ಭಾರತಕ್ಕೆ ಲಗ್ಗೆಯಿಡುತ್ತಿರುವ ಟವರ್ ರಹಿತ ಇಂಟರ್ನೆಟ್ "ಸ್ಟಾರ್ ಲಿಂಕ್"

ತಂತ್ರಜ್ಞಾನಗಳ ಅಭಿವೃದ್ಧಿ ನಾನಾ ಕ್ಷೇತ್ರಗಳಲ್ಲಿ ಭಾರತವನ್ನು ಎತ್ತರೆತ್ತರಕ್ಕೆ ಕೊಂಡೊಯ್ಯುತ್ತಿದೆ. ಈ ತಾಂತ್ರಿಕ ಆವಿಷ್ಕಾರಗಳು ಭಾರತಕ್ಕೆ ವರವೂ ಹೌದು, ಇನ್ನೊಂದೆಡೆ ಶಾಪವಾಗಿಯೂ ಪರಿಚಯಿಸುವುದರಲ್ಲಿ ಸಂಶಯವಿಲ್ಲ. ಈಗ ಭಾರತಕ್ಕೆ ಟವರ್ ರಹಿತ ಇಂಟರ್ನೆಟ್ ಕಾಲಿಡುತ್ತಿದ್ದು ತುಂಬಾನೇ ಸುದ್ದಿಯಾಗುತ್ತಿದೆ. 
ಹೌದು.. ಜಗತ್ತಿನ ಟೆಕ್ ಅಧಿಪತಿ ಎಂದೇ ಖ್ಯಾತವಾಗಿರುವ ಎಲಾನ್ ಮಸ್ಕ್ ಅವರ ಸಾರಥ್ಯದ ಉಪಗ್ರಹ ಆಧಾರಿತ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಸಂಸ್ಥೆ ಸ್ಟಾರ್ ಲಿಂಕ್ ಈಗ ಭಾರತಕ್ಕೆ ಕಾಲಿಡುತ್ತಿದ್ದು ಭಾರತದಲ್ಲೂ ತಮ್ಮ ಇಂಟರ್ನೆಟ್ ಜಾಲವನ್ನು ವಿಸ್ತರಿಸಲಿದ್ದಾರೆ. ಭಾರತೀಯ ಟೆಲಿಕಾಂ ದಿಗ್ಗಜ ಸಂಸ್ಥೆಗಳಾದ ಏರ್ಟೆಲ್ ಮತ್ತು ಜಿಯೋ ಸಹಭಾಗಿತ್ವದಲ್ಲಿ ಸ್ಟಾರ್ ಲಿಂಕ್ ಭಾರತಕ್ಕೆ ಕಾಲಿಡುತ್ತಿದೆ.

ಎಲಾನ್ ಮಸ್ತ್ ಅವರ ಸ್ಟಾರ್ ಲಿಂಕ್ ಸಂಸ್ಥೆ ಜಗತ್ತಿನಾದ್ಯಂತ ಸುಮಾರು ನೂರಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈ ಹಿಂದೆ ಹಲವು ಬಾರಿ ಭಾರತಕ್ಕೆ ಕಾಲಿಡಲು ಪ್ರಯತ್ನಿಸಿ ವಿಫಲಗೊಂಡಿದ್ದ ಸ್ಟಾರ್ ಲಿಂಕ್ ಸಂಸ್ಥೆ ಪ್ರಸ್ತುತ ಟೆಸ್ಲಾ ಸಂಸ್ಥೆ ಜೊತೆ ಮತ್ತೆ ಯಶಸ್ವಿಯಾಗಿ ಭಾರತದಲ್ಲಿ ಕಾರ್ಯಾರಭ ಮಾಡಲು ಶುಭ ಮುಹೂರ್ತ ನಿಗದಿಯಾಗಿದೆ. ರಾಷ್ಟ್ರೀಯ ಭದ್ರತೆಯ ಕಾರಣದಿಂದ ಭಾರತಕ್ಕೆ ಸ್ಟಾರ್ ಲಿಂಕ್ ಪ್ರವೇಶವನ್ನು ತಡೆಹಿಡಿಯಲಾಗಿತ್ತು. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮಾತ್ರವಲ್ಲದೇ ಏಷ್ಯಾ ಖಂಡದ ಮಲೇಷಿಯಾ, ಇಂಡೋನೇಷ್ಯಾ, ಭೂತಾನ್, ಶ್ರೀಲಂಕಾ ದೇಶಗಳು ಕೂಡ ಈ ಸ್ಟಾರ್ ಲಿಂಕ್ ಸಂಸ್ಥೆಯೊಂದಿಗೆ ಟವರ್ ರಹಿತ ಇಂಟರ್ನೆಟ್ ವ್ಯವಸ್ಥೆಗಾಗಿ ಒಪ್ಪಂದ ಮಾಡಿಕೊಂಡಿದೆ

