ಕೆರೆ ಹೊಂಡಗಳ ಸ್ವಚ್ಛತೆಗಾಗಿ “ಜಲ ಡ್ರೋನ್” ಆವಿಷ್ಕಾರ



ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್, ಕಸ ಕಡ್ಡಿ ಸೇರಿಕೊಂಡು ಎಲ್ಲೆಡೆ ಪರಿಸರ ಮಾಲಿನ್ಯವಾಗುತ್ತಿದೆ. ಎಷ್ಟೇ ಸ್ವಚ್ಛತೆಯನ್ನು ಕಾಪಾಡಿಕೊಂಡರೂ ಕೆಲವು ಬುದ್ಧಿಗೇಡಿ ಜನರು ಪ್ಲಾಸ್ಟಿಕ್ ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರವಾಸ ಅಥವಾ ಮೋಜುಮಸ್ತಿಯ ಹೆಸರಿನಲ್ಲಿ ಪ್ರವಾಸಿಗರು ಕೆರೆ, ಬಾವಿ, ಸರೋವರಗಳನ್ನು ಕಸಮಯಗೊಳಿಸುತ್ತಿದ್ದಾರೆ. ಈ ಕೆರೆ, ಬಾವಿ, ಹೊಂಡಗಳಲ್ಲಿ ತುಂಬಿಕೊಂಡಿರುವ ಕಸ, ತ್ಯಾಜ್ಯಗಳನ್ನು ತೆಗೆದು ಹೊರಹಾಕಲು “ಜಲ ಡ್ರೋನ್ ಅಥವಾ ಎಕೋ ಫ್ಲೋಟರ್” ಎಂಬ ಹೊಸ ಆವಿಷ್ಕಾರವೂ ಇನ್ನೆರಡು ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರಲಿದೆ. 
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಫ್ರೆಂಚುರೈ ವಿಭಾಗದಲ್ಲಿ ಈ ಜಲ ಡ್ರೋನ್ ಪ್ರದರ್ಶನಕ್ಕೆ ಇದೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ, ಚೆನ್ನೈ ಮೂಲದ ಸ್ಕ್ರಾಪಿಫೈ ಎಕೋಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ನವೋದ್ಯಮವು ಅಭಿವೃದ್ಧಿಪಡಿಸಿರುವ ಈ ಹೊಸ ತಂತ್ರಜ್ಞಾನದ ಉಪಕರಣವು ಪರೀಕ್ಷಾರ್ಥ ಪ್ರಯೋಗದಲ್ಲಿದೆ.

ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲಾಗಿರುವ ಈ “ಜಲ ಡ್ರೋನ್” ಸ್ವಯಂ ಚಾಲಿತ ಯಂತ್ರವಾಗಿದೆ. ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಬ್ಯಾಟರಿ ಚಾಲಿತ ಈ ಉಪಕರಣವು ಕೆರೆ, ಬಾವಿ, ಹೊಂಡಗಳಲ್ಲಿ ಸುತ್ತು ಹಾಕಿದರೆ, ಕೇವಲ 15 ನಿಮಿಷಗಳಲ್ಲಿ 40 ಕೆಜಿ ಯಷ್ಟು ತ್ಯಾಜ್ಯಗಳನ್ನು ಸಾಗಿಸುವಷ್ಟು ವೇಗ ಮತ್ತು ಶಕ್ತಿಯನ್ನು ಹೊಂದಿದೆ. ಈ ಉಪಕರಣವು ನಗರ-ಪಟ್ಟಣ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ನಿರ್ಮಿಸಿರುವ ಕುಡಿಯುವ ನೀರು ಸಂಗ್ರಹ ಶುದ್ಧೀಕರಣ ಘಟಕಗಳು ಸೇರಿ ಉದ್ಯಮ, ಕೃಷಿ ಮತ್ತು ಇತರ ಕ್ಷೇತ್ರಗಳಲ್ಲಿ ಬಳಕೆಗೆ ಕಟ್ಟಿದ ಕಿರು ಜಲಗಾರಗಳ ಸ್ವಚ್ಛತೆಗೆ ಬಹು ಉಪಯುಕ್ತವಾಗಿವೆ.

ಈ ಜಲ ಡ್ರೋನ್ ಪರೀಕ್ಷಾರ್ಥ ಪ್ರಯೋಗದಲ್ಲಿ ತೇರ್ಗಡೆಯಾದ ಬಳಿಕ ಇದರ ಬೆಲೆ ಎಷ್ಟು ಎಂಬುದು ನಿಗದಿಯಾಗಲಿದೆ. ಈಗಾಗಲೇ ತಮಿಳುನಾಡಿನ ಎರಡು ಮಹಾನಗರ ಪಾಲಿಕೆಗಳಿಗೆ ಸಂಪರ್ಕಿಸಿದ್ದು ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ ಎಂದು ಸ್ಕ್ರಾಪಿಫೈ ಎಕೋಟೆಕ್ ಕಂಪನಿ ಪ್ರತಿನಿಧಿ ಹೇಳಿದ್ದಾರೆ.


Post a Comment

0 Comments