"ಆತ್ಮರಕ್ಷಿತ್ ಭಾರತ”ಕ್ಕಾಗಿ ಅತ್ಯಾಧುನಿಕ ಡ್ರೋನ್ ನಿರ್ಮಿಸಿದ ಪುತ್ತೂರಿನ ಕೋನಾರ್ಕ್ ರೈ

ಇತ್ತೀಚಿನ ದಿನಗಳಲ್ಲಿ ಆತ್ಮ ನಿರ್ಭರ ಭಾರತ ಘೋಷಣೆಯಡಿ ಭಾರತೀಯ ನೆಲದಲ್ಲಿ ಉತ್ಪಾದನೆಯಾಗುತ್ತಿರುವ ವಸ್ತುಗಳ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯುದ್ಧ ವಿಮಾನಗಳು, ಶಸ್ತ್ರಾಸ್ತ್ರಗಳು ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಉತ್ಪಾದನೆ ಸ್ವದೇಶಿ ಆಗುತ್ತಿರುವುದು ಹೆಮ್ಮೆಯ ವಿಷಯ. ಇದಕ್ಕೆ ಸಂಬಂಧಿಸಿದಂತೆ ಐಐಟಿ-ಮದ್ರಾಸ್ ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಶನ್ನ ಸ್ಟಾರ್ಟ್-ಅಪ್ ಉದ್ಯಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರುದ್ರಮ್ ಎಂದೇ ಖ್ಯಾತಿ ಪಡೆದಿರುವ ರುದ್ರಮ್ ಡೈನಾಮಿಕ್ಸ್ ಪ್ರೈವೇಟ್ ಲಿಮಿಟೆಡ್ (ರುದ್ರಮ್) ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಡ್ರೋನ್ ಉತ್ಪಾದನೆಯಲ್ಲಿ ಹೆಸರು ಮಾಡುತ್ತಿದೆ. ರಕ್ಷಣಾ ಸಂಸ್ಥೆಗಳಿಗೆ ಅತ್ಯಾಧುನಿಕ ಉಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿ, ಫ್ಯೂಚರಿಸ್ಟಿಕ್ ತಂತ್ರಜ್ಞಾನಗಳು, ಭಾರತೀಯ ಸೇನಾ ವಿಭಾಗಕ್ಕೆ ಉಪಯೋಗವಾಗುವಂತಹ ಉಪಕರಣಗಳ ತಯಾರಿಕೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಮುನ್ನಡೆಯುತ್ತಿದೆ. 


ಈ ರುದ್ರಮ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ 9 ಎಂಎಂ ಎಎಸ್ಎಂಐ(ಅಸ್ಮಿ) ಗನ್ ಅಳವಡಿಸಬಹುದಾದ, ಒಬ್ಬನೇ ವ್ಯಕ್ತಿ ಸಾಗಾಟ ಮಾಡಬಲ್ಲಂತಹ (ಒನ್ ಮ್ಯಾನ್ ಪೋರ್ಟೇಬಲ್) ಶಸ್ತ್ರ ಸಜ್ಜಿತ ಡ್ರೋನ್ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಇಂತಹ ಹೆಮ್ಮೆಯ ಸಾಧನೆಗೆ ಮೈಲಿಗಲ್ಲಾಗಿ ಸ್ಥಿರತೆ, ನಿಖರತೆಯ ವಿಶಿಷ್ಟವಾದ ಅತ್ಯಾಧುನಿಕ ಡ್ರೋನ್ ಅನ್ನು ತಯಾರಿಸಿದವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೋನಾರ್ಕ್ ರೈ..!!

