ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ

ಅಗ್ನಿಪಥ ಯೋಜನೆಯಲ್ಲಿ 2025 ನೇ ಸಾಲಿನ ಅಗ್ನಿಪಥ ಯೋಜನೆಯಡಿಯಲ್ಲಿ ಭೂಸೇನೆಗೆ ಅಗ್ನಿ ವೀರರ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು ಬುಧವಾರದಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. 
ದೇಶದೆಲ್ಲೆಡೆ ವಿವಿಧ ಸೇನಾ ವಲಯ ನೇಮಕಾತಿ ಕಚೇರಿಗಳಲ್ಲಿ ಜೂನ್ ತಿಂಗಳಿನಿಂದ ಸೇನಾ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಲಿವೆ‌. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು ಮತ್ತು ಬೆಳಗಾವಿ ಸೇನಾ ವಲಯ ಕಚೇರಿಗಳು ನೇಮಕಾತಿಯ ಉಸ್ತುವಾರಿ ವಹಿಸಲಿದೆ. ರಾಜ್ಯದಲ್ಲಿಯೂ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ನೇಮಕ ರಾಲಿಗಳು ನಡೆಯಲಿದ್ದು, ಅವುಗಳ ಬಗ್ಗೆ ಪ್ರತ್ಯೇಕ ಅಧಿಸೂಚನೆಗಳನ್ನು ಪ್ರಕಟಿಸಲಾಗಿದೆ. ಏಪ್ರಿಲ್ 10 ರ ತನಕ ನೋಂದಣಿಗೆ ಅವಕಾಶವಿದ್ದು, ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆಯನ್ನು ಸ್ಪಷ್ಟಪಡಿಸಿಲ್ಲ. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧರಿತ ಆನ್ಲೈನ್ ಪರೀಕ್ಷೆ ನಡೆಸಿ ನಂತರ ನೇಮಕರಲ್ಲಿ ಕೈಗೊಳ್ಳಲಾಗುತ್ತದೆ ಎಂದು ಸೇನೆಯು ಅಧಿಸೂಚನೆಯಲ್ಲಿ ತಿಳಿಸಿದೆ. ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ ಹಾಗೂ ಟ್ರೇಡ್ಸ್ ಮನ್ ವಿಭಾಗದಲ್ಲಿ ಅಗ್ನಿವೀರರ ನೇಮಕಾತಿ ನಡೆಯಲಿದೆ.


ಅಭ್ಯರ್ಥಿಗಳಿಗಿರಬೇಕಾದ ವಿದ್ಯಾರ್ಹತೆಗಳು:
ಜನರಲ್ ಡ್ಯೂಟಿ ವಿಭಾಗದ ಅಗ್ನಿವೀರರ ಹುದ್ದೆಗಳಿಗೆ ಹೆಸರು ನೋಂದಾಯಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 45ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಲಘು ಮೋಟಾರ್ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಟೆಕ್ನಿಕಲ್ ವಿಭಾಗದ ಅಗ್ನಿವೀರರ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ನಿಗದಿತ ವಿದ್ಯಾರ್ಥಿಯಲ್ಲಿ ಕನಿಷ್ಠ ಶೇಕಡ 50 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.
ಕ್ಲರ್ಕ್/ ಸ್ಟೋರ್ ಕೀಪರ್/ ಟೆಕ್ನಿಕಲ್ ವಿಭಾಗದ ಅಗ್ನಿವೀರರ ಹುದ್ದೆಗೂ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಠ ಶೇಕಡ 60 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರಬೇಕು. 
ಟ್ರೇಡ್ಸ್ಮನ್ ವಿಭಾಗದಲ್ಲಿ ಅಗ್ನಿವೀರ ಹುದ್ದೆಗಳನ್ನು ಸೇರ ಬಯಸುವ ಅಭ್ಯರ್ಥಿಗಳು ಎಂಟನೇ ತರಗತಿ/ ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಪ್ರತೀ ವಿಷಯದಲ್ಲೂ ಕನಿಷ್ಠ ಶೇಕಡ 33 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
 
ವಯೋಮಿತಿ: 
ಅಗ್ನಿವೀರ ಅಭ್ಯರ್ಥಿಗಳ ವಯಸ್ಸು ಕನಿಷ್ಠ 17 ವರ್ಷ ಆರು ತಿಂಗಳು. ಹಾಗೂ ಗರಿಷ್ಟ 21 ವರ್ಷವಾಗಿರಬೇಕು. ಅಂದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2004ರ ಅಕ್ಟೋಬರ್ 1 ಮತ್ತು 2008ರ ಏಪ್ರಿಲ್ 1ರ ನಡುವೆ ಜನಿಸಿರಬೇಕು.

