ಬೆಂಗಳೂರು ರೈಲು ನಿಗಮವು ನಮ್ಮ ಮೆಟ್ರೋ ರೈಲಿನ ಟಿಕೆಟ್ ದರವನ್ನು ಏರಿಸಿ ಆದೇಶ ಹೊರಡಿಸಿದೆ. ಪರಿಷ್ಕೃತ ದರವು ಇಂದಿನಿಂದಲೇ ಜಾರಿಯಾಗಿದ್ದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ.
ಫೆಬ್ರವರಿ 1.ರಂದೇ ಬಿ.ಎಂ.ಆರ್.ಸಿ.ಎಲ್ ದರ ಏರಿಕೆಯ ಬಗ್ಗೆ ಆದೇಶ ಹೊರಡಿಸಿತ್ತು. ಕಿಲೋಮೀಟರ್ ಲೆಕ್ಕದಲ್ಲಿ ಮೆಟ್ರೋ ದರವನ್ನು ಏರಿಕೆ ಮಾಡಿದ್ದು ಕನಿಷ್ಠ ದರವನ್ನು 10 ರೂಪಾಯಿನಲ್ಲೇ ಉಳಿಸಿಕೊಳ್ಳಲಾಗಿದ್ದು ಗರಿಷ್ಠ ದರವನ್ನು 90 ರೂಪಾಯಿಗೆ ಹೆಚ್ಚಿಸಲಾಗಿದೆ.
8 ವರ್ಷಗಳ ಬಳಿಕ ಶೇ.50ಷ್ಟು ಮೆಟ್ರೋ ದರ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿದೆ. ಆರಂಭದ 2 ಕಿ.ಮೀ ದೂರ ಪ್ರಯಾಣಕ್ಕೆ ಮೊದಲಿನ 10 ರೂ ದರವನ್ನೇ ಮುಂದುವರಿಸಲಾಗಿದೆ. ಎರಡನೇ ಹಂತಕ್ಕೆ ಇದ್ದ 15ರೂ. ಅನ್ನು 20 ರೂಪಾಯಿಗೆ ಏರಿಸಲಾಗಿದೆ. ನಂತರದ 20 ಕಿಲೋ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಇದ್ದ 60 ರೂಪಾಯಿಗಳ ಗರಿಷ್ಠ ಪ್ರಯಾಣ ದರವನ್ನು 90ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಪ್ರವಾಸಿ ಕಾರ್ಡುಗಳ ದರವನ್ನು ಪರಿಷ್ಕರಿಸಲಾಗಿದ್ದು ಒಂದು ದಿನದ ಕಾರ್ಡಿಗೆ 300ರೂ, ಮೂರು ದಿನಗಳ ಕಾರ್ಡಿಗೆ 600ರೂ. ಹಾಗೂ ಐದು ದಿನಗಳ ಕಾರ್ಡಿಗೆ ರೂ.800 ನಿಗದಿಪಡಿಸಲಾಗಿದೆ.
25 ರಿಂದ 90 ಜನರ ಗುಂಪಿಗೆ ಶೇಕಡ 15ರಷ್ಟು, 100ರಿಂದ 1000 ಜನರ ಗುಂಪಿಗೆ ಶೇಕಡ 20ರಷ್ಟು ಹಾಗೂ ಸಾವಿರಕ್ಕೂ ಮೇಲ್ಪಟ್ಟ ಜನರ ಗುಂಪಿಗೆ ಶೇಕಡ 25ರಷ್ಟು ರಿಯಾಯಿತಿ ನಿಗದಿ ಮಾಡಲಾಗಿದೆ.
ಈ ಹಿಂದೆ ಕ್ಯೂಆರ್ ಕೋಡ್ ಬಳಕೆದಾರರಿಗೆ ಇದ್ದ ಶೇಕಡ ಐದು ರಿಯಾಯಿತಿ ರದ್ದುಪಡಿಸಲಾಗಿದ್ದು ಇನ್ನು ಮುಂದೆ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮಾತ್ರ 5% ರಿಯಾಯಿತಿ ಸಿಗಲಿದೆ. ಸ್ಮಾರ್ಟ್ ಕಾರ್ಡ್ಗಳಿಗೆ ಪೀಕ್ ಅವರ್ ಅಲ್ಲಿ ಶೇ.5 ರಿಯಾಯಿತಿ ದರ ಇರಲಿದೆ. ಬೆಳಿಗ್ಗೆ 8 ರಿಂದ 12 ಗಂಟೆ- ಸಂಜೆ 4 ರಿಂದ 9 ಗಂಟೆಯವರೆಗೆ ಪೀಕ್ ಅವರ್ ಎಂದು ನಿಗದಿ ಮಾಡಲಾಗಿದೆ. ಆಫ್ ಪೀಕ್ ಅವರ್ ಅಲ್ಲಿ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇ.10 ರಿಯಾಯಿತಿ ಇರಲಿದೆ. ಬೆಳಿಗ್ಗೆ 5ರಿಂದ 8 ಗಂಟೆ, ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆ, ರಾತ್ರಿ 9 ಗಂಟೆಯವರೆಗೆ ಆಫ್ ಪೀಕ್ ಅವರ್ ಎಂದು ನಿಗದಿ ಮಾಡಲಾಗಿದೆ.
ನಮ್ಮ ಮೆಟ್ರೋದಲ್ಲಿ ಎಲ್ಲಾ ಭಾನುವಾರ ಮತ್ತು ರಜಾ ದಿನಗಳಲ್ಲಿ ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್ ಮೇಲೆ ಶೇ.10ರಷ್ಟು ರಿಯಾಯಿತಿ ಸಿಗಲಿದೆ.
0 Comments