ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡಕ್ಕೆ ಬಹುಮಾನ ಘೋಷಿಸಿದ ಬಿಸಿಸಿಐ!!!

 ಐಸಿಸಿ ಚಾಂಪಿಯನ್ ಟ್ರೋಫಿ 2025
 ಗೆದ್ದ ಭಾರತ ತಂಡದ ಆಟಗಾರರಿಗೆ ಬಿಸಿಸಿಐ ಭರ್ಜರಿ ನಗದು ಬಹುಮಾನ ಘೋಷಣೆ ಮಾಡಿದೆ. ಹೌದು. ಭಾರತೀಯ ತಂಡಕ್ಕೆ ಬಿಸಿಸಿಐ ಘೋಷಣೆ ಮಾಡಿರುವ ನಗದು ಬಹುಮಾನದ ಮೊತ್ತ ಬರೋಬ್ಬರಿ 58 ಕೋಟಿ ರೂಪಾಯಿ ಆಗಿದೆ. 
ರೋಹಿತ್ ಶರ್ಮಾ ಸಾರಥ್ಯದ ಭಾರತೀಯ ಕ್ರಿಕೆಟ್ ತಂಡ 2025ರ ಐಸಿಸಿ ಚಾಂಪಿಯನ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ಈ ಪಂದ್ಯವನ್ನು ಗೆದ್ದು ಜಯಶಾಲಿಯಾಗಿರುವ ಭಾರತೀಯ ಕ್ರಿಕೆಟ್ ತಂಡದ ಅಮೋಘ ಸಾಧನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ 58 ಕೋಟಿ ರೂಪಾಯಿಗಳ ಬೃಹತ್ ನಗದು ಬಹುಮಾನವನ್ನು ಘೋಷಿಸಿದೆ.

ಈ ನಗದು ಬಹುಮಾನ ಘೋಷಣೆಯ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಬಿಸಿಸಿಐ, "ರೋಹಿತ್ ಶರ್ಮಾ ಅವರ ಸಮರ್ಥ ಮತ್ತು ಚಾಣಾಕ್ಷತನದ ನಾಯಕತ್ವದಲ್ಲಿ ಭಾರತವು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸಿತು. ಫೈನಲ್ ತಲುಪುವ ಹಾದಿಯಲ್ಲಿ ನಾಲ್ಕು ಅದ್ಭುತ ಗೆಲುವುಗಳನ್ನು ದಾಖಲಿಸಿತು. ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 6 ವಿಕೆಟ್ಗಳ ಗೆಲುವಿನೊಂದಿಗೆ ತನ್ನ ಆಟವನ್ನು ಆರಂಭಿಸಿತು. ನಂತರ ಪಾಕಿಸ್ತಾನ ವಿರುದ್ಧ ಆರು ವಿಕೆಟ್ಗಳ ಅಮೋಘ ಜಯ ಸಾಧಿಸಿತು.
 ಅವರು ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯವನ್ನು 4 ವಿಕೆಟ್ಗಳಿಂದ ಸೋಲಿಸುವ ಮೊದಲು ನ್ಯೂಜಿಲ್ಯಾಂಡ್ ವಿರುದ್ಧ 44 ರನ್ಗಳ ಜಯದೊಂದಿಗೆ ತಮ್ಮ ಆವೇಗವನ್ನು ಮುಂದುವರಿಸಿದರು" ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ದುಬೈನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದ ಭಾರತೀಯ ಕ್ರಿಕೆಟ್ ತಂಡ 49 ಓವರ್ ಗಳಲ್ಲಿ ನಿಗದಿತ ರನ್ ಚೇಸ್ ಮಾಡಿ ನಾಲ್ಕು ವಿಕೆಟ್ಗಳ ಜಯ ಸಾಧಿಸುವ ಮೂಲಕ ಮೂರನೇ ಬಾರಿ ಚಾಂಪಿಯನ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಬಿಸಿಸಿಐ ಘೋಷಿಸಿರುವ 58 ಕೋಟಿ ರೂಪಾಯಿ ನಗದು ಬಹುಮಾನವು ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಹಂಚಿಕೆಯಾಗಲಿದೆ. ಕಳೆದ ವರ್ಷ 2024ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತೀಯ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿತ್ತು.


Post a Comment

0 Comments