ಆಶಾ ಕಾರ್ಯಕರ್ತೆಯರಿಗೆ ಆಂಧ್ರಪ್ರದೇಶದಲ್ಲಿ ಗ್ರ್ಯಾಚುಟಿ ನೀಡಲು ನಿರ್ಧಾರ

ಕರ್ನಾಟಕ ಸೇರಿದಂತೆ ಹಲವು ಕಡೆ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ವೇತನ ಹೆಚ್ಚಳ, ಗ್ರ್ಯಾಚ್ಯುಟಿ, ವೇತನ ಸಹಿತ ಹೆರಿಗೆ ರಜೆ ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದರೆ ಇದರ ನಡುವೆ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರಕಾರವು ತನ್ನ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ದೇಶದಲ್ಲೇ ಅತಿ ಹೆಚ್ಚು 10,000ರೂ. ಸಂಬಳ ನೀಡುತ್ತಿರುವುದರ ಜೊತೆಗೆ ಇದೀಗ ಗ್ರ್ಯಾಚ್ಯುಟಿ, ವೇತನ ಸಹಿತ ಮಾತೃತ್ವ ರಜೆಯಂತಹ ಸೌಲತ್ತುಗಳನ್ನು ನೀಡಲು ಮುಂದಾಗಿದೆ.
ಮಾರ್ಚ್ 1ರಂದು ಆರೋಗ್ಯ ಇಲಾಖೆಯ ಪರಿಶೀಲನ ಸಭೆ ವೇಳೆ ಈ ಕ್ರಮಗಳಿಗೆ ಅನುಮೋದನೆ ನೀಡಿದ ಸಿಎಂ ಗ್ರಾಚುಟಿ ಪಾವತಿಯನ್ನು ನಿಗದಿಪಡಿಸಲು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಅನ್ವಯ ಆಶಾ ಕಾರ್ಯಕರ್ತೆಯರ ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಕ್ಕೆ ಏರಿಸಲಾಗುವುದು. ಹಾಗೂ ಮೊದಲ ಎರಡು ಹೆರಿಗೆಗಳ ಸಮಯದಲ್ಲಿ ಆರು ತಿಂಗಳವರೆಗೆ ಅಂದರೆ 180 ದಿನಗಳ ವೇತನ ಸಹಿತ ಮಾತೃತ್ವ ರಜೆ ನೀಡಲಾಗುವುದು. ಜೊತೆಗೆ 30 ವರ್ಷ ಸೇವೆ ಸಲ್ಲಿಸಿದ ಕಾರ್ಯಕರ್ತೆಯರಿಗೆ ನಿವೃತ್ತಿ ಸಮಯದಲ್ಲಿ 1.5 ಲಕ್ಷ ಗ್ರಾಚುಟಿ ನೀಡುವ ಮೂಲಕ ಬಹುಕಾಲದ ಬೇಡಿಕೆಯನ್ನು ಈಡೇರಿಸಲಾಗುವುದು. ಈ ಮೂಲಕ ಆಂಧ್ರಪ್ರದೇಶ ಸರಕಾರವು ಆಶಾ ಕಾರ್ಯಕರ್ತೆಯರಿಗೆ ಗ್ರಾಚುಟಿ ನೀಡಿದ ಮೊದಲ ರಾಜ್ಯ ಎನಿಸಿಕೊಳ್ಳಲಿದೆ. ದೇಶದ ಜನರ ಪಾಲಿಗೆ ಆರೋಗ್ಯ ಮಾರ್ಗದರ್ಶಿಗಳಾಗಿ ಹೋರಾಡುವ ಆಶಾ ಕಾರ್ಯಕರ್ತೆಯರ ಬದುಕಿಗೆ ಆಂಧ್ರಪ್ರದೇಶ ಸರಕಾರವು ಹೊಸ ಆಶಾಕಿರಣವನ್ನು ತುಂಬಿದಂತಾಗಿದೆ.


Post a Comment

0 Comments