ಏನಿದು ಸ್ಟಾರ್ ಲಿಂಕ್?
ಸ್ಟಾರ್ ಲಿಂಕ್ ಎಂಬುದು ಜಗತ್ತಿನ ಅತಿ ದೊಡ್ಡ ಉಪಗ್ರಹಗಳ ಸಮುಚ್ಚಯವಾಗಿದ್ದು,ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಪ್ರಸಾರದ ಉದ್ದೇಶವನ್ನು ಹೊಂದಿದೆ.ಈ ಸ್ಟಾರ್ ಲಿಂಕ್ ಉಪಗ್ರಹ ಸಮುಚ್ಛಯದಲ್ಲಿ 7000 ಸಣ್ಣ ಉಪಗ್ರಹಗಳಿವೆ. ಇವೆಲ್ಲವೂ ಭೂಮಿಗೆ ಸಮೀಪದ ಕಕ್ಷೆಯಲ್ಲಿ (ಲೋ ಅರ್ಥ್ ಆರ್ಬಿಟ್) ಅಂದರೆ ಭೂಮಿಯಿಂದ ಸುಮಾರು 550 ಕಿಲೋ ಮೀಟರ್ ದೂರದಲ್ಲಿ ಸ್ಟಾರ್ ಲಿಂಕ್ ಉಪಗ್ರಹಗಳು ಕಾರ್ಯಾಚರಿಸುತ್ತಿವೆ.


ಪ್ರಸ್ತುತ ನಮ್ಮ ದೇಶದಲ್ಲಿ ಮೊಬೈಲ್ ಟವರ್ ಗಳನ್ನು ಸ್ಥಾಪಿಸಿ ಆ ಮೂಲಕ ನೆಟ್ವರ್ಕ್ ಸೇವೆಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಒದಗಿಸಲಾಗುತ್ತದೆ. ಆದರೆ ಸ್ಟಾರ್ ಲಿಂಕ್ ವ್ಯವಸ್ಥೆಯಲ್ಲಿ ಇಂಟರ್ನೆಟ್ ಉಪಗ್ರಹಗಳ ಮೂಲಕ ನೇರವಾಗಿ ಬಳಕೆದಾರರ ಮನೆ ಬಾಗಿಲನ್ನು ತಲುಪುತ್ತವೆ. ಈ ರೀತಿ ಇಂಟರ್ನೆಟ್ಟನ್ನು ಸ್ವೀಕರಿಸಲು ಗ್ರಾಹಕರು ಸ್ಟಾರ್ ಲಿಂಗ ಡಿಶ್ ಅಥವಾ ರೂಟರ್ ಉಪಕರಣವನ್ನು ಹೊಂದಿರಬೇಕಾಗುತ್ತದೆ. ಈ ಉಪಕರಣವು ತನ್ನ ಜಾಗಕ್ಕೆ ಸಮೀಪದಲ್ಲಿರುವ ಸ್ಟಾರ್ ಲಿಂಕ್ ಉಪಗ್ರಹಗಳ ಜೊತೆ ಸಂಪರ್ಕ ಸಾಧಿಸಿ ನೆಟ್ವರ್ಕ್ ಸೇವೆಯನ್ನು ಒದಗಿಸುತ್ತದೆ.

