ಜಿ.ಬಿ ಸಿಂಡ್ರೋಮ್ ಎಂಬುದು ನರಗಳಿಗೆ ಸಂಬಂಧಿಸಿದ ಒಂದು ಅಪರೂಪದ ಖಾಯಿಲೆ. ನರಸಂಬಂಧಿ ಮಾರಕ ಅಸ್ವಸ್ಥತೆಯಾಗಿರುವ ಈ ಜಿ ಸಿ ಸಿಂಡ್ರೋಮ್ ಮಾಂಸಖಂಡಗಳ ಬಲಹೀನತೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಜಿ.ಬಿ ಸಿಂಡ್ರೋಮ್ ವಿಸ್ತ್ರತ ರೂಪ ಗುಯಿಲಿನ್ ಬರ್ರೆ ಸಿಂಡ್ರೋಮ್ ಎಂಬುದಾಗಿದೆ. 1916 ರಲ್ಲಿ ಈ ರೋಗವನ್ನು ಗುಯಿಲಿನ್, ಬರ್ರೆ ಮತ್ತು ಸ್ಟ್ರೋಲ್ ಎಂಬವರು ಮೊದಲ ಬಾರಿಗೆ ಪತ್ತೆ ಹಚ್ಚಿದ್ದರು. ಆದ್ದರಿಂದ ಅವರು ಹೆಸರನ್ನೇ ಇದಕ್ಕೆ ಇಡಲಾಗಿದೆ.
ಜಿಬಿ ಸಿಂಡ್ರೋಮಿಗೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡಿದ್ದೇ ಆದಲ್ಲಿ ರೋಗಿಯು ಸಂಪೂರ್ಣ ಗುಣಮುಖರಾಗುತ್ತಾನೆ. ಆದರೆ ರೋಗಲ ಲಕ್ಷಣಗಳನ್ನು ನಿರ್ಲಕ್ಷಿಸಿ ಆಸ್ಪತ್ರೆಗೆ ಹೋಗದೆ ಇದ್ದರೆ ಜೀವನಪರ್ಯಂತ ಬಲಹೀನತೆ, ನಿಶ್ವೇಷ್ಠತೆ ಹಾಗೂ ತೀವ್ರ ಆಯಾಸದಿಂದ ಬಳಲಬೇಕಾಗುತ್ತದೆ.
ಈ ಕಾಯಿಲೆಗೆ ಯಾವುದೇ ವಯಸ್ಸಿನ ಹಂಗಿಲ್ಲ. ಸೋಂಕಿತರಲ್ಲಿ ಪಾದ ಹಾಗೂ ಕಾಲುಗಳು ಜುಮ್ಮೆನಿಸಲು ಆರಂಭವಾಗಿ ತೀವ್ರವಾದ ಬಲಹೀನತೆ ಕಂಡು ಬರುತ್ತದೆ. ಮೊದಲಿಗೆ ಕಾಲಿನ ಮಾಂಸ ಖಂಡಗಳ ಬಲಹೀನತೆ ಆರಂಭವಾಗಿ ನಂತರ ತೋಳುಗಳಿಗೆ ಮತ್ತು ದೇಹದ ಮೇಲ್ಭಾಗಕ್ಕೆ ಹರಡಿ ಅಸಹನೀಯ ನೋವು ಆರಂಭವಾಗುತ್ತದೆ. ಕೈ, ತೋಳುಗಳು ಬಲಹೀನವಾದ ನಂತರ ಕುತ್ತಿಗೆ, ಮುಖದ ಭಾಗಗಳು ಬಲಹೀನವಾಗಿ ಶ್ವಾಸಕೋಶಕ್ಕೂ ಹರಡುವ ಸಂಭವವಿರುತ್ತದೆ. ಈ ಸೋಂಕಿನಲ್ಲಿ ಬಳಲುವ ವ್ಯಕ್ತಿಗೆ ಸ್ವಯಂ ನಿಯಂತ್ರಣವಿಲ್ಲದೆ ಹೆಜ್ಜೆ ಇಡಲೂ ಆಗುವುದಿಲ್ಲ. ಈ ಸೋಂಕಿನ ಲಕ್ಷಣಗಳಲ್ಲಿ ವಾಂತಿಭೇದಿಯು ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ. ಈ ಸೋಂಕು ಕ್ಯಾಮ್ ಪೈಲೋ ಜಿಜುನೈ(CAMPYLO JEJUNI) ಎಂಬ ಬ್ಯಾಕ್ಟೀರಿಯಾದಿಂದ ಹಾಗೂ ಇನ್ಫ್ಲುಯೆನ್ಜ ವೈರಾಣುಗಳ ಮೂಲಕ ಹರಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.
