ಜೊಮ್ಯಾಟೊ ಹೆಸರು ಎಲ್ಲರಿಗೂ ಚಿರಪರಿಚಿತ ಅಲ್ವಾ..? ನಗರ ಪ್ರದೇಶಗಳಲ್ಲಿ ವಾಸಿಸುವವರ ಮೊಬೈಲ್ ಅಲ್ಲಿ ಈ ಆ್ಯಪ್ ಇದ್ದೇ ಇರುತ್ತದೆ. ಏನಾದರೂ ತಿನ್ನಬೇಕೆನಿಸಿದರೆ ಜೊಮ್ಯಾಟೊ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳುವ ಜನರ ಸಂಖ್ಯೆಗೇನೂ ಕೊರತೆಯಿಲ್ಲ. ಆದರೆ ಆಹಾರ ಮತ್ತು ಇತರ ದವಸ ಧಾನ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಈ ಜೊಮ್ಯಾಟೊ ಕಂಪನಿ ಹೆಸರು ಬದಲಾಗಲಿದೆಯಂತೆ.
ಜೊಮ್ಯಾಟೊ ಬದಲಿಗೆ ಎಟರ್ನಲ್ ಎಂಬ ಹೊಸ ಹೆಸರಿಡಲು ಕಂಪನಿಯ ಆಡಳಿತ ಮಂಡಳಿಯು ಗುರುವಾರ ಒಪ್ಪಿಗೆ ನೀಡಿದೆ. ಈ ಕಂಪನಿಯ ಷೇರುದಾರರು, ವಾಣಿಜ್ಯ ವ್ಯವಹಾರಗಳ ಸಚಿವಾಲಯ ಮತ್ತು ಇತರ ಶಾಸನಬದ್ಧ ಸಂಸ್ಥೆಗಳ ಅನುಮೋದನೆ ದೊರೆತ ಬಳಿಕ ಎಟರ್ನಲ್ ಹೊಸ ಹೆಸರು ಅಸ್ತಿತ್ವಕ್ಕೆ ಬರಲಿದೆ. ಕಂಪನಿಯ ಹೆಸರು ಬದಲಾದರೂ ಆಪ್ ನಲ್ಲಿ ಮಾತ್ರ ಜೊಮ್ಯಾಟೊ ಎಂಬ ಬ್ರ್ಯಾಂಡ್ ನೇಮ್ ಬಳಸುವುದನ್ನು ಮುಂದವರಿಸಲಾಗುವುದು ಎಂದು ತಿಳಿಸಿದೆ. ಕಂಪೆನಿಯ ವೆಬ್ಸೈಟ್ ಮಾತ್ರ zomato.com ಬದಲಿಗೆ eternal.com ಎಂಬುದಾಗಿ ಬದಲಾಗಲಿದೆ. ಷೇರು ಮಾರುಕಟ್ಟೆಯ ಟಿಕ್ಕರ್ ಕೂಡ ಬದಲಾಗುತ್ತದೆ ಎಂದು ಕಂಪನಿಯ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಿಂದರ್ ಗೋಯಲ್ ಷೇರುದಾರರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಎಟರ್ನಲ್ ಅಡಿಯಲ್ಲಿ ಜೊಮ್ಯಾಟೊ, ಬ್ಲಿಂಕಿಟ್, ಡಿಸ್ಟ್ರಿಕ್ಟ್ ಮತ್ತು ಹೈಪರ್ ಪ್ಯೂರ್ ಎಂಬ ನಾಲ್ಕು ಪ್ರಮುಖ ವ್ಯವಹಾರಗಳು ಕಾರ್ಯನಿರ್ವಹಿಸಲಿವೆ. ಬ್ಲಿಂಕಿಟ್ ಖರೀದಿಸಿದಾಗಲೇ ಆಂತರಿಕವಾಗಿ ಎಟರ್ನಲ್ ಎಂಬ ಹೆಸರನ್ನು ಬಳಸಲು ಆರಂಭಿಸಲಾಗಿದ್ದು ಕಂಪನಿ ಮತ್ತು ಬ್ರ್ಯಾಂಡ್/ಆ್ಯಪ್ ನಡುವೆ ವ್ಯತ್ಯಾಸ ಕಂಡು ಹಿಡಿಯುವುದು ಸುಲಭವಾಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೋಯಲ್ ಅವರು ವಿವರಿಸಿದ್ದಾರೆ.
0 Comments