ಇಂದು ವಿಶ್ವ ಗುಬ್ಬಚ್ಚಿಗಳ ದಿನ; ಅಳಿವಿನ ಪರದೆ ಸರಿಸಿತೇ ಚಿಂವ್ ಚಿಂವ್ ಗಾನ!!

ಜಗತ್ತು ಅದ್ಭುತ ಜೀವ ವೈವಿಧ್ಯತೆಗಳ ತಾಣ. ಪ್ರಕೃತಿಯ ಭಾಗವಾಗಿರುವ ನೆಲ-ಜಲ, ಪ್ರಾಣಿ-ಪಕ್ಷಿ, ಗಾಳಿ-ಬೆಳಕು, ಆಕಾಶ, ಸೂರ್ಯ-ಚಂದ್ರ, ಮರ-ಗಿಡಗಳು ಹೀಗೆ ಜಗತ್ತಿನ ಕಣಕಣವೂ ಜೀವ ವೈವಿಧ್ಯತೆಗೆ ಎತ್ತಿ ಹಿಡಿದ ಕನ್ನಡಿಯಾಗಿದೆ. ಆದರೆ ಮನುಷ್ಯನ ಅತಿಕ್ರಮಣದಿಂದ ಈ ಜೀವ ವೈವಿಧ್ಯತೆಯು ತನ್ನತನವನ್ನು ಕಳೆದುಕೊಂಡು ಅಳಿವಿನಂಚಿಗೆ ಸುರಿಯುತ್ತಿದೆ. ಜಾಗತಿಕ ಮಟ್ಟದಲ್ಲಿ ಖ್ಯಾತ ಪರಿಸರವಾದಿಯಾಗಿರುವ ಜಾನ್ ಪಾಲ್ ಅವರ ಪ್ರಕಾರ, ನಾಶ ಮಾಡಲು ಪರಿಸರವೆಂಬುದು ಯಾರೊಬ್ಬರ ಸ್ವತ್ತೂ ಅಲ್ಲ, ಆದರೆ ಪರಿಸರ ಸಂರಕ್ಷಣೆಯೆಂಬುದು ಈ ಭೂಮಿಯಲ್ಲಿ ಜೀವಿಸುವ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹೇಳುತ್ತಾರೆ. ಆದರೆ ಬುದ್ಧಿ ಜೀವಿಯಾಗಿರುವ ಮನುಷ್ಯನ ಆಧುನಿಕ ತಂತ್ರಜ್ಞಾನದ ಅತಿ ವೇಗದ ಬೆಳವಣಿಗೆಗೆ ಇಡೀ ಜೀವ ಸಂಕುಲವೇ ಅವನತಿಯತ್ತ ಸಾಗುತ್ತಿದೆ. ಅದಕ್ಕೆ ಬಹುದೊಡ್ಡ ಉದಾಹರಣೆಯೆಂದರೆ ಕಣ್ಮರೆಯಾಗಿರುವ ಗುಬ್ಬಚ್ಚಿ ನಿನಾದ..!!
ಒಂದಾನೊಂದು ಕಾಲದಲ್ಲಿ ಬೆಳಿಗ್ಗೆ ಎದ್ದು ಮನೆಯ ಹೊರಗೆ ಬಂದರೆ ಅಂಗಳದ ತುಂಬಾ ಚಿಂವ್ ಚಿಂವ್ ಗುಬ್ಬಚ್ಚಿಗಳ ಕಲರವ ಮನಕ್ಕೆ ಮುದ ನೀಡುತ್ತಿತ್ತು. ಪ್ರತಿ ಮನೆಗೂ ಗುಬ್ಬಚ್ಚಿಯ ಕಲರವವೇ ಬೆಳಗ್ಗಿನ ಅಲಾರಾಂ ಆಗಿರುತ್ತಿತ್ತು. ಕೋಳಿ ಕೂಗು, ಗುಬ್ಬಚ್ಚಿಗಳ ಕಲರವವೇ ಜನರಿಗೆ ಗಡಿಯಾರದ ಸಮಯ ಸೂಚಕವಾಗಿತ್ತು. ಅಷ್ಟೇ ಯಾಕೆ ಎಷ್ಟು ಜನರಿಗೆ ಗುಬ್ಬಚ್ಚಿಯ ಚಿಂವ್ ಚಿಂವ್ ನಾದವೇ ಮುಂಜಾನೆಯ ಸುಪ್ರಭಾತವಾಗಿರುತ್ತಿತ್ತು. ಆದರೆ ಸುಮಾರು 20 25 ವರ್ಷಗಳಿಂದ ಈ ಗುಬ್ಬಚ್ಚಿಗಳ ಸಂಖ್ಯೆ ಗಣನೀಯವಾಗಿ ಇಳಿದು ಇಂದು ಕಣ್ಯರೆಯೇ ಆಗಿಹೋಗಿವೆ.