ಅಕ್ಯೂಟ್ ಇನ್ಫ್ಲಮೇಟರಿ ಡಿಮೈಯಲಿನೇಟಿಂಗ್ ಪಾಲಿರೆಡಿಕ್ಯುಲೊ ನ್ಯೂರೊಪಥಿ ಎಂದು ಕರೆಯುವ ಈ ಕಾಯಿಲೆಗೆ ನಿರ್ದಿಷ್ಟ ಕಾರಣ ತಿಳಿದಿಲ್ಲ. ಅರೆ ಬೇಯಿಸಿದ ಮಾಂಸಗಳು ಅಥವಾ ಇತರೆ ಆಹಾರ ಪದಾರ್ಥಗಳು, ಅಶುಚಿತ ನೀರು ಅಥವಾ ಆಹಾರಗಳ ಸೇವನೆಯಿಂದ ಕೆಲವೊಂದು ವೈರಾಣುಗಳು ನಮ್ಮ ದೇಹವನ್ನು ಸೇರಿ ಈ ಕಾಯಿಲೆ ಉದ್ಭವಿಸಬಹುದು. ಈ ಕಾಯಿಲೆ ಕಾಣಿಸಿಕೊಂಡಿರುವ ಕೆಲವು ರೋಗಿಗಳಲ್ಲಿ ಕೋವಿಡ್ 19, ಫ್ಲೂ, ವೈರಾಣು, ಬ್ಯಾಕ್ಟೀರಿಯಗಳಿಂದ ಉಂಟಾಗುವ ರೋಗಗಳು ಕಂಡುಬಂದಿರುತ್ತವೆ.
ಈ ಖಾಯಿಲೆಯ ಲಕ್ಷಣಗಳೆಂದರೆ ಕೈ ಮತ್ತು ಕಾಲು ಬೆರಳುಗಳಲ್ಲಿ, ಪಾದಗಳಲ್ಲಿ, ಮಣಿಕಟ್ಟಿನಲ್ಲಿ ಸೂಜಿ ಅಥವಾ ಮುಳ್ಳಿನಿಂದ ಚುಚ್ಚಿದ ಹಾಗೆ ಅನುಭವವಾಗುತ್ತದೆ. ಅಸ್ಥಿರವಾದ ನಡಿಗೆ, ನಡೆಯಲು ಮತ್ತು ಮೆಟ್ಟಿಲುಗಳನ್ನು ಹತ್ತಲು ಆಗದಿರುವುದು. ಮುಖ ತಿರುಗಿಸಲು, ಮಾತನಾಡಲು, ಆಹಾರ ಸೇವಿಸಲು ಅತೀವ ತೊಂದರೆ ಕಂಡು ಬರುತ್ತದೆ. ರಕ್ತದೊತ್ತಡದಲ್ಲಿ ಏರುಪೇರು ಆಗುವುದು, ಉಸಿರಾಟದಲ್ಲಿ ತೊಂದರೆ, ಹೃದಯ ಬಡಿತದಲ್ಲಿ ತೀವ್ರತೆ, ಕಣ್ಣುಗಳನ್ನು ತಿರುಗಿಸಲು ಸಾಧ್ಯವಾಗದಿರುವುದು, ದೃಷ್ಟಿ ಎರಡೆರಡಾಗಿ ಕಾಣುವುದು, ಮೂತ್ರ ಹಾಗೂ ಮಲವಿಸರ್ಜನೆಯ ನಿಯಂತ್ರಣ ಶಕ್ತಿ ಕುಂದುವುದು ಮೊದಲಾದ ಲಕ್ಷಣಗಳು ಕಂಡುಬರುತ್ತದೆ. ಕೆಲವೊಮ್ಮೆ ವೈದ್ಯರು ಈ ರೋಗದ ಲಕ್ಷಣಗಳನ್ನು ಪತ್ತೆ ಮಾಡಿದರೂ ವೈದ್ಯಕೀಯ ಪರೀಕ್ಷೆಯಲ್ಲಿ ಈ ರೋಗ ದೃಢ ಪಡುವುದಿಲ್ಲ. ಇದು ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸುತ್ತದೆ.
ಜಿ ಸಿ ಸಿಂಡ್ರೋಮ್ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹರಡುತ್ತಿದ್ದು, ಯಾರೂ ಈ ರೋಗ ಲಕ್ಷಣವನ್ನು ಕಡೆಗಣಿಸಬಾರದು. ಈ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಜೀವನಪೂರ್ತಿ ನರಳಾಡುವ ಪರಿಸ್ಥಿತಿ ಎದುರಾಗಬಹುದು.
0 Comments