ಐಎಂಎಫ್ ಅಧಿಕೃತವಾಗಿ ಹಣಕಾಸು ವಹಿವಾಟು ಆರಂಭಿಸಿದ ದಿನವಿಂದು..!!

ಇತಿಹಾಸದ ಪುಟ ತೆರೆದಾಗ ಮಾರ್ಚ್ 1 ಅತ್ಯಂತ ಮಹತ್ವದ ದಿನ. ಅಂತರಾಷ್ಟ್ರೀಯ ಹಣಕಾಸಿನ ಸಹಕಾರದ ಇತಿಹಾಸದಲ್ಲಿ ಈ ದಿನ ಅಂತರಾಷ್ಟ್ರೀಯ ಹಣಕಾಸು ನಿಧಿ (IMF:- International Monetary Fund) ಸ್ಥಾಪನೆಯಾದ ಪರ್ವ ದಿನ. 
1944ರ ಬ್ರಿಟನ್ ವುಡ್ಸ್ ಸಮ್ಮೇಳನದ ನಿರ್ಣಾಯಕದ ಫಲವಾಗಿ ಅಂತರಾಷ್ಟ್ರೀಯ ಹಣಕಾಸು ನಿಧಿ ಜನ್ಮ ತಾಳಿತು. ಐಎಂಎಫ್ 1945 ಡಿಸೆಂಬರ್ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿದ್ದಾದರೂ, ಅದರ ವಿನಿಮಯ, ಕಾರ್ಯಕಲಾಪಗಳು 1947ರ ಮಾರ್ಚ್ 1 ರಿಂದ ಅಧಿಕೃತವಾಗಿ ಆರಂಭಗೊಂಡವು. ಐಎಂಎಫ್ ಕೇಂದ್ರ ಕಚೇರಿಯು ಅಮೆರಿಕಾದ ವಾಷಿಂಗ್ಟನ್ ನಲ್ಲಿದೆ. ಆರಂಭದಲ್ಲಿ ಐಎಂಎಫ್ ಕೇವಲ 44 ಸದಸ್ಯ ರಾಷ್ಟ್ರಗಳನ್ನು ಹೊಂದಿತ್ತು. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಐಎಂಎಫ್ ಸದಸ್ಯ ದೇಶಗಳ ಸಂಖ್ಯೆ 189ಕ್ಕೇರಿದೆ.

ಐಎಮ್ಎಫ್ ಆಡಳಿತವನ್ನು ಒಂದು ಗವರ್ನರ್ ಮಂಡಳಿ, ಒಂದು ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ, ಒಬ್ಬ ವ್ಯವಸ್ಥಾಪಕ ನಿರ್ದೇಶಕ ಮತ್ತು ಇತರೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಐಎಮ್ಎಫ್ ನ ದಿನನಿತ್ಯದ ಕಾರ್ಯಕಲಾಪಗಳನ್ನು ನೆರವೇರಿಸಿಕೊಂಡು ಹೋಗುವ ಜವಾಬ್ದಾರಿಯು ನಿರ್ದೇಶಕರ ಮಂಡಳಿಯದ್ದಾಗಿದೆ. ಈ ಮಂಡಳಿಯಲ್ಲಿ ಒಟ್ಟು ಇಪ್ಪತ್ತು ಮಂದಿ ನಿರ್ದೇಶಕರುಗಳಿರುತ್ತಾರೆ. ಅವರಲ್ಲಿ ಐದು ಮಂದಿ ನಿರ್ದೇಶಕರು ಶಾಶ್ವತ ಸದಸ್ಯರುಗಳಾಗಿದ್ದು, ಶಾಶ್ವತ ಸದಸ್ಯತ್ವ ಪಡೆದ ರಾಷ್ಟ್ರಗಳೆಂದರೆ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಭಾರತಗಳಾಗಿವೆ. 15 ಮಂದಿ ನಿರ್ದೇಶಕರನ್ನು ಭೌಗೋಳಿಕ ಹಂಚಿಕೆಯ ಆಧಾರದ ಮೇಲೆ ಎರಡು ವರ್ಷಗಳಿಗೊಮ್ಮೆ ಚುನಾಯಿಸಲಾಗುತ್ತದೆ.

ಐಎಮ್ಎಫ್ ನ ಉದ್ದೇಶಗಳು:
1. ಅಂತರಾಷ್ಟ್ರೀಯ ಹಣಕಾಸಿಗೆ ಸಹಕಾರ ನೀಡುವುದು. 
2. ಅಂತರಾಷ್ಟ್ರೀಯ ವ್ಯಾಪಾರದ ಸಮತೋಲನವನ್ನು ವೃದ್ಧಿಸುವುದು. 
3. ವಿನಿಮಯ ದರದಲ್ಲಿ ಸ್ಥಿರತೆ ಕಾಪಾಡುವುದು. 
4. ವಿನಿಮಯ ನಿಯಂತ್ರಣಗಳ ನಿರ್ಮೂಲನೆ 
5. ಪಾವತಿ ಶಿಲ್ಕಿನಲ್ಲಿನ ಅಸಮತೋಲನವನ್ನು ನಿವಾರಿಸುವುದು. 
6. ಅಂತರಾಷ್ಟ್ರೀಯ ಸಂಘಟನೆಯನ್ನು ಬಲಪಡಿಸುವುದು.

Post a Comment

0 Comments