ದೈಹಿಕ ಅರ್ಹತೆ: 
ಜನರಲ್ ಡ್ಯೂಟಿ ಮತ್ತು ಟ್ರೇಡ್ಸ್ಮನ್ ವಿಭಾಗದಲ್ಲಿನ ಹುದ್ದೆಗಳಿಗೆ ನೋಂದಾಯಿಸುವ ಅಭ್ಯರ್ಥಿಗಳು 166 ಸೆಂಟಿಮೀಟರ್ ಎತ್ತರ, ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು 165cm ಹಾಗೂ ಕ್ಲರ್ಕ್/ ಸ್ಟೋರ್ ಕೀಪರ್/ ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು 162 ಸೆಂಟಿಮೀಟರ್ ಎತ್ತರ ಹೊಂದಿರಬೇಕು. ಈ ಹುದ್ದೆಗಳಿಗೆ ಅಭ್ಯರ್ಥಿಗಳ ಎದೆಯ ಸುತ್ತಳತೆ 77 ಸೆಂಟಿಮೀಟರ್ ಇರಬೇಕು.

ಸೇನಾ ನೇಮಕಾತಿ ಕಚೇರಿ ವ್ಯಾಪ್ತಿ: 
1. ಮಂಗಳೂರು ಸೇನಾ ನೇಮಕಾತಿ ಕಚೇರಿ ವ್ಯಾಪ್ತಿಯಲ್ಲಿ ನಡೆಯುವ ನೇಮಕ ಪ್ರಕ್ರಿಯೆಯಲ್ಲಿ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ,ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದು.
2. ಬೆಳಗಾವಿ ಸೇನಾ ವಲಯ ನೇಮಕಾತಿ ಕಚೇರಿ ವ್ಯಾಪ್ತಿಯಲ್ಲಿ ನಡೆಯುವ ನೇಮಕ ಪ್ರಕ್ರಿಯೆಯಲ್ಲಿ ಬೆಳಗಾವಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು.
3. ಬೆಂಗಳೂರು ನೇಮಕಾತಿ ಕಚೇರಿ ವ್ಯಾಪ್ತಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಅಭ್ಯರ್ಥಿಗಳು ಒಳಪಡುತ್ತಾರೆ.

ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಗಳು 250 ರೂ ಶುಲ್ಕ ಪಾವತಿಸಬೇಕು. ಸೇನೆಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುವಾಗಲೇ ಶುಲ್ಕವನ್ನು ಹೆಚ್.ಡಿ.ಎಫ್.ಸಿ ಪೋರ್ಟಲ್ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ. ಪ್ರವೇಶ ಪರೀಕ್ಷೆ ಮತ್ತು ನೇಮಕ ರಾಲಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ರಾಜ್ಯ, ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಕ್ರೀಡಾಕೂಟಗಳನ್ನು ಪ್ರತಿನಿಧಿಸಿದ್ದರೆ, ಎನ್.ಸಿ.ಸಿ ಪ್ರಮಾಣ ಪತ್ರಗಳನ್ನು ಹೊಂದಿದ್ದರೆ ಅದನ್ನೂ ಆಯ್ಕೆ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ.  ಅಗ್ನಿ ವೀರರಿಗೆ ಜಾರಿಗೊಳಿಸಿದ ಎಲ್ಲಾ ನಿಯಮಾವಳಿಗಳು ಇಲ್ಲಿ ಅನ್ವಯವಾಗುತ್ತದೆ. ನೇಮಕಾತಿಯ ಸಂಪೂರ್ಣ ವಿವರ, ವಿಸ್ತೃತ  ಅಧಿಸೂಚನೆ ಓದಲು ಸೇನೆಯ ವೆಬ್ಸೈಟ್ join IndianArmy.nic.in ಗೆ ಭೇಟಿ ನೀಡಬಹುದಾಗಿದೆ.





Post a Comment

0 Comments