ಪ್ರಧಾನಿ ಆಪ್ತ ಕಾರ್ಯದರ್ಶಿಯಾಗಿ ನಿಧಿ ತಿವಾರಿ ಆಯ್ಕೆ!!

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಕಾರ್ಯದರ್ಶಿಯಾಗಿ ಭಾರತೀಯ ವಿದೇಶಾಂಗ ಸೇವೆಯ (ಐಎಫ್ಎಸ್) ಯುವ ಮಹಿಳಾ ಅಧಿಕಾರಿ ನಿಧಿ ತಿವಾರಿ ಅವರನ್ನು ನೇಮಿಸಲಾಗಿದೆ.
2014ರ ಬ್ಯಾಚ್ ನ ಅಧಿಕಾರಿಯಾಗಿರುವ ನಿಧಿ ತಿವಾರಿ, ಪ್ರಸ್ತುತ ಪ್ರಧಾನಮಂತ್ರಿ ಅವರ ಕಚೇರಿಯಲ್ಲಿ (ಪಿಎಂಒ) ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಮ-ಪ್ರಭಾರದ(ಮಿಡ್-ಟರ್ಮಿನಲ್) ಆಧಾರದಲ್ಲಿ ನಿಧಿ ನೇಮಕಕ್ಕೆ ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಮಾರ್ಚ್ 29ರ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದ ಮೆಹಮುರ್ ಗಂಜ್ನವರಾದ ನಿಧಿ ತಿವಾರಿ 2013ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 69ನೇ ರಾಂಕ್ ಗಳಿಸಿದ್ದರು. ಉತ್ತಮ ಶಿಶಿಕ್ಷು ಅಧಿಕಾರಿಗೆ ನೀಡಲಾಗುವ ಅವಾರ್ಡ್ ಆಫ್ ಅಂಬಾಸಡರ್ ಬಿಮಲ್ ಸನ್ಯಾಲ್ ಸ್ಮಾರಕ ಪದಕ ಮತ್ತು ಉತ್ತಮ ಪ್ರಬಂಧಕ್ಕಾಗಿ ಕೊಡಮಾಡುವ ಪದಕವನ್ನು 2016ರಲ್ಲಿ ಅವರು ಪಡೆದಿದ್ದರು. 2022 ರಲ್ಲಿ ಅಧೀನ ಕಾರ್ಯದರ್ಶಿಯಾಗಿ ಪಿಎಂಒ ಸೇರಿದ್ದ ನಿಧಿ, 2023ರ ಜನವರಿ 6 ರಿಂದ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸೇವೆಯಲ್ಲಿ ಇದ್ದ ನಿಧಿ ತಿವಾರಿ, ನಿಶಸ್ತ್ರೀಕರಣ ಮತ್ತು ಅಂತರಾಷ್ಟ್ರೀಯ ಭದ್ರತಾ ವ್ಯವಹಾರಗಳ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ. ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣರಾಗುವ ಮೊದಲೇ ಅವರು ವಾರಣಾಸಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಕಮಿಷನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲೇ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ ರ್ಯಾಂಕ್ ಗಳಿಸುವ ಮೂಲಕ ಯಶಸ್ವಿಯೂ ಆದರು.

Post a Comment

0 Comments