಾನಿಕ ಯುಗದಲ್ಲಿ ಬದುಕುತ್ತಿರುವ ಮನುಷ್ಯನ ಬದುಕು ಇಂದು ಜಾಗತಿಕ ತಾಪಮಾನ ಏರಿಕೆಗೆ ಬಹುದೊಡ್ಡ ಕಾರಣವೇ ಸರಿ. ಮಿತಿ ಮೀರಿದ ವಾಹನಗಳ ಬಳಕೆ, ಕಾರ್ಖಾನೆಗಳ ಹೊಗೆ ಮತ್ತು ಕಲುಷಿತ ನೀರು, ಪರಿಸರ ನಾಶ, ಕಾಂಕ್ರೀಟೀಕರಣ, ಕಟ್ಟಡಗಳ ನಿರ್ಮಾಣ ಮೊದಲಾದ ಕಾರಣಗಳಿಂದ ಇಂದು ಪ್ರಕೃತಿಯು ತನ್ನ ಸ್ಥಿಮಿತವನ್ನು ಕಳೆದುಕೊಂಡು ಜಾಗತಿಕ ತಾಪಮಾನ ಏರಿಕೆಯಂತಹ ವಿನಾಶಕಾರಿ ಸಮಸ್ಯೆಗಳನ್ನು ತನ್ನತ್ತ ಎಳೆದುಕೊಂಡು ಬಿಸಿಲ ಬೇಗೆಯಲ್ಲಿ ಪರದಾಡುವ ಸ್ಥಿತಿ ಎದುರಾಗಿದೆ.


ಏರುತ್ತಿರುವ ತಾಪಮಾನದಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ದೇಶದ ಆರೋಗ್ಯ ಎಲ್ಲರೂ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಸರ್ಕಾರವು ತಾಪಮಾನ ಏರಿಕೆಯನ್ನು ತಡೆಯುವಲ್ಲಿ ಪರಿಸರವನ್ನು ಸಂರಕ್ಷಣೆ ಮಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪ್ರತಿಯೊಬ್ಬ ಮನುಷ್ಯನೂ ತಾನು ಪ್ರಕೃತಿಯ ಭಾಗವೆಂಬ ಸತ್ಯವನ್ನರಿತು ಸರ್ಕಾರದೊಂದಿಗೆ ಪರಿಸರ ಸಂರಕ್ಷಣೆಗೆ ಕೈ ಜೋಡಿಸುವ ಮಹತ್ಕಾರ್ಯವನ್ನು ಮಾಡಲೇ ಬೇಕಾಗಿದೆ.


Post a Comment

0 Comments