ಸ್ಟಾರ್ ಲಿಂಕ್ ನೆಟ್ವರ್ಕ್ ವೈಶಿಷ್ಟ್ಯಗಳೇನು? 
ನಮಗೆಲ್ಲರಿಗೂ ತಿಳಿದಿರುವಂತೆ ಈಗಿರುವ ವ್ಯವಸ್ಥೆಯಲ್ಲಿ ಮೊಬೈಲ್ ಸಂಪರ್ಕಕ್ಕೆ ಟವರ್ ಗಳು ಅತ್ಯವಶ್ಯಕ. ಅದರಲ್ಲೂ ಹೆಚ್ಚಿನ ಗ್ರಾಮೀಣ ಪ್ರದೇಶಗಳಿಗೆ ಈ ನೆಟ್ವರ್ಕ್ ಸರಿಯಾಗಿ ತಲುಪಲಾದ ತುಂಬಾನೇ ಸಮಸ್ಯೆಗಳು ಎದುರಾಗುತ್ತಿವೆ. ಹೆಚ್ಚಿನ ಕಡೆಗಳಲ್ಲಿ ಟವರ್ ಸ್ಥಾಪಿಸಲು ಸಾರ್ವಜನಿಕರು ತಮ್ಮ ಸ್ವಂತ ಜಾಗಗಳನ್ನು ಕೊಡದೆ ಅಥವಾ ತಮ್ಮ ಆಸುಪಾಸಿನಲ್ಲಿ ಈ ಟವರ್ ಗಳ ಸ್ಥಾಪನೆಗೆ ವಿರೋಧಗಳನ್ನೂ ವ್ಯಕ್ತಪಡಿಸುತ್ತಾರೆ. ಟವರ್ ಗಳಿಂದ ಪ್ರಾಣಿ ಪಕ್ಷಿಗಳು ಹಾಗೂ ಜನಸಾಮಾನ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರವ ಸಾಧ್ಯತೆ ಇರುವುದರಿಂದ ಜನರು ಈ ರೀತಿ ಭಯ ಪಡುವುದು ಸಹಜ. ಈ ರೀತಿ ನೆಟ್ವರ್ಕ್ ಸಮಸ್ಯೆಯಿಂದ ಸುಮಾರು 70 ಕೋಟಿಗೂ ಅಧಿಕ ಭಾರತೀಯರು ಸಮಸ್ಯೆಯನ್ನೆದುರಿಸುತ್ತಿದ್ದಾರೆ ಎಂದು ಸಮೀಕ್ಷೆಯು ಹೇಳುತ್ತದೆ. ಆದರೆ ಈ ಸ್ಟಾರ್ ಲಿಂಕ್ ವ್ಯವಸ್ಥೆ ಜಾರಿಗೆ ಬಂದರೆ ಯಾವುದೇ ರೀತಿಯ ಮೊಬೈಲ್ ಟವರ್ ಸ್ಥಾಪನೆಯ ಅಗತ್ಯವಿರುವುದಿಲ್ಲ. ನೇರವಾಗಿ ಆಕಾಶದಿಂದ ಉಪಗ್ರಹಗಳ ಮೂಲಕ ಇಂಟರ್ನೆಟ್ ಮೊಬೈಲನ್ನು ತಲುಪುತ್ತದೆ. ಎಲ್ಲಾ ಜನಸಾಮಾನ್ಯರು ಬಯಸುವ ಹೈ ಸ್ಪೀಡ್ ಇಂಟರ್ನೆಟ್ ಒದಗಿಸುವುದು ಸ್ಟಾರ್ ಲಿಂಕ್ ವಿಶೇಷತೆ. ಈ ಉಪಗ್ರಹ ಆಧಾರಿತ ಸೇವೆ ಬಳಸಿ 25-220 ಎಂಬಿಪಿಎಸ್ ಡೌನ್ಲೋಡ್ ಸ್ಪೀಡನ್ನು ಬಳಕೆದಾರರು ಪಡೆದುಕೊಳ್ಳಬಹುದು.

