ಎ ಐ ಸೇವೆಗಾಗಿ ಗೂಗಲ್ ಜೊತೆ ಕೈಜೋಡಿಸಿದ ತಿರುಪತಿ ತಿಮ್ಮಪ್ಪ ದೇವಸ್ಥಾನ!!

ಈ ಆಧುನಿಕ ಜಗತ್ತಿನಲ್ಲಿ ಎಐ ತಂತ್ರಜ್ಞಾನ ಬಹಳಷ್ಟು ಸದ್ದು ಮಾಡುತ್ತಿದೆ. ಎಲ್ಲಿ ನೋಡಿದರೂ ಪ್ರತಿಯೊಂದು ಕೆಲಸ ಕಾರ್ಯಗಳು ಎಐ ತಂತ್ರಜ್ಞಾನಗಳನ್ನು ಬಳಸುವತ್ತ ಯೋಜನೆ ರೂಪಿಸುತ್ತಿದ್ದಾರೆ. ಇದೀಗ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತಾಧಿಗಳಿಗೆ ದೇವರ ಶೀಘ್ರ ದರ್ಶನ ನೀಡುವ ಉದ್ದೇಶದಿಂದ ಎಐ ಆಧಾರಿತ ತಂತ್ರಜ್ಞಾನ ವ್ಯವಸ್ಥೆಯನ್ನು ಜಾರಿಗೆ ತರಲು ದೇವಸ್ಥಾನದ ಆಡಳಿತ ಮಂಡಳಿ ಗೂಗಲ್ ಇಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಎ ಐ ತಂತ್ರಜ್ಞಾನವನ್ನು ಜಾರಿಗೆ ತರುತ್ತಿರುವ ವಿಶ್ವದ ಮೊದಲ ಹಿಂದೂ ದೇವಾಲಯ ಎಂಬ ಖ್ಯಾತಿಗೆ ತಿರುಪತಿ ತಿಮ್ಮಪ್ಪ ದೇವಸ್ಥಾನ ಪಾತ್ರವಾಗಲಿದೆ.

ಸೋಮವಾರ ತಿರುಮಲದಲ್ಲಿ ಟಿಟಿಡಿ ಟ್ರಸ್ಟ್ ಮಂಡಳಿಯ ಸಭೆ ನಡೆದಿದ್ದು ಆನಂತರ ಸುದ್ದಿಗಾರರೊಂದಿಗೆ ಟಿಟಿಡಿ ಅಧ್ಯಕ್ಷರಾಗಿರುವ ಬಿ ಆರ್ ನಾಯ್ಡು ಅವರು ಮಾತನಾಡಿದರು. ಈ ಒಪ್ಪಂದದ ಮೂಲಕ ಆಕರ್ಷಕ ಕೃತಕ ಬುದ್ಧಿಮತ್ತೆ ಸಂಯೋಜಿತ ಯಾತ್ರಾ ಸೇವೆಗಳನ್ನು ದೇವಸ್ಥಾನದಲ್ಲಿ ಜಾರಿಗೆ ತರಲು ಆಡಳಿತ ಮಂಡಳಿ ನಿರ್ಧರಿಸಿದೆ ಜೊತೆಗೆ ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳಿಗೆ ತೊಂದರೆಯಾಗದಂತೆ ಯಾತ್ರೆ ಕೈಗೊಳ್ಳಲು ತಿರುಮಲದಲ್ಲಿ ಎಐ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Post a Comment

0 Comments