ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ತಂಡ

ಕಳೆದ 9 ತಿಂಗಳುಗಳಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಭಾರತೀಯ ಕಾಲಮಾನದಂತೆ  ಇಂದು ಬೆಳಗ್ಗೆ 3 ಗಂಟೆ 27 ನಿಮಿಷಕ್ಕೆ ಸುರಕ್ಷಿತವಾಗಿ ಭೂಮಿಗೆ ಆಗಮಿಸಿದ್ದಾರೆ. ಭಾರತ ಸೇರಿದಂತೆ ಇಡೀ ಜಗತ್ತಿನ ಪ್ರಾರ್ಥನೆ, ಸುನಿತ ವಿಲಿಯಮ್ಸ್ ತಂಡದ ಸುರಕ್ಷಿತ ಆಗಮನದ ಮೇಲಿದ್ದು ಕೋಟಿ ಜನರ ಆ ಪ್ರಾರ್ಥನೆ ಫಲಿಸಿದೆ.
ಮಾರ್ಚ್ 18ನೇ ಮಂಗಳವಾರ ಸುನಿತಾ ಮತ್ತು ಬುಚ್ ಅವರನ್ನು ಒಳಗೊಂಡ ನಾಲ್ವರು ಗಗನಯಾತ್ರಿಗಳ ತಂಡವು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸ್ಪೇಸ್ ಎಕ್ಸ್ ಕ್ಯಾಪ್ಸುಲ್ನಲ್ಲಿ ಹೊರಟಿತ್ತು. ನಿನ್ನೆ ಭಾರತೀಯ ಕಾಲಮಾನ ಬೆಳಿಗ್ಗೆ 10.35ಕ್ಕೆ  ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ನಿಲ್ದಾಣದಿಂದ ಬೇರ್ಪಟ್ಟು ಭೂಮಿಯತ್ತ ಪ್ರಯಾಣವನ್ನು ಆರಂಭಿಸಿತ್ತು. ಇದು ಸುಮಾರು 17 ಗಂಟೆಗಳ ಸುದೀರ್ಘ ಪ್ರಯಾಣವಾಗಿದ್ದು ಭಾರತೀಯ ಕಾಲಮಾನ ಇಂದು ಮುಂಜಾನೆ 3.27ಕ್ಕೆ ಅಮೇರಿಕಾದ ಫ್ಲೋರಿಡಾ ಕರಾವಳಿಯ ಸಮುದ್ರದಲ್ಲಿ ಸುನಿತಾ ವಿಲಿಯಮ್ಸ್ ರವರನ್ನು ಒಳಗೊಂಡ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ನೌಕೆ ಸಮುದ್ರಕ್ಕೆ ಇಳಿದಿದೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೊರ್ ಅವರನ್ನು ಭೂಮಿಗೆ ಕರೆ ತರುವಲ್ಲಿ ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ ಕೈಗೊಂಡಿರುವ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ತಾಂತ್ರಿಕ ದೋಷದಿಂದಾಗಿ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿದ್ದ ಈ ಗಗನಯಾತ್ರಿಗಳನ್ನು ಮರಳಿ ಕರೆ ತರುವುದು ಬಹುದೊಡ್ಡ ಸವಾಲಿನ ಕೆಲಸವೇ ಆಗಿತ್ತು. ಆದರೆ ನಾಸಾ ಹಾಗೂ ಸ್ಪೇಸ್ ಎಕ್ಸ್ ತಂತ್ರಜ್ಞಾನಿಗಳು ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ಜಗತ್ತೇ ಮೆಚ್ಚುವಂತಹ ಕಾರ್ಯಾಚರಣೆಯನ್ನು ಮಾಡಿದ್ದಾರೆ. ಸಮುದ್ರದಲ್ಲಿ ಬಂದಿಳಿದ ಗಗನಯಾತ್ರಿಗಳನ್ನೊಳಗೊಂಡ ಬಾಹ್ಯಾಕಾಶ ನೌಕೆಯನ್ನು ಬೇರ್ಪಡಿಸಿ ಅವರ ಆರೋಗ್ಯ ತಪಾಸಣೆಯಂತಹ ಕೆಲಸಗಳು ನಡೆಯುತ್ತಿವೆ. 9 ತಿಂಗಳು ಗುರುತ್ವಾಕರ್ಷಣಾ ಬಲದಿಂದ ಹೊರಗೆ ಇದ್ದು ಈಗ ಮತ್ತೆ ಈ ವಾತಾವರಣ ಹಾಗೂ ಗುರುತ್ವಾಕರ್ಷಣಾ ಬಲದೊಂದಿಗೆ ಶಾರೀರಿಕವಾಗಿ ಗಗನಯಾತ್ರಿಗಳು ಒಗ್ಗಿಕೊಳ್ಳಬೇಕಾದ ಅವಶ್ಯಕತೆ ಇದೆ. ಈ ವಾತಾವರಣಕ್ಕೆ ಅವರ ಆರೋಗ್ಯ ಸಂಪೂರ್ಣವಾಗಿ ಹೊಂದಿಕೊಂಡ ನಂತರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುವುದು ಎಂದು ನಾಸಾ ತಿಳಿಸಿದೆ. 

ಭಾರತದ ಪ್ರಧಾನಿ ಸುನಿತಾ ವಿಲಿಯಮ್ಸ್ ಅವರ ಸುರಕ್ಷಿತ ಬರುವಿಕೆಗಾಗಿ ಭಾವುಕ ಪತ್ರವನ್ನು ಬರೆದಿದ್ದು, ಭಾರತದ ಮಗಳನ್ನು ಮತ್ತೆ ಭಾರತದ ಮಣ್ಣಿನಲ್ಲಿ ನೋಡಲು ಕಾತುರನಾಗಿದ್ದೇನೆ ಎಂದು ಸಮಸ್ತ ಭಾರತೀಯರ ಪರವಾಗಿ ನರೇಂದ್ರ ಮೋದಯವರು ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ. 59 ವರ್ಷ ಪ್ರಾಯದ ಹಿರಿಯ ಮಹಿಳೆಯಾಗಿರುವ ಸುನೀತಾ ಬಾಹ್ಯಾಕಾಶದಲ್ಲಿ ಧೈರ್ಯವಾಗಿ 9 ತಿಂಗಳು ಜೀವನವನ್ನು ಸಾಗಿಸಿ ಮರಳಿ ಮಣ್ಣಿಗೆ ಬಂದ ಧೈರ್ಯವಂತೆ. ಇಡೀ ಜಗತ್ತಿಗೆ  ಇವರ ಸಾಹಸದ ಬದುಕು ಅದ್ಭುತ ಸ್ಪೂರ್ತಿಯೇ ಸರಿ.

Post a Comment

0 Comments