ಈ ತೀರ್ಪಿನ ಮೂಲಕ ಆರಂಭಿಕ ಹಂತದ ಹುದ್ದೆಗಳಿಗೆ, ಅಂದರೆ ಸಿವಿಲ್ ಜಡ್ಜ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಮೂರು ವರ್ಷಗಳ ವಕೀಲಿ ವೃತ್ತಿಯ ಅನುಭವವನ್ನು ಕಡ್ಡಾಯಗೊಳಿಸಿದೆ. ಈ ತೀರ್ಪು ನ್ಯಾಯಾಂಗ ಕ್ಷೇತ್ರದಲ್ಲಿ ವೃತ್ತಿ ಜೀವನಕ್ಕೆ ಸಿದ್ಧತೆಯನ್ನು ನಡೆಸುತ್ತಿರುವಂತಹ ಅಭ್ಯರ್ಥಿಗಳ ಮೇಲೆ ಗಮನಾರ್ಹವಾದ ಪರಿಣಾಮ ಬೀರಲಿದೆ.
ಆರಂಭಿಕ ಹಂತದ ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇಮಕಾತಿಯಲ್ಲಿ ಸುಧಾರಣೆ ಕೋರಿ ಅಖಿಲ ಭಾರತ ನ್ಯಾಯಾಧೀಶರ ಸಂಘ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನಡೆಸಿದಂತಹ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ.
ನ್ಯಾಯಾಧೀಶರಿಗೆ ಅನುಭವದ ಮಹತ್ವವನ್ನು ಈ ಪೀಠವು ಒತ್ತಿ ಹೇಳಿದೆ. "ಹಲವಾರು ಹೈಕೋರ್ಟ್ ಗಳು ಗಮನಿಸಿದಂತೆ, ಹೊಸ ಕಾನೂನು ಪದವೀಧರ ನೇಮಕಾತಿಯು ಅನೇಕ ತೊಂದರೆ ಸೃಷ್ಟಿಸಿದೆ. ದಕ್ಷತೆ ಮತ್ತು ಸಾಮರ್ಥ್ಯ ಖಚಿತಪಡಿಸಿಕೊಳ್ಳಲು ಪ್ರಾಯೋಗಿಕ ಅನುಭವ ಅತ್ಯಗತ್ಯ" ಎಂದಿದೆ. ಕನಿಷ್ಠ ಮೂರು ವರ್ಷಗಳ ಅವಧಿಯ ಕಾನೂನು ಅಭ್ಯಾಸದ ಅವಶ್ಯಕತೆಯೂ ತಳಮಟ್ಟದಲ್ಲಿ ನ್ಯಾಯಾಂಗ ಅಧಿಕಾರಿಗಳ ಗುಣಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಆರಂಭಿಕ ಹಂತದ ಜಡ್ಜ್ ಆಗಲು ಕನಿಷ್ಠವಾದರೂ ಮೂರು ವರ್ಷಗಳ ಅನುಭವ ಕಡ್ಡಾಯ" ಎಂದು ನ್ಯಾಯಪೀಠ ಹೇಳಿದೆ.
ಬಿಆರ್ ಗವಾಯಿ ಅವರ ತೀರ್ಪಿನ ಪ್ರಕಾರ, ಆರಂಭಿಕ ಹಂತದ ನ್ಯಾಯಾಧೀಶ ಹುದ್ದೆಗೇರಲು ಕನಿಷ್ಠ ಮೂರು ವರ್ಷಗಳ ವಕೀಲಿಕೆ ಅನುಭವ ಹೊಂದಿರಬೇಕು. ಈ ಅನುಭವವನ್ನು ಪಡೆಯಲು ವಕೀಲಿ ವೃತ್ತಿಯಲ್ಲಿ ಕನಿಷ್ಠ 10 ವರ್ಷ ವಕೀಲರಾಗಿ ಸೇವೆ ಸಲ್ಲಿಸಿದವರ ಬಳಿ ಮಾಡಬೇಕು. ಹಾಗೂ ಸಿವಿಲ್ ಜಡ್ಜ್ ಗೆ ಹತ್ತು ವರ್ಷ ಸೇವೆ ಸಲ್ಲಿಸಿದ ವಕೀಲರಿಂದ ಪ್ರಮಾಣ ಪತ್ರ ಒದಗಿಸಬೇಕು. ಇನ್ನು ಜಡ್ಜ್ಗಳ ಗುಮಾಸ್ತರಾಗಿ ನೇಮಕ ಆದವರು, ಗುಮಾಸ್ತ ಹುದ್ದೆ ವಹಿಸಿಕೊಳ್ಳುವ ಮುನ್ನ ಕನಿಷ್ಠ ಒಂದು ವರ್ಷ ತರಬೇತಿ ಪಡೆದಿರಬೇಕು ಎಂದು ಪೀಠ ಹೇಳಿದೆ.
0 Comments