ನಮ್ಮ ಬಾಲ್ಯದ ದಿನಗಳಲ್ಲಿ ಗುಬ್ಬಚ್ಚಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿರುತ್ತಿತ್ತು. ಮನೆಯ ಸುತ್ತಮುತ್ತ ಬಿದ್ದ ಕಾಳು, ಅನ್ನ ಅಗಲುಗಳನ್ನು ತಿನ್ನುತ್ತಾ ನೀರು ಕುಡಿಯುತ್ತಾ ಸ್ವಚ್ಛಂದವಾಗಿ ಹಾರಾಡುತ್ತಾ ಇದ್ದವು. ಅಲ್ಲಿ ಇಲ್ಲಿ ಗುಬ್ಬಚ್ಚಿ ಗೂಡುಗಳ ಸಂಖ್ಯೆಗೇನೂ ಕೊರತೆ ಇರಲಿಲ್ಲ. ಇಂದಿನ ಮಕ್ಕಳಿಗೆ ಗುಬ್ಬಚ್ಚಿಗಳನ್ನು ನೋಡುವ ಭಾಗ್ಯ ಕೇವಲ ಪುಸ್ತಕ, ಪೇಪರ್ಗಳಲ್ಲಿ ಮಾತ್ರ. ದಿನವಿಡೀ ಹುಡುಕಾಡಿದರೂ ಕಣ್ಣಿಗೆ ಒಂದು ಗುಬ್ಬಚ್ಚಿಯೂ ಕಾಣ ಸಿಗದ ಕಾಲಘಟ್ಟದಲ್ಲಿ ನಾವಿದ್ದೇವೆಯೆಂದರೆ ಇದೆಂತಹ ಬೇಸರದ ಸಂಗತಿ ಅಲ್ವಾ..!!

ಇಂದು ವಿಶ್ವ ಗುಬ್ಬಚ್ಚಿಗಳ ದಿನ. ಪ್ರಪ್ರಥಮವಾಗಿ ಈ ದಿನವನ್ನು ಮಾರ್ಚ್ 20, 2010 ರಂದು ಭಾರತದಲ್ಲಿ ನೇಚರ್ ಫಾರೆವರ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ಆಚರಿಸಲು ಆರಂಭಿಸಿತು. ಪ್ರಕೃತಿ ಮತ್ತು ಜೀವವೈವಿಧ್ಯತೆಯ ಸೌಂದರ್ಯ ಹಾಗೂ ಪಕ್ಷಿ ಸಂಕುಲಗಳನ್ನು ಮುಂದಿನ ಜನಾಂಗಕ್ಕಾಗಿ ಹೋಲಿಸಿ ಬೆಳೆಸುವ ಉದ್ದೇಶಕ್ಕಾಗಿ ಮತ್ತು ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.

ಪ್ರಸ್ತುತ ಅತಿಯಾಗಿರುವ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್, 3ಜಿ, 4ಜಿ, 5ಜಿ ಯಂತಹ ನೆಟ್ವರ್ಕ್ ಹಾವಳಿ ಗುಬ್ಬಚ್ಚಿಗಳ ಅವನತಿಗೆ ಕಾರಣ. ಟವರ್ ಗಳಂತಹ ತಂತ್ರಜ್ಞಾನ ವಸ್ತುಗಳಿಂದ ಹೊರಹೊಮ್ಮುವ ತರಂಗಗಳು ನೇರ ಪರಿಣಾಮವನ್ನು ಬೀರುತ್ತವೆ. ಇದರಿಂದಾಗಿ ದಿನೇ ದಿನೇ ಗುಬ್ಬಚ್ಚಿಗಳ ಪ್ರಭೇದ ಕ್ಷೀಣಿಸುತ್ತಾ ಬರುತ್ತಿದ್ದು ಇಂದು ಅಪರೂಪಕ್ಕೆ ಒಂದೆರಡು ಗುಬ್ಬಚ್ಚಿಗಳು ಕಾಣಿಸುವುದೇ ಬಹುದೊಡ್ಡ ವಿಷಯ. 