*ರುದ್ರಮ್ ಡ್ರೋನ್ ರೂವಾರಿ ಕೋನಾರ್ಕ್ ರೈ*

ಕೋನಾರ್ಕ್ ರೈ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ತಿಂಗಳಾಡಿ ಪ್ರದೇಶದವರು. ಇವರು ತುಳುನಾಡಿನ ಪ್ರತಿಷ್ಠಿತ ‘ಕ್ಯಾಂಪ್ಕೋ’ ಕಂಪನಿಯ ಆಡಳಿತ ನಿರ್ದೇಶಕರಾಗಿದ್ದ ಕೆ ಪ್ರಮೋದ್ ಕುಮಾರ್ ರೈ ಮತ್ತು ಶೋಭಾ ರೈ ದಂಪತಿಯ ಪುತ್ರ. ಇವರು ಬೆಂಗಳೂರಿನ ಬಿಷಪ್ ಕಾಟನ್ಸ್ ಬಾಲಕರ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿ ನಂತರ ಶ್ರೀ ಸತ್ಯಸಾಯಿ ಲೋಕಸೇವಾ ಶಾಲೆ ಅಳಿಕೆ, ಬೆಂಗಳೂರಿನ ಸೈಂಟ್ ವಿಕ್ಟರ್ ಶಾಲೆಯಲ್ಲಿ ಶಿಕ್ಷಣ ಪಡೆದು ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ. 5 ವರ್ಷಗಳ ಕಾಲ ವಿಶ್ವಸಂಸ್ಥೆಯಲ್ಲಿ ರಾಜಕೀಯ ಮತ್ತು ನೀತಿ ವಿಶ್ಲೇಷಕರಾಗಿ ಕೆಲಸ ಮಾಡಿದ್ದಾರೆ. ಕಾಲೇಜಿನಲ್ಲಿ ಇವರು ಕಲಾವಿಭಾಗದ ವಿದ್ಯಾರ್ಥಿಯಾಗಿದ್ದರೂ ಪ್ರತಿಷ್ಠಿತ ರುದ್ರಮ್ ಡೈನಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ “ಆತ್ಮ ರಕ್ಷಿತ್ ಭಾರತ್”ಗಾಗಿ ಶಸ್ತ್ರಸಜ್ಜಿತ ಡ್ರೋನ್ ತಯಾರಿಸಿ ಸೇನಾ ಕಾರ್ಯಕ್ಕೆ ಬಳಸಲು ಕಾರ್ಯತತ್ಪರನಾಗಿದ್ದೇನೆ ಎನ್ನುತ್ತಾರೆ ರುದ್ರಮ್ ಡೈನಾಮಿಕ್ಸ್ ಕಂಪನಿಯ ಎಂ.ಡಿ ಕೋನಾರ್ಕ್ ರೈ.

“ಮೇಕ್ ಇನ್ ಇಂಡಿಯಾ” ಕಾರ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಈ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ರಕ್ಷಣಾ ಕಾರ್ಯದಲ್ಲಿ ಡ್ರೋನ್ ಮೂಲಕ ಕೇವಲ ಶಸ್ತ್ರಾಸ್ತ್ರಗಳ ಸಾಗಾಟ ನಡೆಸಲಾಗುತ್ತದೆ. ಆದರೆ ರುದ್ರಮ್ ಕಂಪನಿ ಅಭಿವೃದ್ಧಿಪಡಿಸಿರುವ ಈ ಆಧುನಿಕ ಡ್ರೋನ್ ಮೂಲಕ ಅತ್ಯಧಿಕ ಸಾಮರ್ಥ್ಯದ 9 ಎಂಎಂ ‘ಅಸ್ಮಿ’ ಮೆಷಿನ್ ಗನ್ ಅಳವಡಿಸಬಹುದಾಗಿದೆ. ಇದು ನಿಖರ ಗುರಿಯೊಂದಿಗೆ ಸ್ಥಿರತೆಯನ್ನು ಕಾಯ್ದುಕೊಳ್ಳುವಂತಹ ವಿಶೇಷತೆಯನ್ನು ಹೊಂದಿದೆ. ಇದರಿಂದ ಸೈನಿಕರ ಸುರಕ್ಷತೆಯನ್ನು ಹೆಚ್ಚಿಸಬಹುದಾಗಿದೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಬಹುದಾಗಿದೆ. ಅಷ್ಟೇ ಅಲ್ಲದೆ ಈ ಶಸ್ತ್ರಸಜ್ಜಿತ ಡ್ರೋನ್ ಅನ್ನು ಭಯೋತ್ಪಾದನೆ ನಿಗ್ರಹ ಮತ್ತು ನಕ್ಸಲ್ ನಿಗ್ರಹ ಕಾರ್ಯಚರಣೆಗಳನ್ನು ಸಮರ್ಥವಾಗಿ ಎದುರಿಸಲು ಪೂರಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ.

