ಅಡಿಕೆ ತಟ್ಟೆಯೂ ಕ್ಯಾನ್ಸರ್ ಕಾರಕವೆಂದ ಅಮೆರಿಕಾದ ಎಫ್ ಡಿ ಎ: ಅಡಿಕೆ ತಟ್ಟೆ ಆಮದಿಗೆ ಅಮೆರಿಕ ನಿರ್ಬಂಧ..!!

ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ಆರೋಪದ ನಡುವೆ ಇದೀಗ ಅಮೆರಿಕಾದ ಎಫ್ ಡಿ ಎ/ ಯುಎಸ್ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಇದೀಗ ಅಡಿಕೆ ಹಾಳೆಯಿಂದ ತಯಾರಿಸಲಾಗುವಂತಹ ತಟ್ಟೆಯಲ್ಲೂ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ಸ್ಪೋಟಕ ಮಾಹಿತಿಯನ್ನು ಹೊರಹಾಕಿದೆ.
ಅಡಿಕೆ ಹಾಳೆಗಳಿಂದ ಆಹಾರ ಸೇವನೆಗಾಗಿ ತಯಾರಿಸಲಾಗುವಂತಹ ತಟ್ಟೆಯಲ್ಲಿ ಆಹಾರ ಸೇವನೆ ಮಾಡಿದರೆ ಕ್ಯಾನ್ಸರ್ ಬರುತ್ತದೆ ಎಂದು ಎಫ್ ಡಿ ಎ ಹೇಳಿದೆ. ಈ ಕಾರಣದಿಂದಾಗಿ ಅಡಿಕೆ ಹಾಳೆ ತಟ್ಟೆಯ ಆಮದನ್ನು ನಿರ್ಬಂಧಿಸಲು ಅಮೆರಿಕ ಸರಕಾರಕ್ಕೆ ಸೂಚನೆಯನ್ನು ನೀಡಿದೆ. ಒಂದು ವೇಳೆ ಅಡಿಕೆ ತಟ್ಟೆ ಆಮದು ಮಾಡಿಕೊಂಡಲ್ಲಿ ಅದನ್ನು  ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಅಡಿಕೆ ಹಾಳೆ ತಟ್ಟೆಯ ಬೃಹತ್ ತಯಾರಿಕಾ ರಾಷ್ಟ್ರವಾಗಿರುವ ಭಾರತಕ್ಕೆ ಇದು ಬಹುದೊಡ್ಡ ಹೊಡೆತವಾಗಿದೆ. 

ಅಮೇರಕಾದ ಎಫ್ ಡಿ ಎ ವಿಭಾಗದ ಸಂಶೋಧಕರ ತಂಡವು ಕಳೆದ ನಾಲ್ಕು ಐದು ವರ್ಷಗಳಿಂದ ಅಡಿಕೆ ಹಾಳೆ ತಟ್ಟೆಯ ಕುರಿತಾಗಿ ಸಂಶೋಧನೆಯನ್ನು ನಡೆಸುತ್ತಿದೆಯಂತೆ. ಇದೀಗ ಫಲಿತಾಂಶ ಲಭ್ಯವಾಗಿದ್ದು ಅಡಿಕೆ ಹಾಳೆ ತಟ್ಟೆಯಲ್ಲಿ ಆರೋಗ್ಯಕ್ಕೆ ಹಾನಿಯನ್ನು ತರುವಂತಹ ಅಂಶಗಳು ಕಂಡು ಬಂದಿವೆ ಎಂದು ಹೇಳಿದೆ. ಇವರ ಪ್ರಕಾರ ಅಡಿಕೆ ಹಾಳೆ ತಟ್ಟೆಯಲ್ಲಿ ಅಲ್ಕಲಾಯ್ಡ್ಸ್ ಎಂಬ ರಾಸಾಯನಿಕ ಅಂಶಗಳು ಇದ್ದು ಅವುಗಳ ಪ್ರಭೇದಗಳಾದ ಅರೆ ಕೊಲೈನ್, ಅರೆ ಕಡೈನ್, ಗುವಾ ಕೊಲೈನ್ ಮತ್ತು ಗುವ ಸೈನ್ ಎಂಬ ರಾಸಾಯನಿಕ ಅಂಶಗಳು ಇವೆ. ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆ ಅಥವಾ ಬೌಲ್, ಕಪ್ಗೆ ಬಿಸಿಯಾದ ಆಹಾರ ಪದಾರ್ಥಗಳನ್ನು ಹಾಕಿದಾಗ ಅರೆ ಕೊಲೈನ್ ರಾಸಾಯನಿಕ ಅಂಶವು ಬಿಡುಗಡೆಯಾಗುತ್ತದೆ. ಈ ಅಂಶ ಮನುಷ್ಯನ ದೇಹದೊಳಗೆ ಸೇರುವುದರಿಂದ ಕ್ಯಾನ್ಸರ್ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ ಎಂದು ಎಫ್.ಡಿ.ಎ ಹೇಳಿರುವುದರಿಂದ ಅಮೆರಿಕದಲ್ಲಿ ಹಾಳೆ ತಟ್ಟೆ ಆಮದನ್ನು ನಿಷೇಧಿಸಲಾಗಿದೆ. 

ಭಾರತದಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿನ ಈ ಅಡಿಕೆ ಬೆಳೆಯನ್ನು ಬೆಳೆದು ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಾಗೆಯೇ ಅಡಿಕೆ ಹಾಳೆಯಿಂದ ತಟ್ಟೆ, ಕಪ್ಪು ಬೌಲ್ ಸೇರಿದಂತೆ ಉಪಯುಕ್ತ ವಸ್ತುಗಳ ತಯಾರಿಕೆಯಲ್ಲಿ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಉದ್ಯಮಿಗಳು ಅಗ್ರಸ್ಥಾನದಲ್ಲಿದ್ದಾರೆ. ಇವುಗಳ ತಯಾರಿಕೆಗಾಗಿ ನೂರಾರು ಘಟಕಗಳನ್ನು ಆರಂಭಿಸಿ ಉದ್ಯಮಿಗಳಾಗಿ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಹಾಳೆ ತಟ್ಟೆಗಳು ಪ್ಲಾಸ್ಟಿಕ್ ತಟ್ಟೆಗಳಿಗೆ ಪರ್ಯಾಯವಾಗಿ ಬಳಸುವ ಉತ್ತಮ ಪರಿಸರ ಸ್ನೇಹಿ ವಸ್ತುವಾಗಿದೆ. ಇವುಗಳನ್ನು ಎಸೆದರೆ ಮಣ್ಣಿನಲ್ಲಿ ಕೆಲವೇ ದಿನಗಳಲ್ಲಿ ಬೆರೆತು ಗೊಬ್ಬರವಾಗಿ ಹೋಗುವುದರಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಅಡಿಕೆ ಹಾಳೆಗಳು ಮಳೆಯಲ್ಲಿ ನೆನೆಯುವುದರಿಂದ ಅವುಗಳಲ್ಲಿ ಫಂಗಸ್ ಇರುತ್ತವೆ. ಇವು ಮನುಷ್ಯನ ಆರೋಗ್ಯದಲ್ಲಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಆಪಸ್ವರಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದುದರಿಂದ ಹಾಳೆ ತಟ್ಟೆ ತಯಾರಿಸುವ ಮೊದಲು ಅವುಗಳಲ್ಲಿನ ಫಂಗಸ್ ಅನ್ನು ತೆಗೆದು ತಟ್ಟೆ ತಯಾರಿಸುವ ವಿಧಾನವನ್ನು ಅಭಿವೃದ್ಧಿಪಡಿಸಲಾಗಿತ್ತು. 

ಯುರೋಪಿಯನ್ ರಾಷ್ಟ್ರಗಳಿಗೆ ಅಡಿಕೆ ಹಾಳೆ ತಟ್ಟೆ ಪೂರೈಸುವ ರಾಷ್ಟ್ರಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಪ್ರತಿ ವರ್ಷವೂ ಸುಮಾರು 500 ಮಿಲಿಯನ್ ಡಾಲರ್ ನಷ್ಟು ವ್ಯವಹಾರ ನಡೆಯುತ್ತದೆ ಎನ್ನಲಾಗುತ್ತದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಮತ್ತು ಜರ್ಮನಿ ಸೇರಿದಂತೆ ಪ್ರಮುಖ ಯುರೋಪಿಯನ್ ರಾಷ್ಟ್ರಗಳು ಅಡಿಕೆ ಹಾಳೆಯಿಂದ ತಯಾರಿಸುವ ತಟ್ಟೆ, ಬೌಲ್, ಚಮಚ, ತೋಟಗಳಿಗೆ ಮಾರುಹೋಗಿದ್ದು, ಗೀತಾ ಅಮೆರಿಕಾದ ಎಫ್ ಡಿ ಎ ಹೊರ ಹಾಕಿರುವ ಈ ಸಂಶೋಧನಾ ವರದಿಯಿಂದ ಹಾಳೆ ತಟ್ಟೆಯ ಉದ್ಯಮಕ್ಕೆ ಬಹುದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ.

ಹಾಳೆ ತಟ್ಟೆಯ ಗುಣಮಟ್ಟದ ಬಗ್ಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಕಾಲೇಜು ವತಿಯಿಂದ ಅಡಿಕೆಯಲ್ಲಿನ ಕ್ಯಾನ್ಸರ್ ಕಾರಕ ಅಂಶಗಳ ಬಗ್ಗೆ ಸಂಶೋಧನೆ ನಡೆಸಿದಾಗ ಅಂತಹ ಯಾವುದೇ ಅಂಶಗಳು ಕಂಡುಬಂದಿರಲಿಲ್ಲ. ಆದರೆ ಇದೀಗ ಅಮೆರಿಕ ವಿಜ್ಞಾನಿಗಳು ಇಂತಹ ಆಘಾತಕಾರಿ ಸುದ್ದಿಯನ್ನು ಹೊರಬಿಟ್ಟಿದ್ದಾರೆ. ಇದು ಭಾರತದಲ್ಲಿನ ಹಾಳೆ ತಟ್ಟೆ ಉದ್ಯಮಕ್ಕೆ ಅಗಾಧವಾಗಿ ಪೆಟ್ಟುಕೊಟ್ಟು ನಷ್ಟಕ್ಕೆ ತಳ್ಳುವ ಸಾಧ್ಯತೆ ಹೆಚ್ಚಿದೆ. ಅಮೇರಿಕಾದಂತೆ ಎಫ್ ಡಿ ಎ ವರದಿಯನ್ನು ಇತರ ರಾಷ್ಟ್ರಗಳು ನಂಬಿದ್ದೇ ಆದಲ್ಲಿ ಹೊರದೇಶಗಳು ಭಾರತದಿಂದ ಅಡಿಕೆ ಹಾಳೆಯಿಂದ ತಯಾರಿಸಲಾದ ವಸ್ತುಗಳ ಆಮದನ್ನು ನಿರ್ಬಂಧಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಈ ಬಗ್ಗೆ ಮತ್ತೆ ಸರಿಯಾದ ಸಂಶೋಧನೆ ನಡೆದು ವರದಿಯನ್ನು ಬಹಿರಂಗಪಡಿಸುವುದು ಆರೋಗ್ಯಕರ ವಿಷಯವಾಗಿದೆ.


Post a Comment

0 Comments