'ಜಗ್ಗಿ ಸಹೋದರ'ರೆಂದೇ ಖ್ಯಾತಿ ಪಡೆದಿರುವ ಅನ್ಮೋಲ್ ಸಿಂಗ್ ಜಗ್ಗಿ ಮತ್ತು ಪುನೀತ್ ಗೋಯಲ್ ಸಿಂಗ್ ಜಗ್ಗಿ 2007ರಲ್ಲಿ ಜೆನ್ಸಲ್ ಇಂಜಿನಿಯರಿಂಗ್ ಅನ್ನು ಪ್ರೊಕ್ಯೂರ್ಮೆಂಟ್ ಮತ್ತು ನಿರ್ಮಾಣ ಕಂಪನಿಯಾಗಿ ಸ್ಥಾಪಿಸಿದರು. 2018ರಲ್ಲಿ ಇವರು ಜೆನ್ಸಾಲ್ ಮೊಬಿಲಿಟಿ ಪ್ರೈವೇಟ್ ಎಂಬ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಹೊಂದಿದ ಕ್ಯಾಬ್ ಅಕ್ರಿಗೇಟರನ್ನು ಆರಂಭಿಸಿದರು. ಒಂದು ವರ್ಷದ ಬಳಿಕ ಈ ಕಂಪನಿಗೆ ಬ್ಲೂ ಸ್ಮಾರ್ಟ್ ಎಂದು ಮರುನಾಮಕರಣ ಮಾಡಿದರು.
ಬ್ಲೂ ಸ್ಮಾರ್ಟ್ ಸಂಸ್ಥೆಯು ಸ್ವಚ್ಛ ಕಾರುಗಳು ಮತ್ತು ಸಭ್ಯ ಚಾಲಕರನ್ನು ಹೊಂದಿದ್ದು, ಈ ಸೇವೆಗಾಗಿಯೇ ಇದು ಪ್ರಸಿದ್ಧಿಯನ್ನು ಪಡೆದಿತ್ತು. ಅಷ್ಟೇ ಅಲ್ಲದೆ ಕ್ಯಾಬ್ ಸೇವೆಗಾಗಿ ಈ ಸಂಸ್ಥೆಯು ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನೇ ಬಳಸುತ್ತಿತ್ತು. ಈ ಸಂಸ್ಥೆಯು ದೆಹಲಿ, ಬೆಂಗಳೂರು ಹಾಗೂ ಮುಂಬೈನಂತಹ ಮಹಾನಗರಗಳಲ್ಲಿ ತನ್ನ ಸೇವೆಯನ್ನು ಜನರಿಗೆ ನೀಡುತ್ತಿತ್ತು. ಸುಸ್ಥಿರ ಸಾರಿಗೆ ಮತ್ತು ತ್ವರಿತ ಸೇವೆ ಒದಗಿಸುವ ಮೂಲಕ ಕ್ಯಾಬ್ ಸೇವೆಯನ್ನೊದಗಿಸುವ ಇತರ ಕಂಪನಿಗಳಿಗೆ ಬ್ಲೂಸ್ಮಾರ್ಟ್ ಪ್ರತಿಸ್ಪರ್ಧಿಯಾಗಿ ಪ್ರಬಲ ಸವಾಲೊಡ್ಡಿತ್ತು.
ಬ್ಲೂ ಸ್ಮಾರ್ಟ್ ಸಂಸ್ಥೆಯು ಜನವರಿ 9ರ ಹೊತ್ತಿಗೆ ಸುಮಾರು 8500ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಸಮೂಹವನ್ನು ಹೊಂದಿತ್ತು. ದೆಹಲಿ ಎನ್.ಸಿ.ಆರ್ ಮತ್ತು ಬೆಂಗಳೂರಿ 50 ಕೇಂದ್ರಗಳಲ್ಲಿ 5800 ಕೇಂದ್ರಗಳ ಚಾರ್ಜಿಂಗ್ ಜಾಲವನ್ನು ಆರಂಭಿಸಿತ್ತು. ಸುಮಾರು 10,000ಕ್ಕೂ ಹೆಚ್ಚು ಚಾಲಕರಿಗೆ ಈ ಸಂಸ್ಥೆ ಜೀವನಾಧಾರವಾಗಿತ್ತು. ಈ ಸಂಸ್ಥೆಯ ವೆಬ್ಸೈಟ್ ಪ್ರಕಾರ 1.45 ಕೋಟಿ ರೈಡ್ ಗಳನ್ನು ಪೂರ್ಣಗೊಳಿಸಿದ ಭಾರತದ ಮೊದಲ ಹಾಗೂ ಅತೀ ದೊಡ್ಡ ಶೂನ್ಯ ಮಾಲಿನ್ಯ ರೈಡ್ ಹೇಲಿಂಗ್ ಸೇವೆ ಒದಗಿಸುವ ಸಂಸ್ಥೆಯಾಗಿ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಯುಎಇಯಲ್ಲಿ ಪ್ರೀಮಿಯಂ ಆಲ್ ಎಲೆಕ್ಟ್ರಿಕ್ ಲಿಮೋಸಿನ್ ಸೇವೆಯನ್ನು ಕೂಡ ಪ್ರಾರಂಭಿಸಿತ್ತು.
ಇಷ್ಟೆಲ್ಲಾ ಸಾಧನೆ ಮಾಡಿದ ಈ ಸಂಸ್ಥೆಯು ಈಗ ತನ್ನ ಸೇವೆಯನ್ನೇ ಸ್ಥಗಿತಗೊಳಿಸಿದೆ. ಈ ಕಂಪನಿಯ ಸಂಸ್ಥಾಪಕರು ಮಾಡಿರುವ ಸಾಲವನ್ನು ಮರುಪಾವತಿಸದೆ ಕಂಪನಿಯ ಹಣವನ್ನೆಲ್ಲ ತಮ್ಮ ವೈಯಕ್ತಿಕ ವೆಚ್ಚಗಳಿಗೆ ವಿನಯೋಗಿಸಿದ್ದಾರೆ ಎಂದು ಸಿಬಿ ಆರೋಪಿಸುತ್ತಿದೆ. ಜಗ್ಗಿ ಸಹೋದರರನ್ನು ಯಾವುದೇ ಪ್ರಮುಖ ಹುದ್ದೆಗಳನ್ನು ಅಲಂಕರಿಸುವುದನ್ನು ಕೂಡ ಸೆಬಿ ನಿಷೇಧಿಸಿದೆ. ಇದರ ಜೊತೆಯಲ್ಲಿ ಮಧ್ಯಂತರ ಆದೇಶದಲ್ಲಿ ತಿಳಿಸಿರುವಂತೆ ಜಗ್ಗಿ ಸಹೋದರರು ಮುಂದಿನ ಆದೇಶದ ವರೆಗೆ ಸೆಕ್ಯೂರಿಟೀಸ್ ಮಾರುಕಟ್ಟೆಯಲ್ಲಿ ಭಾಗವಹಿಸುವುದನ್ನು ಕೂಡ ಸೆಬಿ ನಿರ್ಬಂಧಿಸಿದೆ. ಸೆಬಿಯ ಪ್ರಕಾರ ಜಗ್ಗಿ ಸಹೋದರರು ಬ್ಲೂ ಸ್ಮಾರ್ಟ್ ಕಂಪನಿಯನ್ನು ಪಿಗ್ಗಿ ಬ್ಯಾಂಕ್ ನಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದೆ.
0 Comments