*ಅಧಿಕ ಸ್ಥಿರತೆಯುಳ್ಳ ಡ್ರೋನ್*
ರುದ್ರಮ್ ಕಂಪನಿಯ ಸುಧಾರಿತ ಡ್ರೋನ್ ಪ್ಲಾಟ್ ಫಾರ್ಮ್ ಮತ್ತು ವಾಯುಗಾಮಿ ಫೈರಿಂಗ್ ಸಮಯದಲ್ಲಿ ಗರಿಷ್ಠ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಆರೋಹಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಕಳೆದ ಜನವರಿ 26 ಮತ್ತು 27ನೇ ತಾರೀಕಿನಂದು ನಡೆಸಲಾದ ಪರೀಕ್ಷಾರ್ಥ ಪ್ರದರ್ಶನದಲ್ಲಿ ಈ ಡ್ರೋನ್ ಪ್ಲಾಟ್ ಫಾರ್ಮ್ ನಲ್ಲಿ ಅಸ್ತಿ ಮಷಿನ್ ಗನ್ ತಡೆರಹಿತ ಸ್ಥಿರತೆಯೊಂದಿಗೆ ಗುಂಡು ಹಾರಾಟ ಪ್ರದರ್ಶಿಸಿತು. ಈ ಡ್ರೋನ್ ಹಾರಾಟದಲ್ಲಿರುವಾಗಲೇ ನಿಖರವಾದ ಗುರಿ ನಿಶ್ಚಿತಾರ್ಥವನ್ನು ಸಾಧಿಸಿತು. ಅಷ್ಟೇ ಅಲ್ಲದೆ ಗಾಳಿಯಲ್ಲಿ ನೇರವಾದ ಗುರಿಯನ್ನು ತಲುಪಿ ಯಶಸ್ವಿ ಪ್ರದರ್ಶನವನ್ನು ನೀಡಿದೆ. ಜೊತೆಗೆ ನೆಲದ ಮೇಲೆ ಮತ್ತು ಗಾಳಿಯ ಮಧ್ಯದಲ್ಲಿ ಸ್ಥಿರವಾದ ಹಾರಾಟದ ಉದ್ದಕ್ಕೂ ಹೆಚ್ಚಿನ ಮಟ್ಟದ ಸ್ಥಿರತೆ ಮತ್ತು ನಿಖರತೆಯನ್ನು ನಿರ್ವಹಿಸಿತು. ಸುಮಾರು 45 ರಿಂದ 60 ನಿಮಿಷಗಳ ಕಾಲ 15 ರಿಂದ 30 ಕಿಲೋಮೀಟರ್ ದೂರದವರೆಗೆ ಹಾರಾಟ ನಡೆಸುವ ಮೂಲಕ ಈ ಡ್ರೋನ್ ತನ್ನ ವಿಶಿಷ್ಟ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯನ್ನು ದೃಢಪಡಿಸಿತು.

ಕೋನಾರ್ಕ್ ರೈ ಅವರು ಅಭಿವೃದ್ಧಿಪಡಿಸಿರುವ ರುದ್ರಮ್ ಶಸ್ತ್ರ ಸಜ್ಜಿತ ಡ್ರೋನ್ ಅನ್ನು ವಿವಿಧ ಯುದ್ಧ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಎಕೆ-203, ಎಸ್ಐಜಿ 716 ಮೊದಲಾದ ಇತರೆ ದೀರ್ಘ ಮತ್ತು ಅತ್ಯಧಿಕ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಅಳವಡಿಸಲು ಅಭಿವೃದ್ಧಿಪಡಿಸಲಾಗುತ್ತಿದೆ. ರುದ್ರಮ್ ನ ಒನ್ ಮ್ಯಾನ್ ಪೋರ್ಟೆಬಲ್ ಶಸ್ತ್ರಸಜ್ಜಿತ ಡ್ರೋನ್ ಶಸ್ತ್ರಸಜ್ಜಿತ ಡ್ರೋನ್ಗಳ ವಿಭಾಗದಲ್ಲಿ ನಾವಿನ್ಯತೆಯೊಂದಿಗೆ ಮುಂಚೂಣಿಯಲ್ಲಿದೆ. ಆತ್ಮ ನಿರ್ಭರ ಭಾರತದೊಂದಿಗೆ ಆತ್ಮ ರಕ್ಷಿತ್ ಭಾರತಕ್ಕಾಗಿ ಈ ಡ್ರೋನ್ ದೇಶಿಯ ರಕ್ಷಣಾ ತಂತ್ರಜ್ಞಾನದ ಗಡಿಗಳನ್ನು ದಾಟಿ ಭಾರತದ ಬದ್ಧತೆಯನ್ನು ಬಲಪಡಿಸಲು ಮತ್ತಷ್ಟು ಸಹಕಾರಿಯಾಗಲಿದೆ. ಈ ಡ್ರೋನ್ ಸುಮಾರು 10 ಕೆಜಿಯಷ್ಟು ಭಾರವಿದ್ದು ಸೈನಿಕರು ಇದನ್ನು ಹಿಡಿದುಕೊಂಡು ಕಡಿದಾದ ಬೆಟ್ಟಗುಡ್ಡ ಪರ್ವತ ಶ್ರೇಣಿಗಳಲ್ಲಿ ಸಾಗಲು ಸುಲಭ ಸಾಧ್ಯವಾಗಲಿದೆ. ರುದ್ರಮ್ ಕಂಪನಿ ಈ ವಿಶಿಷ್ಟ ಡ್ರೋನ್ ಅನ್ನು ತಯಾರಿಸಿ ಭಾರತೀಯ ಸೇನೆಗೆ ಪೂರೈಸಲಿದೆ.




Post a Comment

0 Comments