ಗುಬ್ಬಚ್ಚಿಗಳು ಸಣ್ಣ ಪ್ರಭೇದದ ಸರಳ ಹಕ್ಕಿಗಳು. ನಮ್ಮ ನೈಸರ್ಗಿಕ ಮತ್ತು ಸಾಂಸ್ಕೃತಿಕ ಭೂ ದೃಶ್ಯಗಳ ಒಂದು ಭಾಗವೇ ಸರಿ. ಇವುಗಳ ಅಳಿವು ಉಳಿವು ಬುದ್ಧಿ ಜೀವಿಗಳಾದ ನಮ್ಮ ಕೈಯಲ್ಲಿದೆ. ಪ್ರತೀ ವರ್ಷ ಗುಬ್ಬಚ್ಚಿಗಳ ಪ್ರಭೇದದ ಉಳಿವಿಗಾಗಿ ಒಂದೊಂದು ಧ್ಯೇಯ ಘೋಷಣೆಯೊಂದಿಗೆ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ "ಗುಬ್ಬಚ್ಚಿಗಳನ್ನು ಪ್ರೀತಿಸೋಣ" ಎಂಬ ಘೋಷಣೆಯೊಂದಿಗೆ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಗುತ್ತಿದೆ. 

ಇಡೀ ದೇಶದ ಜನತೆಯಲ್ಲಿ ಗುಬ್ಬಚ್ಚಿಗಳ ಅಳಿವಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ವಿಜ್ಞಾನ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಗಗನದೆತ್ತರ ಸಾಧನೆಗೈಯುತ್ತಿರುವ ನಮಗೆ ಇವುಗಳ ಅತಿಕ್ರಮಣದಿಂದ ಸುತ್ತಲಿನ ಜೀವಸಂಕುಲದ ಮೇಲೆ ಬೀರುತ್ತಿರುವ ದೂರ ಪರಿಣಾಮದ ಅರಿವೇ ಆಗುತ್ತಿಲ್ಲ. ಗುಬ್ಬಚ್ಚಿಯಂತಹ ಪುಟ್ಟ ಜೀವಸಂಕುಲವೊಂದು ಅಳಿದು ಹೋಗಿ ಅಳಿವಿನಂಚಿಗೆ ತಲುಪಿದೆಯೆಂದರೆ ಇಂತಹ ಅದೆಷ್ಟು ಜೀವಿಗಳು ಅಳಿದು ಹೋಗಿರದು ಅಲ್ವಾ..? ಈ ದಿನ ಕೇವಲ ಆಚರಣೆಯಾಗಿ ಉಳಿಯದೆ ಅವುಗಳ ಮೂಲಕ ವಿದ್ಯಾರ್ಥಿಗಳು ಸಾರ್ವಜನಿಕರು ಯುವಜನತೆ ಈ ಗುಬ್ಬಚ್ಚಿಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಸರಕಾರವು ಸೂಕ್ತ ಕ್ರಮಗಳನ್ನು ಅನುಸರಿಸಬೇಕಾಗಿದೆ. ಅವುಗಳೊಂದಿಗೆ ಸಾರ್ವಜನಿಕರು ಕೈಜೋಡಿಸುವ ಮಹತ್ಕಾರ್ಯವಾಗಬೇಕು. ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳ ಚಿಂವ್ ಚಿಂವ್ ಗಾನ ಮತ್ತೆ ನಮ್ಮ ಸುತ್ತಮುತ್ತಲಿನ ಪ್ರಕೃತಿ ಮಡಿಲಲ್ಲಿ ಮೇಳೈಸಬೇಕಾಗಿದೆ. ನಮ್ಮ ಮುಂದಿನ ಪೀಳಿಗೆ ಮನೆಯಂಗಳದಿ ಗುಬ್ಬಚ್ಚಿಗಳೊಂದಿಗೆ ಆಟವಾಡುವಂತಹ ಸುಂದರ ಪರಿಸರದ ನಿರ್ಮಾಣಕ್ಕೆ ನಾವೆಲ್ಲರೂ ಪಣತೊಡಬೇಕು.






Post a Comment

0 Comments