ಸರಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 18,461 ವಿದ್ಯಾರ್ಥಿಗಳು ಶಾಲೆಗಳಿಂದ ಶಿಕ್ಷಣ ವಂಚಿತರಾಗಿ ದೂರ ಉಳಿದಿದ್ದು ಇವರನ್ನು ಶಾಲೆಗೆ ಸೇರಿಸುವ ಪ್ರಯತ್ನ ನಡೆಯುತ್ತಿದ್ದರೂ ಫಲಪ್ರದವಾಗಿಲ್ಲ. ನಾನಾ ಕಾರಣಗಳಿಂದ ಶಿಕ್ಷಣ ವಂಚಿತರಾಗಿರುವ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ.
2025-26ನೇ ವರ್ಷದ ಪ್ರವೇಶ ಪ್ರಕ್ರಿಯೆಗ ಪ್ರಗತಿಯಲ್ಲಿದ್ದು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 817 ವಸತಿ ಶಾಲೆಗಳಿವೆ. ಇದರಲ್ಲಿ 6ನೇ ತರಗತಿಗೆ ಪ್ರವೇಶ ನೀಡಲಿದ್ದು, ಒಟ್ಟು 41500 ಸೀಟುಗಳಲ್ಲಿ ಶೇಕಡಾ 50 ರಷ್ಟು ಸೀಟುಗಳು ಪ್ರವೇಶ ಪರೀಕ್ಷೆ ಹಾಗೂ ಮಿಕ್ಕ ಶೇಕಡ 50ರಷ್ಟು ಅಂದರೆ 20750 ಸೀಟುಗಳು ನೇರ ಪ್ರವೇಶಾತಿಗಾಗಿ ಮೀಸಲಿಡಲಾಗಿದೆ. ಪ್ರವೇಶ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ನೀಡಿದ್ದು, ಕೆಇಎ ಪರೀಕ್ಷೆ ನಡೆಸಿ ಮೀಸಲು ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದೆ.
ಬಡ ಮತ್ತು ಅನಾಥ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಪ್ರವೇಶ ನೀಡದಿದ್ದರೆ ಇಂತಹ ವಿದ್ಯಾರ್ಥಿಗಳು ಭಿಕ್ಷಾಟನೆ, ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯು ಇಂತಹ ಮಕ್ಕಳನ್ನು ಗುರುತಿಸಿ ಪ್ರವೇಶ ಕಲ್ಪಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
0 Comments