5ಜಿ ಸಂಪರ್ಕದಿಂದ ಮೊಬೈಲ್ ಬಳಕೆದಾರರು 10-20 ಜಿಬಿಪಿಎಸ್ ಅಂದರೆ 4ಜಿ ಗಿಂತ 100 ಪಟ್ಟು ಅಧಿಕ ವೇಗ ಹೊಂದಬಹುದಾಗಿದೆ. ಆದರೆ ಸ್ಟಾರ್ ಲಿಂಗ ಗರಿಷ್ಠ 220 ಎಂಬಿಪಿಎಸ್ ತನಕ ಹೈ ಸ್ಪೀಡ್ ನೆಟ್ವರ್ಕ್ ಒದಗಿಸಲಿದೆ. ಸೆಲ್ಯುಲಾರ್ ಸೇವೆಯಾಧಾರಿತ 5ಜಿ ತಂತ್ರಜ್ಞಾನ ಸ್ಟಾರ್ ಲಿಂಕ್ ಗಿಂತ ಹೆಚ್ಚು ಹೈ ಸ್ಪೀಡ್ ಇಂಟರ್ನೆಟ್ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ನೆಟ್ವರ್ಕ್ ಕವರೇಜ್ ಚೆನ್ನಾಗಿರುವ ನಗರ ಪ್ರದೇಶಗಳ ಬಳಕೆದಾರರಿಗೆ ಮಾತ್ರ ಈ 5ಜಿ ನೆಟ್ವರ್ಕ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಸ್ಟಾರ್ ಲಿಂಕ್ ಮೂಲಸೌಕರ್ಯಗಳಿಲ್ಲದ ಗ್ರಾಮೀಣ ಪ್ರದೇಶದ ಜಾಗಗಳಲ್ಲೂ ನೆರವಿಗೆ ಬರಲಿದೆ. ಉಪಗ್ರಹಗಳ ತರಂಗಗಳ ಮೂಲಕ ಸ್ಟಾರ್ ಲಿಂಕ್ ನೆಟ್ವರ್ಕ್ ಇನ್ನು ಮುಂದೆ ಯಾವುದೇ ಅಡೆತಡೆಗಳಿಲ್ಲದೆ ಕುಗ್ರಾಮಗಳಿಂದ ಹಿಡಿದು ಹಾರುವ ವಿಮಾನದಲ್ಲೂ ಸೇವೆ ಒದಗಿಸಲಿದೆ.

ಉಪಗ್ರಹ ಆಧಾರಿತ ಸ್ಟಾರ್ ಲಿಂಕ್ ನೆಟ್ವರ್ಕ್ ವ್ಯವಸ್ಥೆಯು ಸ್ವಲ್ಪ ದುಬಾರಿಯೇ ಸರಿ. ಅಮೆರಿಕದಲ್ಲಿ ಸ್ಟ್ಯಾಂಡರ್ಡ್ ಸ್ಟಾರ್ ಲಿಂಕ್ ಸೇವೆಗೆ ಅಲ್ಲಿನ ಜನರು ಪ್ರತಿ ತಿಂಗಳಿಗೆ 10,500 ರೂಪಾಯಿ ನೀಡುತ್ತಿದ್ದಾರೆ. ಆದರೆ ಭಾರತದಲ್ಲಿ ಈ ಸೇವೆಗೆ ಬೆಲೆ ಎಷ್ಟಾಗಬಹುದೆಂದು ಇದುವರಿಗೆ ಖಚಿತವಾಗಿ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಪರಿಣತರ ಅಂದಾಜಿನ ಪ್ರಕಾರ 3500 ರಿಂದ 4,500 ಆಸು ಪಾಸಿನಲ್ಲಿ ಬೆಲೆ ನಿಗದಿಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


Post a Comment

0 Comments