ದುಬಾರಿ ದುನಿಯಾದಲ್ಲಿ ಕಾಫಿ, ಟೀ ಬೆಲೆಯೂ ಏರಿಕೆ!!

 ದುಬಾರಿ ದುನಿಯಾದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಮೊನ್ನೆಯಷ್ಟೇ ರಾಜ್ಯ ಸರಕಾರವು ನಂದಿನಿ ಹಾಲಿನ ದರವನ್ನು ಪ್ರತೀ ಲೀಟರಿಗೆ 4 ರೂಪಾಯಿ ಹೆಚ್ಚಿಸಿ ಆದೇಶ ಹೊರಡಿಸಿತ್ತು.ಈ ಹಾಲಿನ ದರ ಏರಿಕೆ ಹಿನ್ನೆಲೆಯಲ್ಲಿ ಕಾಫಿ ಟೀ ಬೆಲೆಯನ್ನು ಮೂರರಿಂದ ಐದು ರೂಪಾಯಿಗೆ ಏರಿಕೆ ಮಾಡಲಾಗಿದೆ. 
ಬೆಂಗಳೂರು ಸೇರಿದಂತೆ ಹಲವು ನಗರಗಳ ಹೋಟೆಲ್ಗಳಲ್ಲಿ ಹಾಗೂ ಅಂಗಡಿಗಳಲ್ಲಿ ಕಾಫಿ ಟೀ ದರ ಏರಿಕೆ ಮಾಡಲಾಗಿದೆ. 2, 3, 5 ರೂಪಾಯಿವರೆಗೆ ದರ ಏರಿಕೆ ಮಾಡಲಾಗಿದ್ದು, ಈ ಬಗ್ಗೆ ಹೋಟೆಲ್ ಮಾಲೀಕರು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೂ ಬಹುತೇಕ ಹೋಟೆಲ್ಗಳಲ್ಲಿ ಕನಿಷ್ಠ ಎರಡು ರೂಪಾಯಿಯಿಂದ ಐದು ರೂಪಾಯಿವರೆಗೆ ದರ ಹೆಚ್ಚಳ ಮಾಡಿ ಗ್ರಾಹಕರಿಂದ ಹೆಚ್ಚುವರಿ ದರ ವಸೂಲಿ ಮಾಡುತ್ತಿದ್ದಾರೆ.

ನಂದಿನಿ ಹಾಲಿನ ದರ ಏರಿಕೆ ಆಗಿರುವುದರಿಂದ ಅನಿವಾರ್ಯವಾಗಿ ಕಾಫಿ ಮತ್ತು ಚಹಾ ದರ ಕೂಡ ಹೆಚ್ಚಳ ಮಾಡಬೇಕಾಗುತ್ತದೆ. ಅದೇ ರೀತಿ ಹಾಲಿನಿಂದ ತಯಾರಿಸುವಂತಹ ಇತರ ಉತ್ಪನ್ನಗಳ ದರ ಏರಿಕೆ ಮಾಡಬೇಕಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕೆಲ ದಿನಗಳ ಹಿಂದೆಯೇ ಹೇಳಿಕೆ ನೀಡಿದ್ದರು.

ಕಾಫಿ ಟೀ ದರ ಹೆಚ್ಚಳ ಮಾತ್ರವಲ್ಲದೆ ಹಾಲಿನಿಂದ ತಯಾರಿಸುವಂತಹ ಇತರ ಉತ್ಪನ್ನಗಳಾದ ಪನ್ನೀರ್, ಪೇಡ ಮುಂತಾದವುಗಳ ಬೆಲೆ ಕೂಡ ಹೆಚ್ಚಳವಾಗುವ ನಿರೀಕ್ಷೆಯಿದೆ. ಹಾಲಿನ ದರ ಏರಿಕೆಯಿಂದ ಅವುಗಳಿಂದ ತಯಾರಿಸುವಂತಹ ಉತ್ಪನ್ನಗಳ ತಯಾರಿಕಾ ವೆಚ್ಚವೂ ಹೆಚ್ಚಾಗುತ್ತದೆ. ಆದ್ದರಿಂದ ದರ ಏರಿಕೆ ಮಾಡಲೇಬೇಕಾಗುತ್ತದೆ ಎಂಬುದು ಹೋಟೆಲ್ ಮಾಲೀಕರ ಅಭಿಪ್ರಾಯವಾಗಿದೆ. 

ನಂದಿನಿ ಹಾಲಿನ ದರ ಮಾತ್ರವಲ್ಲದೆ ಕಾಫಿ ಪುಡಿಯ ದರವೂ ಹೆಚ್ಚಳವಾದ ಕಾರಣ ಕಾಫಿ ದರ 5 ರೂಪಾಯಿ ಹೆಚ್ಚಳ ಮಾಡದೆ ಬೇರೆ ದಾರಿಯೇ ಇಲ್ಲ ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ. ದಿನೇ ದಿನೇ ಒಂದಲ್ಲ ಒಂದು ವಸ್ತುವಿನ ಬೆಲೆ ಏರಿಕೆಯಾಗುತ್ತಲೇ ಇದ್ದು ಜನ ಸಾಮಾನ್ಯರ ಮೇಲೆ ಇದು ಅಗಾಧ ಭಾರವನ್ನು ಹಾಕುತ್ತಿದೆ.


Post a Comment

0 Comments