ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಸರ್ ಸಿ ವಿ ರಾಮನ್ ಕೂಡ ಒಬ್ಬರು. ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ವಿಜ್ಞಾನಿ. ಇವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್ ಎಂದಾಗಿದೆ. ಇವರು ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿ 1888ರ ನವಂಬರ್ 7ರಂದು ಜನಿಸಿದರು.
ಬೆಳಕಿನ ಕಿರಣ ಅಥವಾ ಶಕ್ತಿಯ ಪ್ಯಾಕೆಟ್ ಗೆ ಫೋಟಾನ್ ಎಂದು ಹೆಸರು. ಈ ಫೋಟಾನ್ಗಳು ರಾಸಾಯನಿಕ ದ್ರವದಲ್ಲಿನ ಅಣುವಿಗೆ ಡಿಕ್ಕಿ ಹೊಡೆದಾಗ ಫೋಟಾನ್ನ ಶಕ್ತಿಯಲ್ಲಿ ಉಂಟಾಗುವ ನಷ್ಟ ಮತ್ತು ತತ್ಪರಿಣಾಮವಾಗಿ ರೋಹಿತ(Spectrum) ಉಂಟಾಗುವ ವಿಶೇಷ ರೇಖೆಗಳೇ "ರಾಮನ್ ಎಫೆಕ್ಟ್". ಈ ಪರಿಣಾಮದಿಂದ ಘನ, ದ್ರವ, ಅನಿಲ ವಸ್ತುಗಳಲ್ಲಿನ ಅಣುಗಳ ವ್ಯವಸ್ಥೆಯನ್ನು ತಿಳಿದುಕೊಳ್ಳಬಹುದು. ಈ ರೀತಿ ರಾಮನ್ ಎಫೆಕ್ಟ್ ಯಾವುದೇ ವಸ್ತುವಿನ ಆಂತರಿಕ ಅಣು ರಚನೆಯನ್ನು ತಿಳಿಸುತ್ತದೆ. ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳಿರುವುದನ್ನು ನಾವು ನೋಡಬಹುದು. ಹೀಗೆ ಚದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದಾದರೂ ಒಂದಷ್ಟು ಭಾಗದ ಕಿರಣಗಳ ತರಂಗಂತರ ಮೂಲಕ್ಕಿಂತ ಬದಲಾಗಿರುತ್ತದೆ. ಇದೇ ರಾಮನ್ ಪರಿಣಾಮ.
ಸರ್ ಸಿವಿ ರಾಮನ್ ಅವರ ಈ ಅತ್ಯಮೂಲ್ಯ ಕೊಡುಗೆ ವಿಜ್ಞಾನ ಕ್ಷೇತ್ರಕ್ಕೆ ಬಹುದೊಡ್ಡ ಆಸ್ತಿಯೇ ಸರಿ. ಇಂತಹ ಸಂಶೋಧನೆಗಳು ಭಾರತೀಯರ ಜ್ಞಾನಮಟ್ಟವನ್ನು ವಿಶ್ವಕ್ಕೆ ಪರಿಚಯಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಭಾರತದ ಅತ್ಯಂತ ವಿಶಿಷ್ಟವಾಗಿ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. 2025ನೇ ಸಾಲಿನ ರಾಷ್ಟ್ರೀಯ ವಿಜ್ಞಾನ ದಿನದ ಘೋಷವಾಕ್ಯ "ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವಿನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು" ಎಂಬುದಾಗಿದೆ.
0 Comments