ಗೋವಾದಲ್ಲಿ 14–16 ನೇ ಶತಮಾನದ ದೇವಾಲಯದ ಅವಶೇಷ ಪತ್ತೆ

ಮಣ್ಣಿನಡಿ ಅಡಗಿದ್ದ ಶತಮಾನಗಳ ಇತಿಹಾಸ ಮತ್ತೆ ಬೆಳಕಿಗೆ!

ಗೋವಾದ ದಿವಾರ್ ದ್ವೀಪದಲ್ಲಿರುವ ಶ್ರೀ ಸಪ್ತಕೋಟೇಶ್ವರ ದೇವಾಲಯದ ಹಳೆಯ ಸ್ಥಳದಲ್ಲಿ ನಡೆಯುತ್ತಿದ್ದ ಪುನಃಸ್ಥಾಪನಾ ಕಾರ್ಯದ ವೇಳೆ 14ರಿಂದ 16ನೇ ಶತಮಾನಕ್ಕೆ ಸೇರಿದ ಪುರಾತನ ಕಲ್ಲಿನ ಅವಶೇಷಗಳು ಪತ್ತೆಯಾಗಿವೆ. ಈ ಕುರಿತು ವರದಿ ಸೆಪ್ಟೆಂಬರ್ 4, 2026ರಂದು ಪ್ರಕಟವಾಗಿದೆ. 

ಅವಶೇಷಗಳಲ್ಲಿ ದೇವಾಲಯದ ಬಾಗಿಲುಗಳ ಮೇಲ್ಭಾಗದಲ್ಲಿ ಸಾಮಾನ್ಯವಾಗಿ ಕಾಣುವ ‘ಕೀರ್ತಿಮುಖ’ದ ಕೆತ್ತನೆ, ದೇವಾಲಯದ ಕಂಬದ ಅಲಂಕೃತ ಮೇಲ್ಭಾಗ ಹಾಗೂ ವಿಗ್ರಹಗಳನ್ನು ಇರಿಸಲು ಬಳಸುತ್ತಿದ್ದ ದೇವಕೋಷ್ಟದ ಭಾಗಗಳು ಸೇರಿವೆ. 

ಈ ಅವಶೇಷಗಳು ಕೋಟಿ ತೀರ್ಥದಿಂದ ಮಾಧವಾಚಿ ತಳ್ಳಿ ಪ್ರದೇಶದತ್ತ ಸಾಗುವ ಹಳೆಯ ಮಾರ್ಗದ ಬಳಿ ಪತ್ತೆಯಾಗಿವೆ. ಇವುಗಳ ಆಧಾರದ ಮೇಲೆ ಈ ಪ್ರದೇಶದಲ್ಲಿ ಹಿಂದೆ ಒಂದು ದೊಡ್ಡ ದೇವಾಲಯ ಸಂಕೀರ್ಣ ಮತ್ತು ಪವಿತ್ರ ಮಾರ್ಗವಿದ್ದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಕಲ್ಲಿನ ವಿನ್ಯಾಸಗಳು ಮತ್ತು ದೇವಾಲಯದ ವಿವಿಧ ಶೈಲಿಯ ಕೆತ್ತನೆಗಳು ಇಲ್ಲಿ ವಿವಿಧ ಕಾಲಘಟ್ಟಗಳಲ್ಲಿ ದೇವಾಲಯದ ಪುನರ್‌ನಿರ್ಮಾಣ ನಡೆದಿರುವ ಸಾಧ್ಯತೆಯನ್ನು ಸೂಚಿಸುತ್ತವೆ. ಹೆಚ್ಚಿನ ವೈಜ್ಞಾನಿಕ ಮತ್ತು ಪುರಾತತ್ವ ಅಧ್ಯಯನದ ಬಳಿಕ ಅವಶೇಷಗಳ ನಿಖರ ಕಾಲಮಾನ ಹಾಗೂ ಮಹತ್ವ ಇನ್ನಷ್ಟು ಸ್ಪಷ್ಟವಾಗಲಿದೆ. 

ಈ ಪತ್ತೆ ಗೋವಾದ ಪ್ರಾಚೀನ ದೇವಾಲಯ ಪರಂಪರೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಇತಿಹಾಸಕ್ಕೆ ಮಹತ್ವದ ಸೇರ್ಪಡೆಯಾಗಿದೆ. ಪತ್ತೆಯಾದ ಅವಶೇಷಗಳನ್ನು ಗೋಕೂಲಾಷ್ಟಮಿ ಸಂದರ್ಭದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡುವ ಕಾರ್ಯಕ್ರಮವೂ ಆಯೋಜಿಸಲಾಗಿದೆ. 

ಶತಮಾನಗಳ ಹಿಂದೆ ಮೌನವಾಗಿದ್ದ ಕಲ್ಲುಗಳು… ಇಂದು ಗೋವಾದ ಇತಿಹಾಸದ ಹೊಸ ಕಥೆಯನ್ನು ಹೇಳುತ್ತಿವೆ!



Post a Comment

0 Comments